ಮಡಿಕೇರಿ, ಫೆ. 12: ಮಡಿಕೇರಿ ನಗರದ ಹೊಸ ಬಡಾವಣೆಯ ವಾರ್ತಾ ಇಲಾಖೆಯ ಪಕ್ಕದ ನ್ಯಾಯಾಧೀಶರ ವಸತಿ ಗೃಹದ ತಡೆಗೋಡೆಯ ಕೆಳಭಾಗದಲ್ಲಿ ಮಡಿಕೇರಿ ನಗರಕ್ಕೆ ಸ್ಟೋನ್ ಹಿಲ್ ನಿಂದ ನೀರು ಸರಬರಾಜಾಗುವ ಮುಖ್ಯ ಪೈಪ್ ಒಡೆದು ಹೋಗಿದ್ದು ಕಳೆದ 15-20 ದಿನಗಳಿಂದ ಹಗಲು ರಾತ್ರಿ ಎನ್ನದೆ ನೀರು ಪೋಲಾಗುತ್ತಿದೆ.

ಮುಂದಿನ ದಿನಗಳಲ್ಲಿ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ದಿನದ 24 ಗಂಟೆ ಈ ರೀತಿ ನೀರು ಪೋಲು ಆದರೆ ಮಡಿಕೇರಿ ನಗರದ ಜನತೆ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬರಬಹುದು. ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಇದನ್ನು ಸರಿಪಡಿಸಬೇಕು. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಈ ನೀರಿನ ಪೈಪ್ ಹೊಡೆದು ಹೋಗಿದ್ದರ ಬಗ್ಗೆ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ನಗರಸಭೆ ಗಮನಕ್ಕೆ ತಂದು ಇದನ್ನು ಸರಿಪಡಿಸಿತ್ತು. ಈಗ ಮತ್ತೆ ಅದೇ ರೀತಿಯಲ್ಲಿ ನೀರಿನ ಪೈಪ್ ಒಡೆದು ಹೋಗಿದೆ ಆದಷ್ಟು ಬೇಗ ಸಂಬಂಧಪಟ್ಟವರು ಈ ಪೈಪ್‍ಲೈನನ್ನು ಸರಿಪಡಿಸಿಕೊಡಬೇಕು ಎಂದು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.