ವೀರಾಜಪೇಟೆ, ಫೆ. 12: ಕೊಡಗಿನಲ್ಲಿ ಕಾಫಿ ತೋಟ ವಿಸ್ತರಣೆ ಮಾಡಲು ಸ್ಥಳವಕಾಶ ಇಲ್ಲ. ಆದರಿಂದ ಇರುವ ತೋಟದಲ್ಲಿ ವೈಜ್ಞಾನಿಕತೆಯ ಮೂಲಕ ಉತ್ಪಾದನೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬೆಳೆಗಾರರು ಕಾಳಜಿ ವೈಹಿಸಬೇಕು ಎಂದು ವೀರಾಜಪೇಟೆ ಕಾಫಿ ಮಂಡಳಿಯ ಉಪನಿರ್ದೇಶಕ ಸತೀಶ್ ಚಂದ್ರ ಹೇಳಿದರು.

ಅರಮೇರಿ ಗ್ರಾಮದ ಕಾವೇರಿ ಸಂಘ ಹಾಗೂ ಕಾಫಿ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಅಯೋಜಿಸಲಾಗಿದ್ದ ಕಾಫಿ ಬೆಳೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಅಂದು ನಾವು ಕಾಫಿಯ ವಹಿವಾಟು ನಡೆಸುತ್ತಿದ್ದೆವು, ಆಗ ಕಾಫಿ ಮಂಡಳಿಯು ದೊಡ್ಡ ಸಂಸ್ಥೆಯಾಗಿತ್ತು. ಆನಂತರ ಜಾಗತೀಕರಣದ ಬಳಿಕ ಬೆಳೆಗಾರರೆ ಅದರ ವಹಿವಾಟು ನಡೆಸಲು ಆರಂಭಿಸಿದ್ದಾರೆ. ಆ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಇದ್ದ ಮಂಡಳಿ ಉದ್ಯೋಗಸ್ಥರ ಸಂಖ್ಯೆ ಕಡಿಮೆ ಆಯಿತು. ಈಗ ಕೇಂದ್ರ ಮತ್ತೆ ಇದನ್ನು ಸಣ್ಣದಾಗಿಸುತ್ತಿದೆ ಈಗ ಸುಮಾರು 800 ಜನರಲ್ಲಿ 500 ಜನ ಸಿಬ್ಬಂದಿ ಇರುವ ಅಂದಾಜಿದೆ. ಈ ಮೂಲಕ ಬೆಳೆಗಾರರ ಸಂರ್ಪಕ ಕಡಿತವಾಗಲಿದೆಯೇ ಎನ್ನಿಸುತ್ತಿದೆ. ಸುಮಾರು 40 ಲಕ್ಷ ಹೆ.ನಲ್ಲಿ ಕಾಫಿ ಬೆಳೆಯುತ್ತಿದ್ದರೂ ಉತ್ಪಾದನೆ ಕಡಿಮೆ ಎನ್ನಬೇಕು. ಇದೀಗ ಅರಬಿಕ ಕಾಫಿ ತೋಟ ಮರೆಯಾಗುತ್ತಿದ್ದು ರೋಬಸ್ಟಾ ಕಾಫಿ ಬೆಳೆ ಹೆಚ್ಚಿದ್ದು ಅರೆಬೀಕಾ ಶೇ. 30 ರಷ್ಟು ಜಾಗದಲ್ಲಿ ಮಾತ್ರ ಉಳಿದಿದೆ. ಇಂದು ಯುವ ಜನತೆ ಕಾಫಿ ಮೇಲೆ ಒಲವು ಹೆಚ್ಚಿಸಿಕೊಂಡು ಸೇವನೆ ಮಾಡುತ್ತಿರುವುದು ಹಾಗೂ ರೋಬಸ್ಟಾ ಕಾಫಿಗೂ ಬೇಡಿಕೆ ಇರುವುದರಿಂದ ಬೇಡಿಕೆಗೆ ತೊಂದರೆ ಇಲ್ಲ ಎಂದು ಸತೀಶ್ ಚಂದ್ರ ಹೇಳಿದರು.

ಚೆಟ್ಟಳ್ಳಿಯ ಕೃಷಿ ಸಂಶೋಧನ ಕೇಂದ್ರದ ವಿಜ್ಞಾನಿ ಡಾ. ಶಿವಪ್ರಸಾದ್ ತೋಟಕ್ಕೆ ಸುಣ್ಣ ಹಾಗೂ ರಸಗೊಬ್ಬರ ಬಳಕೆ, ಡಾ. ಗೋವಿಂದಪ್ಪ ವ್ಯವಸಾಯ ಹಾಗೂ ಅದರಲ್ಲಿ ನೀರಿನ ಬಳಕೆ, ಡಾ. ಶಿವಲಿಂಗು ಸಸ್ಯ ಸಂವರ್ಧನೆ, ರಂಜಿತ್‍ಕುಮಾರ್, ಕ್ರಿಮಿಕೀಟದ ನಿಯಂತ್ರಣ, ಗೋಣಿಕೊಪ್ಪ ಕೆವಿಕೆಯ ವಿಜ್ಞಾನಿ ಡಾ. ಪ್ರಭಾಕರ್ ಕಾಳುಮೆಣಸು ಬೆಳೆ ಹಾಗೂ ಹವಾಗುಣದ ಕುರಿತ ಉಪನ್ಯಾಸಗಳನ್ನು ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳಿಯ ಕಾಫಿ ಬೆಳೆಗಾರ ಉದಿಯಂಡ ಚೆಂಗಪ್ಪ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾವೇರಿ ಸಂಘದ ಉಪಾಧ್ಯಕ್ಷ ಪೂಳಂಡ ಗಣಪತಿ, ಕಾರ್ಯದರ್ಶಿ ಪೂಳಂಡ ಮಾಚಯ್ಯ, ಸಂಘದ ಸದಸ್ಯರಾದ ಸೋಮಯಂಡ ರೇಷ್ಮ, ಕಾಫಿ ಮಂಡಳಿಯ ವಿಸ್ತರಣಾ ಅಧಿಕಾರಿ ಎಸ್. ಮಿಥುನ್‍ಲಾಲ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.