ಸಿದ್ದಾಪುರ, ಫೆ.10: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ನದಿ ತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ; ಪುನರ್ವಸತಿ ಕೂಡಲೇ ಕಲ್ಪಿಸಿಕೊಡ ಬೇಕೆಂದು ಒತ್ತಾಯಿಸಿ ಸಂತ್ರಸ್ತರು ಸಿದ್ದಾಪುರ ಗ್ರಾ.ಪಂ ಎದುರು ಸೋಮವಾರದಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಅವರು ಭೇಟಿ ನೀಡಿ ಮನವೊಲಿಸಿ ಭರವಸೆ ನೀಡಿದರೂ ಕೂಡ ಸಂತ್ರಸ್ತರು ಭರವಸೆಗೆ ಒಪ್ಪದೇ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಮುಂದು ವರೆಸಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯ ಪ್ರವಾಹದಿಂದಾಗಿ ಸಿದ್ದಾಪುರದ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನೂರಾರು ಮನೆಗಳು ಹಾನಿಯಾಗಿದ್ದವು. ಅಲ್ಲದೇ 60ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿತ್ತು. ಈ ಹಿನ್ನೆಲೆಯಲ್ಲಿ ನದಿತೀರದ ನಿವಾಸಿಗಳು ತಮಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸೆಪ್ಟೆಂಬರ್ 30ರಂದು ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದರು. ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ರವರು ಸಂತ್ರಸ್ತರಿಗೆ 3 ತಿಂಗಳ ಒಳಗೆ ನಿವೇಶನ ಗುರುತಿಸಿ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ 5 ತಿಂಗಳು ಕಳೆದರೂ ಸಿದ್ದಾಪುರ ಭಾಗದ ಸಂತ್ರಸ್ತರಿಗೆ ಶಾಶ್ವತ ಸೂರು ಸಿಕ್ಕಿಲ್ಲ.
ಆದ್ದರಿಂದ ಸಿದ್ದಾಪುರ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಸಿದ್ದಾಪುರದ ಪಂಚಾಯಿತಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಯನ್ನು ಹಮ್ಮಿಕೊಳ್ಳ ಲಾಯಿತು. ಪ್ರತಿಭಟನೆಗೆ ಸಂತ್ರಸ್ತ ಮಹಿಳೆ ವೆಳ್ಳೆಯಮ್ಮ ಗಿಡಕ್ಕೆ ನೀರೆರೆದು ಚಾಲನೆ ಯಿತ್ತರು. ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಓ.ಡಿ.ಪಿ. ಸಂಸ್ಥೆಯ ಜಿಲ್ಲಾ ಸಂಚಾಲಕಿ ಜಾಯಿಸ್ ಮೆನೆಜಸ್ ಮಾತನಾಡಿ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಜಿಲ್ಲಾಡಳಿತ ಕೂಡಲೇ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಸಂತ್ರಸ್ತರ ಹೋರಾಟ ಸಮಿತಿಯ ಪ್ರಮುಖರಾದ ಎಂ.ಎ. ಯಮುನಾ ಮಾತನಾಡಿ ಜಿಲ್ಲಾಡಳಿತದ ವತಿಯಿಂದ ಸಂತ್ರಸ್ತರಿಗೆ ನೀಡಿದ ಪರಿಹಾರದಲ್ಲಿ ತಾರತಮ್ಯವಾಗಿದ್ದು, ಸಂತ್ರಸ್ತ ಎಲ್ಲಾ ಕುಟುಂಬಗಳಿಗೂ ಸಮರ್ಪಕವಾಗಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ಸಂತ್ರಸ್ತರ ಹೋರಾಟ ಸಮಿತಿಯ ಪ್ರಮುಖ ರೆಜಿತ್ ಕುಮಾರ್ ಗುಹ್ಯ ಮಾತನಾಡಿ; ಸಿದ್ದಾಪುರ ವ್ಯಾಪ್ತಿಯಲ್ಲಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತರು ಕಳೆದ 6 ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು; ಇವರುಗಳಿಗೆ ಬಾಡಿಗೆ ಹಣವನ್ನೂ ನೀಡದೇ ಇರುವದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದಾಪುರ ಭಾಗದಲ್ಲಿ ಸಾಕಷ್ಟು ಒತ್ತುವರಿ ಭೂಮಿಗಳಿದ್ದರೂ ಕೂಡಾ ಜಿಲ್ಲಾಡಳಿತ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲು ವಿಳಂಬ ನೀತಿ ಅನುಸರಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಭೇಟಿ ನೀಡಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಕೆಲವು ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದ್ದು, ಸಂತ್ರಸ್ತರ ಪೈಕಿ ಸಂಪೂರ್ಣ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದರು. ಈಗಾಗಲೇ ಸಂತ್ರಸ್ತರ ಪಟ್ಟಿಗಳನ್ನು ತಯಾರಿಸಿದ್ದು, ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳನ್ನು ಎ ಪಟ್ಟಿಯಲ್ಲಿ ಹಾಗೂ ಭಾಗಶಃ ಹಾನಿಗೊಳಗಾದ ಸಂತ್ರಸ್ತರನ್ನು ಬಿ ಪಟ್ಟಿಯಲ್ಲಿ ಹಾಗೂ ಸಣ್ಣ ಪುಟ್ಟ ಹಾನಿಗೊಳಗಾದ ಮನೆಗಳನ್ನು ಸಿ ಪಟ್ಟಿಯಲ್ಲೂ ಸೇರ್ಪಡೆ ಗೊಳಿಸಲಾಗಿದೆ. ಎ ಪಟ್ಟಿಯಲ್ಲಿರುವ ಸಂಪೂರ್ಣ ಮನೆ ಕಳೆದುಕೊಂಡಿರುವ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ರೂ. 5 ಲಕ್ಷಗಳನ್ನು ಮನೆ ನಿರ್ಮಾಣಕ್ಕೆ ಪಂಚಾಯಿತಿಯ ಮುಖಾಂತರ ಜಿ.ಪಿ.ಎಸ್ ಮಾಡುವ ಮೂಲಕ ಫಲಾನುಭವಿಗಳ ಖಾತೆಗಳಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುವುದೆಂದು ತಿಳಿಸಿದರು. ಸಿದ್ದಾಪುರ ವ್ಯಾಪ್ತಿಯ ಸಂತ್ರಸ್ತರಿಗೆ ಈಗಾಗಲೇ ಜಾಗಗಳನ್ನು ಗುರುತಿಸಿದ್ದು, ಮುಂದಿನ 15 ದಿನಗಳೊಳಗೆ ಪುನರ್ವಸತಿ ಕಲ್ಪಿಸಲು ನಿವೇಶನವನ್ನು ಹಂಚಿಕೆ ಮಾಡಲಾಗುವುದೆಂದು ಭರವಸೆ ನೀಡಿದರು. ನಿವೇಶನವನ್ನು ಹಂಚಿಕೆ ಮಾಡಿದ ಬಳಿಕ ಸಂತ್ರಸ್ತರಿಗೆ ಆ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲು ರೂ. 50 ಸಾವಿರ ನೀಡಲಾಗುವುದೆಂದು ತಿಳಿಸಿದರು. ಅಧಿಕೃತ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು ಬಾಡಿಗೆದಾರರಿಗೂ ಕೂಡಾ ಬಾಡಿಗೆ ಹಣ ನೀಡಲಾಗಿದೆ ಅನಧಿಕೃತ ಮನೆಗಳ ಸಂತ್ರಸ್ತರಿಗೆ ಬಾಡಿಗೆ ಹಣದ ವಿಚಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆದರೆ ಸಂತ್ರಸ್ತರು ಇದಕ್ಕೆ ಒಪ್ಪದೇ ಉಪವಿಭಾಗಾಧಿಕಾರಿ ಅವರ ಭರವಸೆ ನಮಗೆ ಬೇಕಾಗಿಲ್ಲ. ಜಿಲ್ಲಾಧಿಕಾರಿಗಳು ನೀಡಿದ ಭರವಸೆ ಕೂಡಾ ಈಡೇರಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಪಂಚಾಯಿತಿ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಪ್ರತಿಭಟನಾ ಪ್ರಮುಖರ ನಡುವೆ ಚರ್ಚೆ ನಡೆಯಿತು. ಸಭೆಯು ವಿಫಲಗೊಂಡ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನೆ ಮುಂದು ವರೆಸುವುದಾಗಿ ಹೋರಾಟಗಾರರು ತಿಳಿಸಿದರು.
ಪ್ರತಿಭಟನೆಗಾರರು ‘ನಮ್ಮ ಭೂಮಿ ನಮ್ಮ ಹಕ್ಕು, ಭಿಕ್ಷೆಯಲ್ಲ ಭಿಕ್ಷೆಯಲ್ಲ’. ‘ಪಂಚಾಯಿತಿಗೆ ಧಿಕ್ಕಾರ, ಭರವಸೆ ಮಾತು ಬೇಕಾಗಿಲ್ಲ, ಶಾಶ್ವತ ಸೂರು ಕಲ್ಪಿಸಿಕೊಡಿ’ ಇತ್ಯಾದಿ ಘೋಷಣೆ ಗಳನ್ನು ಕೂಗಿದರು. ಪ್ರತಿಭಟನೆ ಸಭೆಯಲ್ಲಿ ಸಂತ್ರಸ್ತರ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಬೈಜು, ಕೃಷ್ಣ, ಮುಸ್ತಫಾ, ಓ.ಡಿ.ಪಿ. ಸಂಸ್ಥೆಯ ವಿಜಯ ನಾರಾಯಣ, ಆದಿವಾಸಿ ಸಮನ್ವಯ ಸಮಿತಿಯ ಅಧ್ಯಕ್ಷ ವೈ.ಕೆ. ಕೃಷ್ಣ ಹಾಗೂ ಸಿದ್ದಾಪುರ ಗ್ರಾ.ಪಂ ಸದಸ್ಯರುಗಳು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿ ಗಳು ಹಾಜರಿದ್ದರು. ಅಧಿಕಾರಿಗಳಾದ ವೀರಾಜಪೇಟೆ ತಹಶೀಲ್ದಾರ್ ಮಹೇಶ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್. ರಮೇಶ್, ಗ್ರಾಮಲೆಕ್ಕಿಗರಾದ ಓಮಪ್ಪ ಬಣಾಕರ್, ಅನೀಶ್, ಪಿ.ಡಿ.ಓ. ವಿಶ್ವನಾಥ್ ಇನ್ನಿತರರು ಹಾಜರಿದ್ದರು. - ವಾಸು