ವಿಶ್ವ ಬ್ಯಾಡ್ಮಿಂಟನ್ ಕ್ರೀಡಾಕ್ಷೇತ್ರದಲ್ಲಿ ಭಾರತ ಭಾರೀ ಹೆಸರು ಮಾಡಿದೆ. ಗೋಪಿಚಂದ್, ಸೈಯದ್ ಮೋದಿ ಮುಂತಾದ ಆಟಗಾರರು ಪುರುಷರ ವಿಭಾಗದಲ್ಲಿ ಈ ಹಿಂದೆ ಹೆಸರು ಮಾಡಿದ್ದಾರೆ. ಸಿಂಧು ನೆಹ್ವಾಲ್ ಮುಂತಾದವರು ಇದೀಗ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರಿ ಹೆಸರು ಮಾಡಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಿಂಧು, ನೆಹ್ವಾಲ್‍ರಂತೂ ವಿಶ್ವ ಬ್ಯಾಡ್ಮಿಂಟನ್‍ನಲ್ಲಿ ಭಾರೀ ಕೀರ್ತಿಯನ್ನು ಭಾರತಕ್ಕೆ ತಂದಿದ್ದಾರೆ. ಸಿಂಗಲ್ಸ್ ಹಾಗೂ ಡಬಲ್ಸ್ ಎರಡು ವಿಭಾಗಗಳಲ್ಲೂ ಭಾರತ ಬಲವಾದ ತಂಡವನ್ನೇ ಹೊಂದಿದೆ. ಇಂಡೋನೇಷ್ಯಾ, ಚೀನಾ, ಜಪಾನ್ ಮುಂತಾದ ರಾಷ್ಟ್ರಗಳ ಹೆಸರಾಂತ ಆಟಗಾರರು ಭಾರತ ತಂಡದ ಆಟಗಾರರಿಗೆ ಅಂಜುತ್ತಲೇ ಆಡುತ್ತಾರೆ. ಅದಕ್ಕೆಲ್ಲಾ ಕಾರಣ ಭಾರತ ತಂಡದ ಆಟಗಾರರ ಸಾಧನೆಗಳು. ಮಹಿಳೆಯರ ವಿಭಾಗದಲ್ಲಿ ಭಾರತ ಬಲವಾದ ತಂಡವಾಗಿರುವಂತೆ ಪುರುಷರ ವಿಭಾಗದಲ್ಲೂ ಇದೀಗ ಪ್ರಬಲವಾಗುವತ್ತ ಸಾಗಿದೆ. ಇದಕ್ಕೆಲ್ಲಾ ಕಾರಣ ಯುವ ಪಡೆ ಇದೀಗ ಕಿಡಂಬಿ ಶ್ರೀಕಾಂತ್ ಭಾರತದ ಪರ ಆಡಿ ಹಲವಾರು ಪ್ರಶಸ್ತಿಗಳನ್ನು ಗೆದ್ದು, ಅಮೋಘ ಸಾಧನೆ ಮಾಡಿದ್ದಾರೆ.
ಭಾರತದ ಖ್ಯಾತ ಬ್ಯಾಡ್ಮಿಂಟನ್ ಕ್ರೀಡಾಪಟುಗಳ ಪೈಕಿ ಅದ್ಭುತ ಪ್ರದರ್ಶನ ನೀಡುತ್ತಿರುವ ಯುವ ಆಟಗಾರ ಕಿಡಂಬಿ ಶ್ರೀಕಾಂತ್ ಪ್ರಸ್ತುತ ವಿಶ್ವ ರ್ಯಾಕಿಂಗ್‍ನಲ್ಲಿ ಎಂಟನೆ ಸ್ಥಾನದಲ್ಲಿದ್ದು, ಮೇಲಕ್ಕೇರುವ ಎಲ್ಲಾ ಅವಕಾಶಗಳಿವೆ. 2014ರಲ್ಲಿ ಚೀನಾ ಓಪನ್ ಸೂಪರ್‍ಸೀರಿಸ್‍ನ ಅಂತಿಮ ಪಂದ್ಯದಲ್ಲಿ ಚಾಂಪಿಯನ್ ವಿಶ್ವಖ್ಯಾತ ಲಿನ್‍ಡ್ಯಾನ್‍ರನ್ನು ಸೋಲಿಸಿ ಪ್ರೀಮಿಯರ್ ಪುರುಷರ ಪ್ರಶಸ್ತಿಯನ್ನು ಗೆದ್ದು ಭಾರತದ ಪಾಲಿಗೆ ಮೊದಲ ಆಟಗಾರರಾಗಿ ಇತಿಹಾಸ ಸೃಷ್ಟಿಸಿದರು.
ಕಿಡಂಬಿ ಶ್ರೀಕಾಂತ್ ಅವರ ಕ್ರೀಡಾ ಸಾಧನೆಗಳು : ಕಿಡಂಬಿ ಶ್ರೀಕಾಂತ್ ಆಂಧ್ರಪ್ರದೇಶ ರಾಜ್ಯದ ರಾವುಲಪಾಲೆಮ್ ಎಂಬಲ್ಲಿ 1993ರ ಫೆಬ್ರವರಿ 7 ರಂದು ಕೆ.ವಿ.ಎಸ್. ಕೃಷ್ಣ ಮತ್ತು ರಾಧ ದಂಪತಿಯ ಮಗನಾಗಿ ಜನಿಸಿದರು. ಶ್ರೀಕಾಂತ್‍ರವರ ಹಿರಿಯ ಸಹೋದರ ನಂದಗೋಪಾಲ್ ಕೂಡ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ.
2011ರಲ್ಲಿ ಕಾಮನ್‍ವೆಲ್ತ್ ಯೂತ್ ಗೇಮ್ಸ್‍ನಲ್ಲಿ ಮಿಶ್ರ ಡಬಲ್ಸ್‍ನಲ್ಲಿ ಬೆಳ್ಳಿ ಮತ್ತು ಹುಡುಗರ ಡಬಲ್ಸ್‍ನಲ್ಲಿ ಕಂಚಿನ ಪದಕ ಪಡೆದುಕೊಂಡರು. ಹಾಗೂ ಲಕ್ನೋದಲ್ಲಿ ಜರುಗಿದ ಏಷ್ಯನ್ ಜೂನಿಯರ್ ಚಾಂಪಿಯನ್‍ಶಿಪ್ ನಲ್ಲಿ ಮಿಶ್ರ ತಂಡದಲ್ಲಿ ಕಂಚು ಗೆದ್ದು ಕೊಂಡರು.
2013ರಲ್ಲಿ ಥೈಲ್ಯಾಂಡ್ ಓಪನ್ ಗ್ರಾಂಡ್ ಪ್ರಿಕ್ಸ್‍ಗೋಲ್ಡ್ ಪ್ರಶಸ್ತಿಯನ್ನು ಗೆದ್ದು, 2016ರಲ್ಲಿ ಗುವಾಹಟಿಯಲ್ಲಿ ಜರುಗಿದ ಸೌತ್ ಏಷ್ಯನ್ ಗೇಮ್ಸ್‍ನಲ್ಲಿ ಪುರುಷರ ಸಿಂಗಲ್ಸ್ ಮತ್ತು ಪುರುಷರ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. 2016ರಲ್ಲಿ ಸೈಯದ್ ಮೋದಿ ಇಂಟರ್‍ನ್ಯಾಶನಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಗ್ರಾಂಡ್‍ಪ್ರಿಕ್ಸ್ ಗೋಲ್ಡ್ ಪ್ರಶಸ್ತಿಯನ್ನು ಬಾಚಿಕೊಂಡರು.
2014ರಲ್ಲಿ ಚೈನಾ ಓಪನ್ ಸೀರಿಸ್‍ನಲ್ಲಿ ಐದು ವಿಶ್ವಚಾಂಪಿಯನ್ ಪಟ್ಟ ಮತ್ತು ಎರಡು ಬಾರಿ ಒಲಂಪಿಕ್ಸ್ ಪದಕ, ವಿಶ್ವ ಚಾಂಪಿಯನ್‍ರಾದ ಲಿನ್‍ಡ್ಯಾನ್‍ರನ್ನು ಸೋಲಿಸಿ, ದೈತ್ಯ ಸಂಹಾರ ಮಾಡಿ ವಿಶ್ವ ಪ್ರಸಿದ್ಧಿಯನ್ನು ಗಳಿಸಿಕೊಂಡರು. ಮಾತ್ರವಲ್ಲ, ಭಾರತೀಯರು ಷಟಲ್ ಬ್ಯಾಡ್ಮಿಂಟನ್‍ನಲ್ಲಿ ಸಾಧನೆ ಮಾಡಬಲ್ಲರು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿದರು.
2015ರಲ್ಲಿ ಸ್ವಿಸ್ ಓಪನ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಪ್ರಶಸ್ತಿಯನ್ನು ಸಾಹಸದಿಂದಲೇ ಗೆದ್ದುಕೊಂಡು, ಸ್ವಿಸ್ ಓಪನ್ ಗ್ರಾಂಡ್‍ಪಿಕ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಪುರುಷ ಬ್ಯಾಡ್ಮಿಂಟನ್ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದೇ ವರ್ಷ ಇಂಡಿಯಾ ಓಪನ್ ಸೀರಿಸ್ ಪ್ರಶಸ್ತಿಯನ್ನು ಪಡೆದುಕೊಂಡರು.
2017ರಲ್ಲಿ ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ಪ್ರಶಸ್ತಿ, ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದುಕೊಂಡರು. ಹಾಗೂ ಸಿಂಗಾಪೂರ್ ಓಪನ್ ಸೂಪರ್ ಸೀರಿಸ್‍ನಲ್ಲಿ ಭಾರತೀಯ ಆಟಗಾರ ಸಾಯ್‍ಪ್ರಣೀತ್ ವಿರುದ್ಧ ಸೋಲನುಭವಿಸಿ ರನ್ನರ್‍ಅಪ್ ಪ್ರಶಸ್ತಿ ಪಡೆದುಕೊಂಡರು. ಕಿಡಂಬಿಯವರು ಪ್ರಸ್ತುತ ಹೈದರಾಬಾದಿನಲ್ಲಿರುವ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇನ್ನು ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿದೆ. ವಿಶ್ವ ಅಖಾಡದಲ್ಲಿ ತಮ್ಮ ಛಾಪನ್ನು ಬಲವಾಗಿ ಒತ್ತಿದ್ದಾರೆ. ಬೆಂಗಳೂರಿನ ಗೋ ಸ್ಫೋಟ್ರ್ಸ್ ಫೌಂಡೇಶನ್‍ರವರು ಶ್ರೀಕಾಂತ್‍ರ ತರಬೇತಿಗೆ ಸಹಾಯ ಮಾಡುತ್ತಿದ್ದಾರೆ. ಮಾತ್ರವಲ್ಲ ಲಿ-ಲೀಗ್ ಸಂಸ್ಥೆಯಿಂದ ಪ್ರಾಯೋಜಕತ್ವ ವನ್ನು ಪಡೆಯುತ್ತಿದ್ದಾರೆ. ಮುಂದೆ ಒಲಂಪಿಕ್ಸ್‍ನಲ್ಲಿ ಭಾರತಕ್ಕೆ ಪದಕ ತರುವಂತಾಗಲಿ, ವಿಶ್ವಚಾಂಪಿಯನ್ ಆಗಿ ಮೆರೆಯಲಿ, ಭಾರತಕ್ಕೆ ಮತ್ತಷ್ಟು ಕೀರ್ತಿ ತರಲೆಂದು ಹಾರೈಸೋಣ. -ಹರೀಶ್‍ಸರಳಾಯ,
ಮಡಿಕೇರಿ.