ಸೋಮವಾರಪೇಟೆ,ಫೆ.10: ಪ್ರೋ ಕಬಡ್ಡಿಗೆ ಸರಿಸಾಟಿಯಾಗಿ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿತಗೊಂಡಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಫೈನಲ್‍ನಲ್ಲಿ ಸಂಘಟನಾತ್ಮಕ ಪಟುಗಳೊಂದಿಗೆ ಅದ್ಭುತ ಆಟ ಪ್ರದರ್ಶಿಸಿದ ಬಲಿಷ್ಠ ಬ್ಯಾಂಕ್ ಆಫ್ ಬರೋಡಾ ತಂಡ, ಪ್ರತಿಷ್ಠಿತ ಒಕ್ಕಲಿಗ ಕಬಡ್ಡಿ ಕಪ್‍ನ್ನು ತನ್ನ ಮುಡಿಗೇರಿಸಿಕೊಂಡಿತು.

ತಾಲೂಕು ಒಕ್ಕಲಿಗರ ಯುವ ವೇದಿಕೆ ಮತ್ತು ರಾಜ್ಯ ಹಾಗೂ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಬೆಂಗಳೂರಿನ ಬಲಿಷ್ಠ ತಂಡÀ ಬ್ಯಾಂಕ್ ಆಫ್ ಬರೋಡ (ಹಿಂದಿನ ವಿಜಯ ಬ್ಯಾಂಕ್) ಪ್ರಥಮ ಸ್ಥಾನ ಪಡೆದರೆ, ಬೆಂಗಳೂರು ಸಿಟಿ ಟೀಂ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಭಾನುವಾರ ರಾತ್ರಿ 1 ಗಂಟೆಗೆ ಪ್ರಾರಂಭವಾದ ರೋಚಕ ಫೈನಲ್‍ನಲ್ಲಿ ಬಲಿಷ್ಠ ತಂಡವೆಂದೇ ಬಿಂಬಿತವಾಗಿದ್ದ ಬೆಂಗಳೂರು ಸಿಟಿ ಟೀಮ್ ವಿರುದ್ಧ 34-26 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ, 1 ಲಕ್ಷ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ಬ್ಯಾಂಕ್ ಆಫ್ ಬರೋಡಾ ತಂಡ ತನ್ನದಾಗಿಸಿ ಕೊಂಡಿತು.

ರನ್ನರ್ ಅಪ್ ತಂಡ ರೂ. 60ಸಾವಿರ ನಗದು ಹಾಗೂ ಟ್ರೋಫಿ üಯನ್ನು ಪಡೆಯಿತು. ಎಸ್.ಡಿ.ಎಂ. ಉಜಿರೆ ತಂಡ ತೃತೀಯ, ಬೆಂಗಳೂರಿನ ಕಸ್ಟಮ್ಸ್ ಮತ್ತು ಜಿ.ಎಸ್.ಟಿ. ತಂಡ ಚತುರ್ಥ ಬಹುಮಾನ ಪಡೆಯಿತು. ಫೆ.8ರಂದು ಇದೇ ಅಂಕಣದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಜೆ.ಬಿ.ಎಸ್.ಸಿ ಕುಶಾಲನಗರ ಪ್ರಥಮ ಹಾಗೂ ಟಿ.ಡಿ.ಎಫ್.ಸಿ.ತೊರೆನೂರು ತಂಡ ದ್ವಿತೀಯ ಸ್ಥಾನದೊಂದಿಗೆ ನಗದು ಬಹುಮಾನ ಪಡೆಯಿತು.

ಬ್ಯಾಂಕ್ ಆಫ್ ಬರೋಡ ತಂಡದಲ್ಲಿ ಸೋಮವಾರಪೇಟೆಯ ಕಬಡ್ಡಿ ಪಟು ರತನ್ ಕೂತಿ, ಪ್ರಶಾಂತ್ ರೈ, ಸುಖೇಶ್ ಹೆಗ್ಡೆ, ಸಚಿನ್ ಸುವರ್ಣ, ಸುನಿಲ್ ಅವರುಗಳು ತಮ್ಮ ಅದ್ಬುತ ಆಟದ ಮೂಲಕ ಸಾವಿರಾರು ಕ್ರೀಡಾಭಿಮಾನಿಗಳ ಗಮನ ಸೆಳೆದರು. ಬೆಂಗಳೂರು ಸಿಟಿ ತಂಡದಲ್ಲಿ ಹಾಲಪ್ಪ, ಸಂತೋಷ್, ಪವನ್, ಮನೋಜ್ ಅತ್ಯುತ್ತಮ ಆಟ ಪ್ರದರ್ಶಿಸಿ, ಕಬಡ್ಡಿ ಅಭಿಮಾನಿಗಳನ್ನು ರಂಜಿಸಿದರು.

ಮೊದಲ ಸೆಮಿಫೈನಲ್‍ನಲ್ಲಿ ಬ್ಯಾಂಕ್ ಆಫ್ ಬರೋಡ ತಂಡ, ಎಸ್.ಡಿ.ಎಂ. ಉಜಿರೆ ತಂಡವನ್ನು 31-18 ಅಂಕಗಳ ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೇಮಿಸ್‍ನಲ್ಲಿ ಬೆಂಗಳೂರು ಸಿಟಿ ತಂಡ ಕಸ್ಟಮ್ಸ್ ತಂಡವನ್ನು 37-21 ಅಂಕಗಳ ಅಂತರದಲ್ಲಿ ಸೋಲಿಸಿ ಫೈನಲ್‍ಗೆ ಲಗ್ಗೆಯಿಟ್ಟಿತು.

ಫೈನಲ್ ಪಂದ್ಯಾಟಕ್ಕೆ ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕಬಡ್ಡಿ ಗ್ರಾಮೀಣ ಕ್ರೀಡೆ, ನಾನೂ ಸೇರಿದಂತೆ ಹೆಚ್ಚಿನ ಗ್ರಾಮೀಣ ಪ್ರತಿಭೆಗಳಿಗೆ ಅನ್ನ ಕೊಡುತ್ತಿದೆ. ಕಷ್ಟಪಟ್ಟು ಕಬಡ್ಡಿ ಕಲಿತರೆ, ಈ ಕ್ರೀಡೆ ಬದುಕು ಕಟ್ಟಿಕೊಡುತ್ತದೆ ಎಂದರು.

ಸೋಮವಾರಪೇಟೆಯಂತಹ ಗ್ರಾಮೀಣ ಪ್ರದೇಶದಲ್ಲಿ ಕಬಡ್ಡಿ ಕ್ರೀಡೆಗೆ ಇಷ್ಟೊಂದು ಬೆಂಬಲ, ಪ್ರೋತ್ಸಾಹ ದೊರಕುತ್ತಿರುವದು ಶ್ಲಾಘನೀಯ. ಕಬಡ್ಡಿಗೆ ಉತ್ತಮ ಭವಿಷ್ಯವಿದೆ ಎಂಬದರಲ್ಲಿ ಸಂಶಯವಿಲ್ಲ. ಆಸಕ್ತಿಯಿರುವ ಪ್ರತಿಯೊಬ್ಬರನ್ನು ಈ ಕ್ರೀಡೆಗೆ ಕಳುಹಿಸಿಕೊಡಬೇಕು. ಒಕ್ಕಲಿಗರ ಯುವ ವೇದಿಕೆಯಿಂದ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲು ಮುಂದಾದರೆ ಸಂಪೂರ್ಣ ಬೆಂಬಲ ನೀಡುವದಾಗಿ ಭರವಸೆ ನೀಡಿದರು.

ಇದೇ ಸಂದರ್ಭ ಬಿ.ಸಿ.ರಮೇಶ್ ಅವರನ್ನು ಸನ್ಮಾನಿಸಲಾಯಿತು. ಪ್ರೋ ಕಬಡ್ಡಿ ಆಟಗಾರರಾದ ಪ್ರಶಾಂತ್ ರೈ, ಸುಖೇಶ್ ಹೆಗ್ಡೆ, ಆನಂದ್, ಪ್ರಪಂಚನ್, ನಿತೇಶ್, ಪವನ್, ಸಂತೋಷ್, ಅವಿನಾಶ್, ಸುನಿಲ್, ಸಚಿನ್ ವಿಟ್ಲ, ಅಥ್ಲೇಟ್ ಕೂತಿ ಗ್ರಾಮದ ಟಿ.ಎಂ. ರಾಶಿ ಹಾಗು ಪಂದ್ಯಾಟಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.

ಬ್ಯಾಂಕ್ ಆಫ್ ಬರೋಡಾದ ರತನ್ ಕೂತಿ ಬೆಸ್ಟ್ ರೈಡರ್, ಬೆಂಗಳೂರು ಸಿಟಿ ಟೀಮ್‍ನ ಮನೋಜ್ ಬೆಸ್ಟ್ ಕ್ಯಾಚರ್, ಬೆಸ್ಟ್ ಆಲ್ ರೌಂಡರ್ ಸಿಟಿ ಟೀಮ್‍ನ ಪ್ರಶಾಂತ್ ಕುಮಾರ್ ಪ್ರಶಸ್ತಿ ಪಡೆದರು. ಉದಯೋನ್ಮುಖ ಆಟಗಾರರಾಗಿ ಉಜಿರೆ ತಂಡದ ಮನೀಶ್ ಹೊರಹೊಮ್ಮಿದರು. ಸಮಾರೋಪ ಸಮಾರಂಭದಲ್ಲಿ ಮಹಾತ್ಮಾಗಾಂಧಿ ಟ್ರಸ್ಟ್‍ನ ಅವಧೂತರಾದ ವಿನಯ್ ಗುರೂಜಿ, ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್, ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಮಂಜೂರು ತಮ್ಮಣ್ಣಿ, ಯಶವಂತ್ ಬೆಳ್ಳಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪಂದ್ಯಾವಳಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಬೆಂಗಳೂರು ಬ್ಯಾಂಕ್ ಆಫ್ ಬರೋಡ, ಬೆಂಗಳೂರು ಗ್ರಾಮಾಂತರ, ಕಸ್ಟಮ್ಸ್ ಬೆಂಗಳೂರು, ರಾಯಲ್ಸ್ ಬೆಂಗಳೂರು, ಬೆಂಗಳೂರು ನಗರ, ಮೈಸೂರು ತಂಡ ಬಲಿಷ್ಠ ತಂಡಗಳಾಗಿದ್ದವು. ಶನಿವಾರ ರಾತ್ರಿ ವಿಪರೀತ ಮಂಜು ಸುರಿದ ಪರಿಣಾಮ, 9.30ರ ನಂತರ ಮ್ಯಾಟ್ ಅಂಕಣದಲ್ಲಿ ನೀರು ಸಂಗ್ರಹವಾಗಿ ಆಟವಾಡಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಬಡ್ಡಿ ಅಭಿಮಾನಿಗಳಿಗೆ ನಿರಾಶೆಯಾಗಿತ್ತು. ಈ ಕಾರಣದಿಂದ ಭಾನುವಾರ ರಾತ್ರಿ ಅಂಕಣದ ಮೇಲ್ಭಾಗ ಮೆಶ್ ಅಳವಡಿಸಿ, ಕಬಡ್ಡಿಗೆ ಯಾವದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಯಿತು.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಪಂದ್ಯಾಟಗಳನ್ನು ವೀಕ್ಷಿಸಿದರು. ಸಾವಿರಾರು ಸಂಖ್ಯೆಯಲ್ಲಿ ಗ್ಯಾಲರಿ ಯಲ್ಲಿ ಕ್ರೀಡಾಭಿಮಾನಿಗಳು ನೆರೆದಿದ್ದರು. ಸೋಮವಾರಪೇಟೆ ಮಾತ್ರವಲ್ಲದೇ, ಮಡಿಕೇರಿ, ವೀರಾಜಪೇಟೆ, ಕೊಣನೂರು, ಅರಕಲಗೂಡು, ಸಕಲೇಶಪುರ ದಿಂದಲೂ ನೂರಾರು ವಾಹನಗಳಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿದ್ದರು.

ಸಿರಸಿಯ ಗುರುರಾಜ್ ಅವರ ವೀಕ್ಷಕ ವಿವರಣೆ ಎಲ್ಲರ ಗಮನ ಸೆಳೆಯಿತು. ತೀರ್ಪುಗಾರರಾಗಿ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿ ಯೇಷನ್ ತೀರ್ಪುಗಾರರಾದ ಬೆಂಗಳೂರಿನ ಷಣ್ಮುಖಂ, ಶಿವಣ್ಣ, ನಂಜೇಶ್‍ಗೌಡ, ಅರುಣ್, ವಿಶ್ವನಾಥ್, ರವಿ, ರಾಜು, ಶಮೀರ್, ಗೋಪಾಲ್, ರವಿ ಮೈಸೂರು, ಕುಮಾರ್ ಚಿಕ್ಕಮಗಳೂರು, ರಂಗಸ್ವಾಮಿ ಮಂಡ್ಯ, ಕೊಡಗಿನ ಎ.ಎಂ. ಆನಂದ್, ಗೌಡಳ್ಳಿ ಪ್ರವೀಣ್, ಅಮೃತ್ ತಾಕೇರಿ, ರಮೇಶ್ ಬಳಗುಂದ, ಶನಿವಾರಸಂತೆ ಆದರ್ಶ್, ಶಿರಂಗಾಲ ಮಧು, ಜಿ.ಎಸ್.ಶೈಲ, ಬಿ.ಜಿ.ರಾಗಿಣಿ ಕಾರ್ಯನಿರ್ವಹಿಸಿದರು.

- ವಿಜಯ್ ಹಾನಗಲ್