ಮಡಿಕೇರಿ, ಫೆ. 12: ಜಿ.ಪಂ.ನ ಪ್ರಸಕ್ತ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜನವರಿ ಮಾಹೆಯ ಅಂತ್ಯದವರೆಗಿನ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲ್ಲಿ ನಡೆದ ಸಭೆಯಲ್ಲಿ ಹಲವು ಇಲಾಖೆಗಳ ಪ್ರಮುಖರು ಖಜಾನೆಯ ಮೂಲಕ ಬಿಲ್ ಪಾವತಿ ಆಗದ ಸಮಸ್ಯೆಯನ್ನು ಸಭೆಯ ಎದುರಿಟ್ಟರು. ಇದಕ್ಕೆ ಪತ್ಯುತ್ತರ ನೀಡಿದ ಖಜಾನೆ ಇಲಾಖೆಯ ಪ್ರಮುಖರು 2015ನಲ್ಲಿ ಖಜಾನೆ-2 ಎಂಬ ಹೆಸರಿನಲ್ಲಿ ಬಿಲ್ ಪಾವತಿ ಆಗುವ ಕಾರ್ಯವು ಸಂಪೂರ್ಣ ಸಾಫ್ಟ್ವೇರ್ ಮೂಲಕವೆ ಆಗಿದ್ದು, ಸಣ್ಣ ಪುಟ್ಟ ತಪ್ಪುಗಳಿದ್ದರೆ ಅದನ್ನು ಸಾಫ್ಟ್ವೇರ್ ತಿರಸ್ಕರಿಸುತ್ತದೆ. ತಿರಸ್ಕಾರದ ನಂತರ ಫೋನ್ ಮೂಲಕ ಇಲಾಖೆಯವರಿಗೆ ಸಂದೇಶ ಕೂಡ ಹೋಗುತ್ತದೆ ಎಂದರು. ಈ ತಾಂತ್ರಿಕತೆ ವ್ಯವಸ್ಥೆಯ ಬಗ್ಗೆ ಇಲಾಖೆಯವರಿಗೆ ಸರಿ ಮಾಹಿತಿ ಲಭ್ಯವಿಲ್ಲ. ಅಂಗನವಾಡಿ ಕಾರ್ಯ ಕರ್ತೆಯರಿಗೆ 9500 ಸಂಬಳ ದೊರಕಬೇಕಿದ್ದು, ಇದನ್ನು ಕೂಡ ಸಂಪೂರ್ಣ ಸಾಫ್ಟ್ವೇರ್ ಮೂಲಕ ಪಾವತಿ ಮಾಡುವ ಸೌಲಭ್ಯವಿದ್ದು ಇದರಲ್ಲಿ ಗರಿಷ್ಠ ರೂ.8000 ದಷ್ಟು ಮಾತ್ರ ಮಾಡಬಹುದು. ಇನ್ನುಳಿದ ರೂ.1500 ಕ್ಕೆ ಪುನಃ ಬಿಲ್ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಮುಖರು ತಿಳಿಸಿದರು. ಇದರ ಬಗ್ಗೆ ಖಜಾನೆ ಪ್ರಮುಖರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಚರ್ಚಿಸಿ ಯಾವುದೇ ನಿರ್ಧಾರವಾಗಲಿ, ಪರಿಹಾರವಾಗಲಿ ಕಂಡು ಹಿಡಿಯುವ ಕಾರ್ಯ ಕಾಣಲಿಲ್ಲ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಿದ್ಧತೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಪರೀಕ್ಷೆ ತಯಾರಿಯ ಬಗ್ಗೆ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಯೋಗ, ಧ್ಯಾನ ಕೂಡ ಓದುವುದರ ಜೊತೆಗೆ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ತಾ.14 ರಂದು ದೈಹಿಕ ಶಿಕ್ಷಕರಿಗೆ ಯೋಗ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಎಸ್.ಎಸ್. ಎಲ್.ಸಿ. ಯಲ್ಲಿ ಒಳ್ಳೆಯ ಫಲಿತಾಂಶ ಜಿಲ್ಲೆಗೆ ದೊರಕುವಂತೆಯೂ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಗಾಳಿಬೀಡು ಬಳಿಯ ನವೋದಯ ಶಾಲೆ ಜಿ.ಪಂ.ವ್ಯಾಪ್ತಿಗೆ ಬರದಿದ್ದರೂ ಸಹ ಜಿಲ್ಲೆಯ ವಿದ್ಯಾರ್ಥಿಗಳು ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಸರಿಯಾದ ಮೂಲ ಸೌಲಭ್ಯಗಳಿಲ್ಲದೆ ಪರಿ ತಪಿಸುತ್ತಿರುವ ಬಗ್ಗೆ ಮಾಹಿತಿ ಇದೆ ಎಂದರು.
ಈ ಕುರಿತು ಮಾತನಾಡಿದ ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಈಗಾಗಲೇ ಸಂಸದರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಹಿಂದೆ ನವೋದಯ ಶಾಲೆಯೆಂದರೆ ಉತ್ತಮ ಸ್ಥಾನ ಹೊಂದಿತ್ತು, ಆದರೆ ಇತ್ತೀಚೆಗೆ ಮಕ್ಕಳನ್ನು ಸೇರ್ಪಡೆ ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಶಾಲೆಗೆ ಅಕ್ಕಿ ಸರಬರಾಜು ಮಾಡುವಾಗ ಅಕ್ಕಿ ತೂಕ ಮಾಡುವಾಗ ಲೆಕ್ಕದಲ್ಲಿ ಆಚೆ-ಈಚೆ ಆಗುತ್ತಿರುವುದು ಕೇಳಿಬರುತ್ತಿದೆ. ಅಕ್ಕಿ ಮೂಟೆಗಳನ್ನು ಇಳಿಸುವಾಗ ಸರಿಯಾಗಿ ತೂಕ ಮಾಡಿ ಇಳಿಸಿಕೊಳ್ಳುವಂತೆ ಜಿ.ಪಂ. ಅಧ್ಯಕ್ಷ ಅಕ್ಷರ ದಾಸೋಹ ಸಮಿತಿಯ ಪ್ರಮುಖರಿಗೆ ಸಲಹೆ ನೀಡಿದರು. ತೂಕ ಮಾಡುವುದಕ್ಕೆ ತೂಕದ ಯಂತ್ರದ ಅವಶ್ಯಕತೆ ಇದೆ. ಸಂಬಂಧಪಟ್ಟ ಇಲಾಖೆಯವರಿಗೆ ಈ ಕುರಿತು ಪತ್ರ ಬರೆದಿದ್ದು
(ಮೊದಲ ಪುಟದಿಂದ) ಇನ್ನು ಲಭ್ಯವಾಗಿಲ್ಲ ಎಂದು ಅಕ್ಷರ ದಾಸೋಹ ಇಲಾಖೆಯ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ಬಗ್ಗೆ ಎಚ್ಚರ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಕೊರೊನಾ ವೈರಸ್ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಮಾಹಿತಿ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕುಟ್ಟ, ಮಾಕುಟ್ಟ ಮತ್ತು ಕರಿಕೆ ಗಡಿಭಾಗದಲ್ಲಿ ಆರೋಗ್ಯ ತಂಡಗಳನ್ನು ನಿಯೋಜಿಸಿ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜನೌಷಧಿ ಕೇಂದ್ರ ಆರಂಭಿಸಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಕರ್ನಾಟಕದ ಉತ್ತರ ಭಾಗದಲ್ಲಿ ಜನೌಷಧಿ ಮಳಿಗೆಗಳಲ್ಲಿ ಸಾಲುಗಟ್ಟಿ ಔಷಧಿ, ಮಾತ್ರೆ ಪಡೆಯಲು ನಿಲ್ಲುತ್ತಾರೆ. ಆದರೆ ಕೊಡಗು ಜಿಲ್ಲೆಯಲ್ಲಿ ಜನೌಷಧಿ ಮಳಿಗೆ ಇದೆಯೇ ಇಲ್ಲವೇ ಎಂಬುದು ತಿಳಿಯುತ್ತಿಲ್ಲ ಎಂದರು.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಮಡಿಕೇರಿಯಲ್ಲಿ ಜನೌಷಧಿ ಮಳಿಗೆ ತೆರೆಯಲು ಯಾರೂ ಸಹ ಮುಂದೆ ಬರುತ್ತಿಲ್ಲ. ಸದ್ಯ ಕುಶಾಲನಗರದಲ್ಲಿ ಜನೌಷಧಿ ಕೇಂದ್ರವಿದ್ದು, ವೀರಾಜಪೇಟೆಯಲ್ಲಿ ಜನೌಷಧಿ ಮಳಿಗೆ ಆರಂಭಿಸಲು ಮುಂದೆ ಬಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು
ಜಿಲ್ಲಾ ಆಯುಷ್ ಇಲಾಖೆಯಿಂದ ಬೇಸಿಗೆ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಹಾಗೂ ಇತರ ಇಲಾಖೆಗಳ ಸಹಕಾರದೊಂದಿಗೆ ಬೇಸಿಗೆ ಶಿಬಿರ ಏರ್ಪಡಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರು ಸಲಹೆ ಮಾಡಿದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ 17 ಗಿರಿಜನ ಹಾಡಿಗಳಿದ್ದು, ಆ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಗಮನ ಸೆಳೆದರು. ಈ ಬಗ್ಗೆ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಹಾಡಿ ಗಿರಿಜನ ಕುಟುಂಬಗಳಿಗೆ ಈಗಾಗಲೇ 1739 ವೈಯಕ್ತಿಕ ಹಕ್ಕು ಪತ್ರ ನೀಡಲಾಗಿದ್ದು, ಇನ್ನೂ ಸಹ ಹಲವು ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಯಾವ ಯಾವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಪಶುಪಾಲನಾ ಇಲಾಖೆ ವತಿಯಿಂದ ಕೋಳಿ ಹಾಗೂ ಹಂದಿ ಮರಿಗಳ ವಿತರಣೆ ಮಾಡುವುದು, ಸ್ವ ಉದ್ಯೋಗ ಕೈಗೊಳ್ಳುವವರಿಗೆ ಪ್ರೋತ್ಸಾಹ ನೀಡುವುದು ಮತ್ತಿತರ ಕ್ರಮ ಕೈಗೊಳ್ಳುವಂತೆ ಜಿ.ಪಂ.ಅಧ್ಯಕ್ಷರು ಸಲಹೆ ಮಾಡಿದರು.
ವಸತಿ ಯೋಜನೆ ಅನುಷ್ಠಾನಗೊಳಿಸಲಿ: ವಸತಿ ಯೋಜನೆಗೆ ಸಂಬಂಧಿಸಿದಂತೆ ಜಿ.ಪಂ.ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 2018 ರಿಂದ ಇಲ್ಲಿಯವರೆಗೆ ಮಡಿಕೇರಿ ತಾಲೂಕಿನಲ್ಲಿ 520, ಸೋಮವಾರಪೇಟೆ ತಾಲೂಕಿನಲ್ಲಿ 800 ಮತ್ತು ವಿರಾಜಪೇಟೆ ತಾಲೂಕಿನಲ್ಲಿ 760 ಒಟ್ಟು 2,080 ಮನೆಗಳ ನಿರ್ಮಾಣ ಗುರಿ ಇದ್ದು, ಈಗಾಗಲೇ ಪ್ರಗತಿ ಹಂತದಲ್ಲಿವೆ. ಒಂದು ಗ್ರಾ.ಪಂ.ಗೆ 20 ಮನೆಗಳನ್ನು ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ್ ಅವರು ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ವಿವಿಧ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಾಮಗಾರಿ ಪೂರ್ಣಗೊಳಿಸಿ : ಜಿ.ಪಂ.ಎಂಜಿನಿಯರಿಂಗ್ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಅವರು ಹಳೆ ಕಾಮಗಾರಿಗಳು ಪೂರ್ಣ ಗೊಂಡಿರುವುದಿಲ್ಲ. ಆದರೆ ಹೊಸ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತಾರೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆಯ ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳು, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು, ಅವಕಾಶ ನೀಡಿಲ್ಲ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಪ್ರಶ್ನಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಅವರು ಈ ಸಂಬಂಧ ಮುಂದಿನ ವಾರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಸೋಮವಾರಪೇಟೆ ತಾಲೂಕಿನ ಮುಳ್ಳೂರು ಬಳಿಯ ಜೈನ ಬಸದಿಯು ಒಳ್ಳೆಯ ಪ್ರೇಕ್ಷಣೀಯ ಸ್ಥಳವಾಗಿದ್ದು, ಇದನ್ನು ಅಭಿವೃದ್ಧಿಪಡಿಸುವಂತೆ ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಲೋಕೇಶ್ವರಿ ಗೋಪಾಲ್ ಅವರು ರಸ್ತೆ, ಸೇತುವೆ ಈಗ ಬೇಸಿಗೆ ಅವಧಿಯಾಗಿರುವುದರಿಂದ ವಸತಿ ಯೋಜನೆಗಳು ಸೇರಿದಂತೆ ಮನೆಗಳ ನಿರ್ಮಾಣಕ್ಕೆ ಅವಕಾಶವಿದ್ದು, ಮರಳು ಸಾಗಾಣಿಕೆಗೆ ಅವಕಾಶ ಮಾಡಬೇಕು ಎಂದು ಜಿ.ಪಂ. ಅಧ್ಯಕ್ಷರು ಸೂಚಿಸಿದರು.
ಜಿ.ಪಂ.ಗೆ ಬಸ್ ವ್ಯವಸ್ಥೆ : ನೂತನ ಜಿ.ಪಂ. ಕಚೇರಿಗೆ 8 ಮಿನಿಬಸ್ ಕಲ್ಪಿಸುವಂತೆ ಕೇಂದ್ರ ಕಚೇರಿಗೆ ಕೋರಲಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ. ಇಲಾಖೆಯ ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು. ಕುಶಾಲನಗರದಲ್ಲಿ ಡಿಪ್ಪೊ ಕಲ್ಪಿಸುವಂತೆ ಪ್ರಸ್ತಾವನೆ ನೀಡಲಾಗಿದೆ ಎಂದು ಕೂಡ ಮಾಹಿತಿ ನೀಡಿದರು.
ಮಡಿಕೇರಿಯಿಂದ ಕುಶಾಲನಗರ, ಇಲವಾಲ, ಶ್ರೀರಂಗಪಟ್ಟಣ ಮಾರ್ಗ ಬೆಂಗಳೂರಿಗೆ ಬೆಳಿಗ್ಗೆ 10.30 ಗಂಟೆಗೆ ತಲುಪುವಂತಾಗಲು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡುವಂತೆ ಲೋಕೇಶ್ ಸಾಗರ್ ಕೋರಿದರು.
ತೋಟದ ಕಾರ್ಮಿಕರನ್ನು ಕೊಂಡೊಯ್ಯುವ ಜೀಪು ಮಾಲೀಕರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಜಿ.ಪಂ.ಅಧ್ಯಕ್ಷರು ಆರ್ಟಿಒ ಅಧಿಕಾರಿಗೆ ಸೂಚಿಸಿದರು. ಹಳದಿ ಮತ್ತು ಬಿಳಿ ಬಣ್ಣದ ಫಲಕ ಹೆಸರಿನಲ್ಲಿ ಯಾವುದೇ ರೀತಿ ತೊಂದರೆ ನೀಡದಂತೆ ಸಿ.ಕೆ.ಬೋಪಣ್ಣ ಅವರು ಸಲಹೆ ಮಾಡಿದರು.
ರೇಷ್ಮೆ ಕೃಷಿ ಅಭಿವೃದ್ಧಿ, ಖಾದಿ ಮತ್ತು ಕೈಮಗ್ಗ ಕ್ಷೇತ್ರಕ್ಕೆ ಉತ್ತೇಜನ ನೀಡುವಂತೆ ಜಿ.ಪಂ. ಅಧ್ಯಕ್ಷರು ಸಲಹೆ ಮಾಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಮಾತನಾಡಿ ಸರ್ವರ್ ಸಮಸ್ಯೆಯಿಂದ ಪಡಿತರ ಚೇಟಿಗೆ ತೊಂದರೆ ಯಾಗುತ್ತಿದ್ದು ಇದೀಗ ಲಿಖಿತವಾಗಿ ನೀಡಲಾಗುತ್ತಿದೆ. ಬೆಳೆಗಾರರಿಗೆ ಬಿ.ಪಿಎಲ್ ಕಾರ್ಡ್ ಬೇಕಿದ್ದಲ್ಲಿ 7.5 ಹೆಕ್ಟೇರ್ಗಳಿಗಿಂತ ಕಡಿಮೆ ಜಾಗ ಇರಬೇಕು ಎಂದರು.
ಈ ಬಾರಿ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಹಾಗೆಯೇ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಿ ದ್ದಕ್ಕೆ ಜಿ.ಪಂ. ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು.