ಜನರಿಗೆ ತೊಂದರೆ ನೀಡದಂತೆ ಸಿಎಂ ಮನವಿ
ಬೆಂಗಳೂರು, ಫೆ. 12: ಕರ್ನಾಟಕ ಬಂದ್ ವಿಚಾರದಲ್ಲಿ ರಾಜಕಾರಣ ಮಾಡುವುದು ಬಿಟ್ಟು ಬಿಡಿ. ಕನ್ನಡ ಪರ ಸಂಘಟನೆಗಳು ಸರೋಜಿನಿ ಮಹಿಷಿ ವರದಿಯ ಬಗ್ಗೆ ತಮ್ಮ ಮನೆಗೆ ಬಂದು ಚರ್ಚಿಸಲಿ. ತಾವು ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ. ಆದರೆ ಬಂದ್ ಮಾಡಿ, ಜನಸಾಮಾನ್ಯರಿಗೆ ತೊಂದರೆ ಕೊಡುವುದು ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ ಶಕ್ತಿಭವನದಲ್ಲಿ ಸುದ್ದಿಗಾರರೊಂದಿಗೆ ಕನ್ನಡಪರ ಸಂಘಟನೆಗಳು ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‍ನವರು ಬಂದ್‍ಗೆ ಬೆಂಬಲ ನೀಡಿದ್ದಾರೆ. ಆದರೆ ಅವರು ಆಡಳಿತ ಪಕ್ಷದಲ್ಲಿ ಇದ್ದಾಗ ಏನು ಮಾಡಿದ್ದರು, ವಿರೋಧ ಪಕ್ಷದಲ್ಲಿ ಕುಳಿತು ಬಂದ್ ಬೆಂಬಲಿಸುವ ಬದಲು, ಆಡಳಿತ ಪಕ್ಷದಲ್ಲಿದ್ದಾಗ ಸಮಸ್ಯೆ ಬಗೆಹರಿಸಬಹುದಿತ್ತು ಎಂದು ಟಾಂಗ್ ನೀಡಿದರು.
ಒತ್ತಾಯಪೂರ್ವಕವಾಗಿ ಬಂದ್ ಇಲ್ಲ
ಬೆಂಗಳೂರು, ಫೆ. 12: ರಾಜ್ಯದ ಖಾಸಗಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ಕೆಲವು ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಪ್ರತಿಭಟನಾಕಾರರು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸುವಂತಿಲ್ಲ ಎಂದು ನಗರ ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಕನ್ನಡಪರ ಸಂಘಟನೆಗಳು, ವಾಹನ ಚಾಲಕರ ಸಂಘ, ರೈತರ ಸಂಘಟನೆಗಳು, ನೇಕಾರರ ಸಂಘ, ಆಟೋ ಚಾಲಕರ ಸಂಘ ಸೇರಿದಂತೆ 600ಕ್ಕೂ ಹೆಚ್ಚು ಸಂಘಟನೆಗಳು ನಾಳೆ ಬಂದ್‍ಗೆ ಬೆಂಬಲ ನೀಡಿವೆ. ಆದರೆ ಈ ಸಂಬಂಧ ಅನುಮತಿ ಕೇಳಿ ಯಾವುದೇ ಸಂಘಟನೆ ನಮಗೆ ಮನವಿ ಸಲ್ಲಿಸಿಲ್ಲ. ಈ ಹಿನ್ನೆಲೆ ನಗರದ ಟೌನ್ ಹಾಲ್ ಬಳಿ ಹಾಗೂ ರೈಲ್ವೆ ನಿಲ್ದಾಣ ಬಳಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ. ಅಲ್ಲದೇ, ಯಾವುದೇ ಅಹಿತಕರ ಘಟನೆ ನಡೆದರೆ ಅದರ ಸಂಪೂರ್ಣ ಹೊಣೆಯನ್ನು ಬಂದ್ ಮಾಡುವವರೇ ಹೊರಬೇಕು. ಸಾರ್ವಜನಿಕರಿಗೆ ತೊಂದರೆ ಕೊಡುವಂತಿಲ್ಲ ಹಾಗೂ ಯಾರಿಂದಲೂ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸು ವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ನಿಯಮ ಮೀರಿ ಬಂದ್ ಮಾಡಿಸಿದರೇ ಶಿಸ್ತು ಕ್ರಮ ಜರುಗಿಸುವುದಾಗಿ ಆಯುಕ್ತರು ತಿಳಿಸಿದ್ದಾರೆ.
ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ
ನವದೆಹಲಿ ಫೆ. 12: ಗಗನಕ್ಕೇರಿದ್ದ ತರಕಾರಿ ಮತ್ತು ಈರುಳ್ಳಿ ಬೆಲೆ ಇಳಿಯುತ್ತಿದ್ದಂತೆ ಗ್ರಾಹಕರಿಗೆ ಇದೀಗ ಮತ್ತೊಂದು ಹೊಡೆತ ಬಿದ್ದಿದ್ದು, ಅಡುಗೆ ಅನಿಲ ಸಿಲಿಂಡರ್ (ಎಲ್‍ಪಿಜಿ) ಬೆಲೆ ಭಾರೀ ಹೆಚ್ಚಳವಾಗಿದೆ. ಎಲ್‍ಪಿಜಿ ಸಿಲಿಂಡರ್‍ಗಳು ಸರಾಸರಿ ಶೇ. 20 ರಷ್ಟು ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ದೇಶದ ಎಲ್ಲ ಮೆಟ್ರೋ ನಗರಗಳಲ್ಲಿ ಇಂದಿ ನಿಂದಲೇ ಸಬ್ಸಿಡಿ ರಹಿತ ಸಿಲಿಂಡರ್‍ಗಳ ಬೆಲೆ ಭಾರೀ ಏರಿಕೆಯಾಗಲಿದೆ. ಇದಕ್ಕೂ ಮೊದಲು ಗ್ಯಾಸ್ ಸಿಲಿಂಡರ್‍ಗಳ ಬೆಲೆಯಲ್ಲಿ ರೂ. 19 ಏರಿಕೆಯಾಗಿತ್ತು. ಇದೀಗ ಮತ್ತೆ ಹೆಚ್ಚಳವಾಗಿರುವ ಸಿಲಿಂಡರ್ ಬೆಲೆಯಿಂದ ಗ್ರಾಹಕರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಒಟ್ಟಾರೆ ಶೇ. 20 ರಷ್ಟು ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆ ಏರಿಕೆಯಾದಂತಾಗಿದೆ. ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆ ಮೆಟ್ರೋ ನಗರಗಳಲ್ಲಿ ಹೆಚ್ಚಳವಾಗಿದೆ.
5 ದಿನ ಮಾತ್ರ ಸರ್ಕಾರಿ ಕೆಲಸ
ಮುಂಬೈ, ಫೆ. 12: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ, ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ತಾ. 29 ರಿಂದ ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು ವಾರದಲ್ಲಿ ಐದು ದಿನ ಮಾತ್ರ ಕಾರ್ಯ ನಿರ್ವಹಿಸಲಿವೆ. ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರು ಈಗ ವಾರದಲ್ಲಿ ಆರು ದಿನ ಕಾರ್ಯ ನಿರ್ವಹಿಸುತ್ತಿದ್ದು, ತಾ. 29 ರಿಂದ ಐದು ದಿನ ಮಾತ್ರ ಕೆಲಸ ಮಾಡಲಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಚಿವ ಸಂಪುಟ ಸಭೆ ಇಂದು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಜ್ಯದ 20 ಲಕ್ಷ ಸರ್ಕಾರಿ ನೌಕರರು ಪ್ರತಿ ಶನಿವಾರ ಹಾಗೂ ಭಾನುವಾರ ರಜೆ ಪಡೆಯಲಿದ್ದಾರೆ.
ಮರಣ ದಂಡನೆ ಇನ್ನಷ್ಟು ವಿಳಂಬ
ನವದೆಹಲಿ, ಫೆ. 12: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಮರಣದಂಡನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ತಮಗೆ ವಕೀಲರಿಲ್ಲ, ಇದ್ದ ಹಳೆಯ ವಕೀಲರನ್ನು ಕಿತ್ತು ಹಾಕಲಾಗಿದೆ, ಹೊಸ ವಕೀಲರು ಬರುವವರೆಗೆ ಸಮಯ ನೀಡಿರೆಂದು ಆತ ಕೋರ್ಟ್‍ಗೆ ಮೊರೆ ಇಟ್ಟಿದ್ದಾರೆ. ಅಲ್ಲದೆ ಕಾನೂನು ನೆರವನ್ನು ಪಡೆಯಲು ಹೆಚ್ಚುವರಿ ಸಮಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ನಿರ್ಭಯಾ ತಾಯಿ ತನ್ನ ಹಕ್ಕುಗಳ ಕಥೆ ಹೇಳಿ, ನಾನು ಏಳು ವರ್ಷ ಗಳಿಂದ ಕಾಯುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೋರ್ಟ್ ಈ ಕೂಡಲೇ ಡೆತ್‍ವಾರಂಟ್ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.
ಆಪ್ ಶಾಸಕನ ಹತ್ಯೆಗೆ ಸಂಚು-ದಾಳಿ
ನವದೆಹಲಿ, ಫೆ. 12: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿರುವ ಸಮಯದಲ್ಲಿಯೇ ಪಕ್ಷದ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೆಹರೌಲಿ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಆಪ್ ಶಾಸಕ ನರೇಶ್ ಯಾದವ್ ಅವರ ಹತ್ಯೆಗೆ 20 ದಿನಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು.
ಹಫೀಜ್ ಸಯೀದ್‍ಗೆ 11 ವರ್ಷ ಜೈಲು
ಲಾಹೋರ್, ಫೆ. 12: ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಭಯೋತ್ಪಾದಕ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್‍ಗೆ ಪಾಕಿಸ್ತಾನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರಿಗೆ ಆರ್ಥಿಕ ಸಹಕಾರ ನೀಡುತ್ತಿದ್ದ ಎರಡು ಪ್ರಕರಣದಲ್ಲಿ ಹಫೀಜ್ ಸಯೀದ್‍ಗೆ ತಲಾ 5ವರೆ ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಡಿ. 11 ರಂದು ಹಫೀಜ್ ಸಯೀದ್ ಹಾಗೂ ಸಹಚರರ ವಿರುದ್ಧದ ಪ್ರಕರಣದಲ್ಲಿ ದೋಷಾರೋಪಣೆ ಸಲ್ಲಿಸ ಲಾಗಿತ್ತು. ಈ ಬಳಿಕ ಕೋರ್ಟ್ ಪ್ರತಿ ದಿನವೂ ವಿಚಾರಣೆ ನಡೆಸಿದ್ದು ತೀರ್ಪು ಪ್ರಕಟಿಸಿದೆ. 5 ವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವುದರ ಜೊತೆಗೆ ಪ್ರಕರಣದ ಅಪರಾಧಿಗಳಿಗೆ ತಲಾ ರೂ. 15,000 ದಂಡ ವಿಧಿಸಿದೆ. ಇನ್ನೂ ನಾಲ್ಕು ಪ್ರಕರಣಗಳು ಸಯೀದ್ ವಿರುದ್ಧ ಇದ್ದು, ವಿಚಾರಣೆ ಅಂತ್ಯಗೊಳ್ಳುವವರೆಗೂ ಈಗಾಗಲೇ ವಿಚಾರಣೆ ಮುಕ್ತಾಯ ಗೊಂಡಿರುವ 2 ಪ್ರಕರಣಗಳ ತೀರ್ಪನ್ನು ವಿಳಂಬವಾಗಿ ಪ್ರಕಟಿಸಲು ಹಫೀಜ್ ಸಯೀದ್ ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್ ನ್ಯಾಯಾಲಯ ಅಂಗೀಕರಿಸಿತ್ತು.
ಮಠಕ್ಕೆ ಮನೆ ದಾನ ನೀಡಿದ ಎಸ್‍ಪಿಬಿ
ಹೈದರಾಬಾದ್, ಫೆ. 12: ಖ್ಯಾತ, ಬಹುಭಾಷಾ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರು ತಮ್ಮ ಮನೆಯನ್ನು ಕಂಚಿ ಮಠದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ದಾನ ಮಾಡಿದ್ದಾರೆ. ಈ ಹಿಂದೆ ಎಸ್ಪಿಬಿ ಅವರು ಆಂಧ್ರ ಪ್ರದೇಶದ ನೆಲ್ಲೂರ್‍ನಲ್ಲಿರುವ ತಮ್ಮ ಮನೆಯನ್ನು ದಾನ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಕಂಚಿ ಮಠಕ್ಕೆ ಮನೆಯನ್ನು ದಾನ ಮಾಡಿದ್ದಾರೆ. ಆ ಮನೆಯಲ್ಲಿ ಸಂಸ್ಕೃತ ಹಾಗೂ ವೇದ ಪಾಠ ಶಾಲೆ ಮಾಡಬೇಕು ಎಂಬುದು ಎಸ್ಪಿಬಿ ಅವರ ಆಸೆ ಎಂದು ತಿಳಿದು ಬಂದಿದೆ. ದೇವರ ಹಾಗೂ ಧಾರ್ಮಿಕ ವಿಚಾರಗಳ ಬಗ್ಗೆ ಎಸ್ಪಿಬಿ ಅವರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಎಸ್ಪಿಬಿ ಅವರಿಗೆ ಸಂಸ್ಕೃತ ಮೇಲೆ ಸಾಕಷ್ಟು ಪ್ರೀತಿ ಇದೆ. ಹಾಗಾಗಿ ಒಂದು ಒಳ್ಳೆಯ ಉದ್ದೇಶಕ್ಕಾಗಿ ಎಸ್ಪಿಬಿ ತಮ್ಮ ಮನೆಯನ್ನು ದಾನ ಮಾಡಿದ್ದಾರೆ.