ಶಿವರಾತ್ರಿ ಹತ್ತಿರ ಬಂತೆಂದರೆ ಕಾವೇರಿ ಬೈವಾಡ್ ಸಮಿತಿಯಿಂದ ಪುಣ್ಯ ಕ್ಷೇತ್ರ ತಲಕಾವೇರಿಗೆ ಹೋಗಲು ವ್ರತಧಾರಿಗಳು ಕಾವಿ ವೇಶಗಳನ್ನು ಧರಿಸಿರುವವರನ್ನು ನಾಪೆÇೀಕ್ಲುವಿನಲ್ಲಿ ಕಾಣಬಹುದಾಗಿದೆ, ಶಬರಿ ಮಲೆಯಂತೆ ಇಲ್ಲಿಯೂ ವ್ರತಧಾರಿಗಳು ಕಟ್ಟುಪಾಡಿನಂತೆ ದೇವರ ಧ್ಯಾನದಲ್ಲಿ ತೊಡಗಿಸಿಕೊಂಡು ಸುಮಾರು 48 ದಿನಗಳ ಕಾಲ ಶೃದ್ಧಾಭಕ್ತಿಯಿಂದ ವೃತವನ್ನು ಆಚರಿಸಿ ಶಿವರಾತ್ರಿಯ ದಿನ ಭಾಗಮಂಡಲದ ತಲಕಾವೇರಿಗೆ ಹೋಗುವುದನ್ನು ಕಾವೇರಿ ಬೈವಾಡ್ ಸಮಿತಿಯವರು ಸುಮಾರು 31 ವರ್ಷಗಳಿಂದ ಆಚರಿಸುತ್ತಾ ಬಂದಿರುತ್ತಾರೆ, ಶಬರಿ ಮಲೆಯಂತೆಯೇ ಇವರಿಗೂ ಒಬ್ಬರು ಗುರುಸ್ವಾಮಿ ಇದ್ದು ವ್ರತ ಆಚರಿಸುವವರು ದೇವಾಲಯದಲ್ಲಿ ಗುರು ಸ್ವಾಮಿಯಿಂದ ಮಾಲೆಯನ್ನು ಧರಿಸಿಕೊಂಡು ವೃತ ಆಚರಣೆಯಲ್ಲಿ ತೊಡಗುತ್ತಾರೆ.

ಮಾಲೆ : ಮಾಲೆ ಎಂದರೆ ಕೊರಳಿಗೆ ಶ್ರೀ ಮಾತೆ ಕಾವೇರಿ ತಾಯಿಯ ಮುದ್ರೆ ಇರುವ ರುದ್ರಾಕ್ಷಿ ಮಾಲೆ, ಗಂಡಸರಿಗೆ ಕಾವಿ ಬಣ್ಣದ ಪಂಚೆ ಮತ್ತು ಹಸಿರು ಬಣ್ಣದ ರುಮಾಲು, ಹೆಂಗಸರಿಗೆ ಕಾವಿ ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ರವಿಕೆ ಅಥವಾ ಜಾಕಿಟ್.

ವ್ರತ : ಕಾವೇರಿ ಬೈವಾಡ್‍ಗೆ ಮೊದಲ ಬಾರಿ ಬರುವವರು ಸುಮಾರು 48 ದಿನಗಳ ಕಾಲ ವೃತವನ್ನು ಆಚರಿಸತಕ್ಕದ್ದು, ಅದರಂತೆ 11 ದಿನಗಳ ಕಾಲವು ವ್ರತ ಆಚರಿಸಿ ಬರಬಹುದು. ಈ ಸಮಯದಲ್ಲಿ ದಿನಂಪ್ರತಿ ಎರಡು ಬಾರಿ ಮಿಂದು ಮಾಡಿ ಕಾವೇರಿ ಮಾತೆಯ ಶ್ಲೋಕವನ್ನು ದಿನದಲ್ಲಿ ಮೂರು ಬಾರಿ ಪಠಿಸಬೇಕು. ಈ ಸಂದರ್ಭ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ದೇವರ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು.

ಕಟ್ಟು ತುಂಬಿಸುವುದು : ವ್ರತಧಾರಿಗಳು ಬೈವಾಡ್‍ಗೆ ಹೊರಡುವ ಒಂದು ದಿನ ಮೊದಲು ಭಕ್ತಿಯಿಂದ ದೇವಾಲಯದಲ್ಲಿ ದೇವರ ಕಟ್ಟನ್ನು ತುಂಬಿಸುತ್ತಾರೆ. ಇದಕ್ಕಾಗಿ ಒಂದು ದೊಡ್ಡ ಬ್ಯಾಗ್ ಮತ್ತು 3 ಚಿಕ್ಕ ಬ್ಯಾಗ್, ಅಲ್ಲದೆ ಕಟ್ಟಿಗೆ ಬೇಕಾದ ಸಾಮಾನುಗಳು 6 ತೆಂಗಿನಕಾಯಿ, ಐದುವರೆ ಸೇರು ಅಕ್ಕಿ, 11 ರೂಪಾಯಿ ಕಾಣಿಕೆ, ಅಗರಬತ್ತಿ, ಕರ್ಪೂರ, ಏಲಕ್ಕಿ, ಕರಿಮೆಣಸು, ಕುಂಕುಮ, ಇದನ್ನು ಬ್ಯಾಗ್ನಲ್ಲಿ ಇರಿಸಿ ಶಿವರಾತ್ರಿ ಪುಣ್ಯ ಕ್ಷೇತ್ರ ತಲಕಾವೇರಿಗೆ ಹೋಗಿ ದೇವರ ದರ್ಶನ ಪಡೆದು ದೇವರ ಪಾದಕ್ಕೆ ಕಟ್ಟು ಒಪ್ಪಿಸಿ ಬರುತ್ತಾರೆ. ಇಂತಹÀ ಪುಣ್ಯ ಕಾರ್ಯವನ್ನು ಕಳೆದ 31 ವರ್ಷಗಳಿಂದ ಹಿರಿಯರಾದ, ಗುರುಸ್ವಾಮಿ ಬಿದ್ದಂಡ ಪೊನ್ನಣ್ಣ, ಮತ್ತು ಸಮಿತಿಯ ಅಧ್ಯಕ್ಷ ಪಾಡಿಯಮ್ಮಂಡ ಮುತ್ತಮ್ಮಯ್ಯ, ಮತ್ತು ಬೊಟ್ಟೋಳಂಡ ಗಣೇಶ್‍ರವರ ನೇತೃತ್ವದಲ್ಲಿ ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಶಿವರಾತ್ರಿಯ ಮುನ್ನಾದಿನವಾದ ಫೆಬ್ರವರಿ 20 ರಂದು ಸಂಜೆ ನಾಪೋಕ್ಲುವಿನ ಭಗವತಿ ದೇವಸ್ಥಾನದ ಸಮುದಾಯ ಭವನದಲ್ಲಿ ಕಟ್ಟುತುಂಬಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗುವದು. ಭಕ್ತರ ಪ್ರೋತ್ಸಾಹದಿಂದ ಶ್ರೀ ಕಾವೇರಿ ಕ್ಷೇತ್ರದ ಅಭಿವೃದ್ದಿಗೆ ಸಹಾಯವಾಗುವ ಬೈವಾಡು ಇರುಮುಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವ ಭಕ್ತರು ವ್ರತಾಚರಣೆಯಲ್ಲಿರಬೇಕಾಗಿದ್ದು, ಕಾವೇರಿ ಬೈವಾಡು ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ಗುರುಸ್ವಾಮಿ ಬಿದ್ದಂಡ ಪೊನ್ನಣ್ಣ-9483620549, ಪಾಡಿಯಮ್ಮಂಡ ಮುತ್ತಮ್ಮಯ್ಯ ಅಧ್ಯಕ್ಷರು-9448721334 ಹಾಗೂ ಬೊಟ್ಟೋಳಂಡ ಗಣೇಶ್-- 9880136486 ಇವರುಗಳಿಂದ ಪಡೆದುಕೊಳ್ಳಬಹುದಾಗಿದೆ.

-ದುಗ್ಗಳ ಸದಾನಂದ