ಸೋಮವಾರಪೇಟೆ,ಫೆ.12: ಇಲ್ಲಿನ ಒಕ್ಕಲಿಗರ ಯುವ ವೇದಿಕೆ ಮತ್ತು ರಾಜ್ಯ ಹಾಗೂ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಯಶಸ್ಸು ಕಂಡ ಹಿನ್ನೆಲೆ, ಮುಂದಿನ ವರ್ಷ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ ಆಯೋಜಿಸಲು ಯುವ ವೇದಿಕೆ ತೀರ್ಮಾನಿಸಿದೆ.

3ನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ನಿರೀಕ್ಷೆಗೂ ಮೀರಿ ಕ್ರೀಡಾಭಿಮಾನಿಗಳ ಸ್ಪಂದನ ದೊರಕಿದ್ದು, ಇದರೊಂದಿಗೆ ಅರ್ಜುನ ಪ್ರಶಸ್ತಿ ವಿಜೇತ, ಭಾರತ ಕಬಡ್ಡಿ ತಂಡದ ಮಾಜಿ ನಾಯಕ, ಅಮೆಚೂರ್ ಕಬಡ್ಡಿ ಅಸೋಸಿ ಯೇಷನ್‍ನ ಪ್ರಮುಖರಾದ ಬಿ.ಸಿ. ರಮೇಶ್ ಅವರು, ಮುಂದಿನ ಬಾರಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಆಯೋಜಿಸಿದರೆ ಸಂಪೂರ್ಣ ಸಹಕಾರ ನೀಡುವ ಭರವಸೆ ಕೊಟ್ಟಿರು ವದರಿಂದ ಹೊಸ ಹುಮ್ಮಸ್ಸು ಪಡೆದಿರುವ ಯುವ ವೇದಿಕೆಯ ಪದಾಧಿಕಾರಿಗಳು, ಮುಂದಿನ ಬಾರಿಗೆ ರಾಷ್ಟ್ರೀಯ ಮಟ್ಟದ ಪಂದ್ಯಾಟ ನಡೆಸುವ ಬಗ್ಗೆ ಚಿಂತನೆ ಹರಿಸುತ್ತಿದ್ದಾರೆ.

ಎರಡು ದಿನಗಳ ಕಾಲ ನಡೆದ ಕಬಡ್ಡಿ ಹಬ್ಬದಲ್ಲಿ ಜಿಲ್ಲೆಯ ವಿವಿಧೆಡೆ ಸೇರಿದಂತೆ ನೆರೆಯ ಜಿಲ್ಲೆಯಿಂದಲೂ ಕ್ರೀಡಾಭಿಮಾನಿಗಳು ಆಗಮಿಸಿದ್ದು, ಕಬಡ್ಡಿ ಆಟಗಾರರಿಗೆ ಹೆಚ್ಚಿನ ಪ್ರೋತ್ಸಾಹ ತುಂಬಿದ್ದಾರೆ. ಇದರೊಂದಿಗೆ ಪ್ರೊ ಕಬಡ್ಡಿಯಲ್ಲಿ ಮಿಂಚುತ್ತಿರುವ ಪ್ರಮುಖ 12 ಆಟಗಾರರು ಪಂದ್ಯಾಟದಲ್ಲಿ ಭಾಗಿಯಾಗಿದ್ದುದು, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಚೈತನ್ಯ ತುಂಬುವಲ್ಲಿ ಯಶಕಂಡಿದೆ.

ಇದೇ ಪ್ರಥಮ ಬಾರಿಗೆ ಪ್ರೊ ಕಬಡ್ಡಿ ಮಾದರಿಯಲ್ಲಿ ಮ್ಯಾಟ್ ಅಳವಡಿಸಿ, ಹೊನಲು ಬೆಳಕಿನ ಪಂದ್ಯಾಟ ಆಯೋಜಿಸಿದ್ದು, 20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕಬಡ್ಡಿ ಹಬ್ಬವನ್ನು ಅದ್ಧೂರಿಯಾಗಿ ನಡೆಸ ಲಾಗಿದೆ. ಪಂದ್ಯಾಟದ ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರಮುಖರೂ ಸಹ ಪಂದ್ಯಾವಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವದರಿಂದ ಒಕ್ಕಲಿಗ ಯುವ ವೇದಿಕೆಯ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪಂದ್ಯಾಟದ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್ ಅವರು, ವೇದಿಕೆಯ ಸದಸ್ಯರು, ದಾನಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಅಚ್ಚುಕಟ್ಟಾಗಿ ಅದ್ಧೂರಿ ಕಬಡ್ಡಿ ಹಬ್ಬ ನಡೆದಿದೆ ಎಂದು ಅಭಿಪ್ರಾಯಿಸಿದರು.

ರಾಜ್ಯಮಟ್ಟದ ಆಟಗಾರರೊಂದಿಗೆ ಸ್ಥಳೀಯ ಕ್ರೀಡಾಪಟುಗಳಿಗೆ ಅವಕಾಶ ನೀಡಿದ್ದರಿಂದ ಕಬಡ್ಡಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ದೊರೆತಂತಾಗಿದೆ. ಸ್ಥಳೀಯ ಕಬಡ್ಡಿ ಪ್ರತಿಭೆಗಳ ಗುರುತಿಸುವಿಕೆಗೂ ಇದೊಂದು ವೇದಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಕಬಡ್ಡಿ ಆಟಗಾರರು ಪ್ರೊ ಕಬಡ್ಡಿಯಲ್ಲಿ ಮಿಂಚುವಂತಾಗಲಿ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಇದರೊಂದಿಗೆ ಆದಿಚುಂಚನಗಿರಿ ಹಾಸನ ಶಾಖಾ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳೂ ಸಹ ಒಂದೊಂದು ಗ್ರಾಮದಲ್ಲಿ ಮೆಡಿಕಲ್ ವ್ಯಾನ್‍ನೊಂದಿಗೆ ಮೆಡಿಕಲ್ ಕ್ಯಾಂಪ್ ಆಯೋಜಿಸಲು ನಿರ್ದೇಶನ ನೀಡಿದ್ದು, ಮಠದ ಅಧೀನದಲ್ಲಿರುವ ಆಸ್ಪತ್ರೆಗಳಿಂದ ವೈದ್ಯರು ಆಗಮಿಸಿ ತಪಾಸಣೆ ನಡೆಸಲಿದ್ದಾರೆ. ಪ್ರತಿ ತಿಂಗಳೂ ಒಂದೊಂದು ಗ್ರಾಮದಲ್ಲಿ ಮೊಬೈಲ್ ಕ್ಯಾಂಪ್ ನಡೆಯಲಿದೆ ಎಂದು ದೀಪಕ್ ತಿಳಿಸಿದರು.

ಇದರಿಂದ ಗ್ರಾಮೀಣ ಭಾಗದ ಮಂದಿಗೆ ಹೆಚ್ಚಿನ ಅನುಕೂಲ ದೊರೆಯಲಿದ್ದು, ತಮ್ಮ ಗ್ರಾಮದಲ್ಲಿಯೇ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಬಹುದಾಗಿದೆ. ವೇದಿಕೆಯ ಸದಸ್ಯರು ಶಿಬಿರದ ಉಸ್ತುವಾರಿ ಹೊರಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ವೇದಿಕೆಯ ಖಜಾಂಚಿ ಪೃಥ್ವಿ, ನಿರ್ದೇಶಕರಾದ ಮಹೇಶ್ ತಿಮ್ಮಯ್ಯ, ದಯಾನಂದ್ ಅವರುಗಳು ಉಪಸ್ಥಿತರಿದ್ದರು.