ಚೆಟ್ಟಳ್ಳಿ, ಫೆ. 12: ಭತ್ತ ಬೆಳೆವ ಹೊಲ-ಗದ್ದೆಗಳು ಇಂದು ಮರೆಯಾಗುತ್ತಿದ್ದು ಪಾಳುಬಿಡದೆ ಗದ್ದೆಗಳ ಪುನ್ಚೇತನದ ಮೂಲಕ ನೀರಿನ ರಕ್ಷಣೆ ಜೊತೆಗೆ ರೈತನ ಆರ್ಥಿಕ ಅಭಿವೃದ್ಧಿ ಸಾಧ್ಯವೆಂದು ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಚೆಟ್ಟಳ್ಳಿ ಜೋಮಾಲೆ ಪೊಮ್ಮಕ ಕೂಟ ಸಂಯುಕ್ತ ಆಶ್ರಯದಲ್ಲಿ ನಡೆದ ರೈತಂಡ ಬದ್‍ಕ್‍ಲ್ ಮಣ್ಣ್-ಪೊನ್ನ್ ವಿಚಾರಗೋಷ್ಠಿಯಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ಮಾತನಾಡಿದ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಡೀನ್ ಚೆಪ್ಪುಡಿರ ಜಿ. ಕುಶಾಲಪ್ಪ ತಿಳಿಸಿದರು. ಎಲ್ಲಾ ಬೆಳೆಗಳನ್ನು ಲಾಭಾದಾಯಕದ ಉದ್ದೇಶದಿಂದ ಮಾತ್ರ ಬೆಳೆಯ ಬಾರದು. ಮಿಶ್ರ ಬೆಳೆಯ ಜೊತೆ ಬಹುಪಯೋಗಿ ಬಿದಿರು ಬೆಳೆಗೆ ಹೆಚ್ಚಿನ ಉತ್ತೇಜನ ನೀಡುವುದರಿಂದ ಪ್ರಯೋಜನಕಾರಿ ಆಗಲಿದೆ ಎಂದರು. ನಮ್ಮ ಹಿರಿಯರು ಉಳಿಸಿಕೊಂಡು ಬಂದ ದೇವರಕಾಡನ್ನು ಉಳಿಸಿ ಬೆಳೆಸಬೇಕೆಂದರು. ಬೆಂಗಳೂರು ದೇಸೀ ಸಂಸ್ಥೆಯ ರಾಜ್ಯ ನೋಡಲ್ ಅಧಿಕಾರಿ ಡಾ. ಬಿ.ಆರ್. ಪೊನ್ನಬಲಿ ಸ್ವಾಮಿ ಮಾತನಾಡಿ, ಕೊಡಗಿನ ಮುಖ್ಯ ಬೆಳೆಯಾದ ಕಾಫಿ ಬೀಜದಿಂದ ತೆಗೆದ ಸಿಪ್ಪೆಯನ್ನು ಹಾಗೇ ಬಿಡುವ ಬದಲು ಕಾಪೋಸ್ಟ್ ತಯಾರಿಸಿ ಫಸಲು ಗಿಡಗಳಿಗೆ ಹಾಕುವ ಮೂಲಕ ಉತ್ತಮ ಇಳುವರಿ ಪಡೆಯಲು ಸಾಧ್ಯವೆಂದರು. ಕಾಂಪೋಸ್ಟ್ ತಯಾರಿಕಾ ವಿಧಾನದ ಮಾಹಿತಿ ನೀಡಿದರು. ಸೋಮವಾರ ಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ. ರಾಜಶೇಖರ್ ಹೆಚ್.ಎಸ್. ಮಣ್ಣು ಪರೀಕ್ಷೆ ಹಾಗೂ ಸಂರಕ್ಷಣೆಯ ಬಗ್ಗೆ ಮಾತನಾಡಿ, ಮನುಷ್ಯನಿಗೆ ಆರೋಗ್ಯ ರಕ್ಷಣೆ ಎಷ್ಟು ಮುಖ್ಯವೊ ಅದೇ ರೀತಿ ಮಣ್ಣಿನ ಸಂರಕ್ಷಣೆ ಅಷ್ಟೇ ಮುಖ್ಯ. ಪ್ರತೀವರ್ಷ ತೋಟದ ಮಣ್ಣನ್ನು ತಂದು ಇಲಾಖೆಯಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ ಸೂಕ್ತವಾದ ಗೊಬ್ಬರವನ್ನು ಹಾಗುವ ಮೂಲಕ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವೆಂದು ಮಣ್ಣಿನ ಸಂರಕ್ಷಣೆ ವಿಧಾನದ ಬಗ್ಗೆ ತಿಳಿಸಿದರು. ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕಿ ಡಾ. ಮಂಡೆಪಂಡ ಕಾವೇರಿ ಮಹಿಳೆಯರಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಹೂಬೆಳೆಯ ಬಗ್ಗೆ ಮಾತನಾಡಿ, ಆರ್‍ಕಿಡ್ ಗಿಡದ ಬಗ್ಗೆ ಮಾಹಿತಿ ನೀಡಿ ಆರ್‍ಕಿಡ್ ಗಿಡಕ್ಕೆ ನಮ್ಮಲ್ಲಿ ಹೆಚ್ಚಿನ ಬೇಡಿಕೆ ಇಲ್ಲದ್ದರೂ ವಿದೇಶದಲ್ಲಿ ಬಾರಿ ಬೇಡಿಕೆ ಇದೆ. ಆರ್‍ಕಿಡ್ ಹೂ ಗಿಡವನ್ನು ಮಹಿಳೆಯರಲ್ಲದೆ ಪುರುಷರು ಬೆಳೆಸುವ ಮೂಲಕ ಲಾಭಗಳಿಸ ಬಹುದೆಂದರು. ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಹಲವು ಬೆಳೆಯ ಜೊತೆಗೆ ವಿದಧ ಆರ್‍ಕಿಡ್ ಗಿಡವನ್ನು ಬೆಳೆಸಲಾಗುತಿದ್ದು ಮಾಹಿತಿಯನ್ನು ನೀಡಲಾಗುವುದೆಂದರು.
ಸುಂಟಿಕೊಪ್ಪ ಕೊಡವ ಕೂಟದ ಅಧ್ಯಕ್ಷ ಚೇನಂಡ ಉತ್ತಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟೀರ ಸಿ. ಗಿರೀಶ್ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಹಾಗೂ ಅಕಾಡೆಮಿಯ ಸದಸ್ಯ ಪಡಿಞರಂಡ ಎ. ಪ್ರಭು ಕುಮಾರ್ ವಂದಿಸಿ. ಅಕಾಡೆಮಿಯ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಗಳ ಆಧುನಿಕ ಯಂತೋಪಕರಣ, ಹತ್ಯಾರು, ಗೊಬ್ಬರ, ಸಿರಿದಾನ್ಯ ಮಳಿಗೆಗಳ ಮೂಲಕ ಪ್ರದರ್ಶನ ಹಾಗೂ ಮಾರಾಟ ಏರ್ಪಟಿತ್ತು.
- ಕರುಣ್ ಕಾಳಯ್ಯ