ಕೂಡಿಗೆ, ಫೆ. 12: ಶಿರಂಗಾಲ ನೀರಾವರಿ ಇಲಾಖೆಯ ವತಿಯಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವೀಕ್ಷಿಸಿದರು.
ಶಿರಂಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಲ್ಲೂರು ಕೊಪ್ಪಲು ರಸ್ತೆ, ಹಾರಂಗಿ ಎಡದಂಡೆ ನಾಲೆಯ ಉಪ ಸೇತುವೆ ಕಾಮಗಾರಿಯನ್ನು ಖುದ್ದಾಗಿ ವೀಕ್ಷಿಸಿ ಕಾಮಗಾರಿಯ ಗುಣಮಟ್ಟವನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೂ.1.20 ಕೋಟಿ ವೆಚ್ಚದ ಕಾಮಗಾರಿಯ ರಸ್ತೆಗೆ ಡಾಂಬರು ಹಾಕಿರುವುದನ್ನು ಗುಣಮಟ್ಟ ತಪಾಸಣಾ ಮಾಪನದ ಮೂಲಕ ಪರೀಕ್ಷಿಸಿದರು. ಅದೇ ರೀತಿಯ ಗುಣಮಟ್ಟವನ್ನು ಕೊನೆಯ ಹಂತದವರೆಗೂ ಕಾಪಾಡಲು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೂ ಸೂಚನೆ ನೀಡಿದರು.
ಈಗಾಗಲೇ ನೀರಾವರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ.25 ಕೋಟಿ ಗೂ ಅಧಿಕ ವೆಚ್ಚದ ಕಾಮಗಾರಿಗಳು ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಕಾವೇರಿ ನೀರಾವರಿ ನಿಗಮದ ವತಿಯಿಂದ ನೀರಾವರಿ ಅಚ್ಚುಕಟ್ಟು ಪ್ರದೇಶಗಳಾದ ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಗುಡ್ಡೆಹೊಸೂರು, ನಂಜರಾಯಪಟ್ಟಣ ವ್ಯಾಪ್ತಿಗಳಲ್ಲಿ ನೀರಾವರಿ ಇಲಾಖೆಯ ವತಿಯಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಯ ಗುಣಮಟ್ಟವನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಪಾಡಿ ಸಮರ್ಪಕ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ. ಅದರಂತೆ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಶಾಸಕರು ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಲೋಕೇಶ್ವರಿಗೋಪಾಲ್, ಜಿ.ಪಂ. ಸದಸ್ಯ ಹೆಚ್.ಆರ್.ಶ್ರೀನಿವಾಸ್, ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ಟಿ.ಕೆ.ಪಾಂಡುರಂಗ, ತಾಲೂಕು ಬಿಜೆಪಿ ಅಧ್ಯಕ್ಷ ಮನುರೈ, ಶಿರಂಗಾಲ ಸಹಕಾರ ಬ್ಯಾಂಕಿನ ಅಧ್ಯಕ್ಷ ಚಂದ್ರಶೇಖರ್, ಶಿರಂಗಾಲ ಗ್ರಾ.ಪಂ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ರಮೇಶ್, ನೀರಾವರಿ ಇಲಾಖೆಯ ಇಂಜಿನಿಯರ್ ನಾಗರಾಜ್, ರಾಮೇಗೌಡ, ಶಿರಂಗಾಲ ಮಂಟಿಗಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ರುದ್ರಪ್ಪ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹರೀಶ್, ಪ್ರಮುಖರಾದ ಚೇತನ್, ಮಹೇಶ್, ನವೀನ್, ಕಿರಣ್, ಪ್ರಸನ್ನ ಮತ್ತಿತರರು ಇದ್ದರು.