ಮಡಿಕೇರಿ, ಫೆ. 12: ಕೃಷಿ ಕ್ಷೇತ್ರದ ಕಡೆಗಣನೆಯಿಂದಾಗಿ ದೇಶದ ಅರ್ಥವ್ಯವಸ್ಥೆಯ ಮೇಲೆ ದುಷ್ಪರಿಣಾಮವಾಗುತ್ತಿದ್ದು, ಬೆಳೆಗಾರ ಸಂಘಟನೆಗಳು ಮಂಡಿಸಿರುವ ಬೇಡಿಕೆಗಳೆಲ್ಲವನ್ನೂ ಕೇಂದ್ರ ಸರಕಾರ ತನ್ನ ಬಜೆಟ್‍ನಲ್ಲಿ ಕಡೆಗಣಿಸಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಘಟಕ ಮತ್ತು ಜಿಲ್ಲಾ ಕಾಂಗ್ರೆಸ್‍ನ ಕಿಸಾನ್ ಘಟಕ ಆರೋಪಿಸಿದೆ. ಜಂಟಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಡಾ. ದುರ್ಗಾಪ್ರಸಾದ್ ಹಾಗೂ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಸಂಚಾಲಕ ನೆರವಂಡ ಉಮೇಶ್ ಅವರುಗಳು, ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ನಿರಂತರ ಹೋರಾಟಗಳನ್ನು ರೂಪಿಸುವುದಾಗಿ ತಿಳಿಸಿದರು. ದೇಶದಲ್ಲಿ ಶೇ. 60 ರಷ್ಟು ಮಂದಿ ಈಗಲೂ ಕೃಷಿಯನ್ನೇ ಅವಲಂಬಿಸಿದ್ದಾರೆ, ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಸಣ್ಣ ಮತ್ತು ಮಧ್ಯಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಆಧಾರಿತ ಜಿಲ್ಲೆಯಾದ ಕೊಡಗು ಜಿಲ್ಲೆಯಲ್ಲೂ ರೈತರು ಹಾಗೂ ಕಾಫಿ ಬೆಳೆಗಾರರು ಇದೇ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದು, ಇದರ ಪರಿಣಾಮವಾಗಿ ಬಹುತೇಕ ಮಂದಿ ಕೃಷಿಯಿಂದ ದೂರವಾಗುತ್ತಿದ್ದಾರೆ. ಇದು ದೇಶದ ಆಹಾರ ಉತ್ಪಾದನೆ ಹಾಗೂ ಅರ್ಥ ವ್ಯವಸ್ಥೆಯ ಮೇಲೂ ದುಷ್ಪರಿಣಾಮವನ್ನು ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದಿನ ಪರಿಸ್ಥಿತಿಯಲ್ಲಿ ರೈತ ಬೆಳೆಯುವ ಭತ್ತಕ್ಕೆ ಕ್ವಿಂಟಾಲ್‍ಗೆ ರೂ. 3 ಸಾವಿರಗಳಿಗೂ ಅಧಿಕ ಉತ್ಪಾದನಾ ವೆಚ್ಚ ತಗಲುತ್ತದೆ. ಆದರೆ ಕೇಂದ್ರ ಸರಕಾರ ಘೋಷಿಸಿರುವ ಕ್ವಿಂಟಾಲ್‍ಗೆ 1800ರೂ. ದರ ರೈತನಿಗೆ ಯಾವುದೇ ಸಹಾಯ ಮಾಡುವುದಿಲ್ಲ. ಅದರಲ್ಲೂ ರೈತ ತಾನು ಬೆಳೆದ ಭತ್ತವನ್ನು ತನ್ನ ಸ್ವಂತ ಖರ್ಚಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಬೇಕಿದ್ದು, ಭತ್ತವನ್ನು ಮಾರಾಟ ಮಾಡಿದ ಒಂದು ತಿಂಗಳ ಬಳಿಕ ಹಣ ಪಾವತಿಸುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಅದೇ ಭತ್ತವನ್ನು ಖಾಸಗಿ ವ್ಯಾಪಾರಿಗಳು ರೈತರಿರುವ ಜಾಗದಿಂದಲೇ ರೂ. 2100 ನೀಡಿ ಖರೀದಿಸುತ್ತಿದ್ದು, ಸರಕಾರದ ಬೆಂಬಲ ಬೆಲೆಗಿಂತ ಖಾಸಗಿಯವರಿಗೆ ಮಾರಾಟ ಮಾಡುವುದೇ ರೈತನಿಗೆ ಅನುಕೂಲವಾದಂತಾಗಿದೆ ಎಂದು ವಿವರಿಸಿದರು.

ದೇಶಕ್ಕೆ ವಿದೇಶಿ ವಿನಿಮಯ ತಂದುಕೊಡುವ ಕಾಫಿ ಕೊಡಗಿನ ಪ್ರಧಾನ ಬೆಳೆಯಾಗಿದ್ದು, ಪ್ರಸಕ್ತ ಕಾಫಿ ಬೆಲೆಯೂ ಪಾತಾಳಕ್ಕೆ ಇಳಿದಿದ್ದು, ಕಳೆದ 10 ವರ್ಷಗಳ ಹಿಂದಿನ ದರ ಇಂದು ಬೆಳೆಗಾರನಿಗೆ ಲಭ್ಯವಾಗುತ್ತಿದೆ. ಮತ್ತೊಂದೆಡೆ ರೂ. 800 ಗಳಷ್ಟಿದ್ದ ಕರಿಮೆಣಸು ದರ ವಿಯೆಟ್ನಾಂ ಕರಿಮೆಣಸಿನ ಆಮದಿನಿಂದಾಗಿ ರೂ. 300 ಗಳಿಗೆ ಇಳಿಕೆಯಾಗಿದ್ದು, ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ಬಜೆಟ್ ಮಂಡನೆಗೆ ಮುನ್ನ ಕಾಫಿ ಬೆಳೆಗಾರರ ಸಂಘಟನೆಗಳ ಮುಖಂಡರು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ನೇತೃತ್ವದಲ್ಲಿ ವಿತ್ತ ಸಚಿವರನ್ನು ಭೇಟಿಯಾಗಿ ಕಾಫಿ ಉದ್ಯಮ ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಆದರೆ ಕೇಂದ್ರ ಸರಕಾರ ಬೆಳೆಗಾರರ ಸಂಘಟನೆಗಳ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಕಾಫಿ ಮತ್ತು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಕಿಸಾನ್ ಘಟಕದ ಮುಖಂಡರಾದ ಬೇಕಲ್ ಎಸ್. ರಮಾನಾಥ್, ಗೋಪಾಲಕೃಷ್ಣ, ರೈತ ಸಂಘದ ಮುಖಂಡರಾದ ಹಂಸ ಹಾಗೂ ಹಮೀದ್ ಉಪಸ್ಥಿತರಿದ್ದರು.