ಸೋಮವಾರಪೇಟೆ,ಫೆ.12: ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಹೊಸೂರು-ಸಿದ್ದಾಪುರ ರಸ್ತೆ ಅಭಿವೃದ್ಧಿಗೆ ರೂ. 17 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಚಾಲನೆ ನೀಡಿದರು.
ಉದ್ದೇಶಿತ ರಸ್ತೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 12 ಕೋಟಿ ಹಾಗೂ ವಿಶೇಷ ಪ್ಯಾಕೇಜ್‍ನಿಂದ 5 ಕೋಟಿ ಅನುದಾನ ಮೀಸಲಿಟ್ಟಿದ್ದು, ಈ ಭಾಗದ ಮಂದಿಯ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿದ್ದು, ಪ್ರವಾಸಿ ತಾಣ ದುಬಾರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಇದಾಗಿದೆ. ಕಳೆದ ಹಲವಾರು ವರ್ಷಗಳಿಂದ ಗುಂಡಿ ಮುಚ್ಚುವ ಕಾರ್ಯಗಳು ಮಾತ್ರ ನಡೆಯುತ್ತಿದ್ದು, ಕಳೆದೆರಡು ವರ್ಷಗಳ ಮಳೆಗೆ ರಸ್ತೆ ಇನ್ನಷ್ಟು ದುಸ್ಥಿತಿಗೆ ತಲುಪಿತ್ತು.
ಇದೀಗ ಸರ್ಕಾರದಿಂದ ರೂ. 17 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಆಯ್ದ ಭಾಗಗಳಲ್ಲಿ ರಸ್ತೆಯನ್ನು ಸಂಪೂರ್ಣ ಅಗೆದು, ವೆಟ್‍ಮಿಕ್ಸ್ ಹಾಕಿ ನಂತರ ಡಾಂಬರು, ಕೆಲವೆಡೆ ಕಾಂಕ್ರೀಟ್ ರಸ್ತೆಯನ್ನಾಗಿ ಮೆಲ್ದರ್ಜೆಗೇರಿಸಲು ಯೋಜನೆ ತಯಾರಿಸಲಾಗಿದೆ.
ಇದೇ ಸಂದರ್ಭ 5ಲಕ್ಷ ವೆಚ್ಚದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ಶಾಲೆಯ ಎದುರಿನ ರಸ್ತೆ, 8 ಮತ್ತು 5 ಲಕ್ಷ ವೆಚ್ಚದ ಸುಣ್ಣದಕೆರೆಯ 2 ರಸ್ತೆ, 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಬಾಳುಗೋಡು ರಸ್ತೆ ಕಾಮಗಾರಿಗಳಿಗೆ ಶಾಸಕ ರಂಜನ್ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಅಬ್ದುಲ್ ಲತೀಫ್, ತಾ.ಪಂ. ಸದಸ್ಯೆ ಪುಷ್ಪ, ಗ್ರಾ.ಪಂ. ಅಧ್ಯಕ್ಷೆ ಭಾರತಿ ಸೇರಿದಂತೆ ಸದಸ್ಯರುಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ಯಾಂ, ಅಭಿಯಂತರರು ಉಪಸ್ಥಿತರಿದ್ದರು.