ಗೋಣಿಕೊಪ್ಪಲು, ಫೆ.10: ಬೆಂಗಳೂರಿನ ಕೊಡವ ರೈಡರ್ಸ್ ಕ್ಲಬ್,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ,ಕೊಡವ ಸಮಾಜ ಬೆಂಗಳೂರು, ಕೊಡವ ಸಮಾಜ ಯೂತ್ ಕೌನ್ಸಿಲ್, ಲಯನ್ಸ್ ಕ್ಲಬ್ ಕೊಡಗು,ಅಖಿಲ ಕೊಡವ ಸಮಾಜ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ತಾ.15ರಂದು ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದರು.
ಗೋಣಿಕೊಪ್ಪಲುವಿನ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕೊಡವ ರೈಡರ್ಸ್ ಕ್ಲಬ್ನ ನೂರಾರು ಯುವಕರು ರ್ಯಾಲಿ ನಡೆಸಲು ಮುಂದೆ ಬಂದಿದ್ದು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 1 ಗಂಟೆಗೆ ಗೋಣಿಕೊಪ್ಪಕ್ಕೆ ರ್ಯಾಲಿ ತಲುಪಲಿದ್ದು ನಂತರ ಬೃಹತ್ ಸಭೆಯು ಕಾಲೇಜು ಆವರಣದಲ್ಲಿ ನಡೆಯಲಿದೆ. ಸಭೆಗೆ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಕೊಡವ ರೈಡರ್ಸ್ ಕ್ಲಬ್ನ ಮುಖ್ಯಸ್ಥರಾದ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಮಾತನಾಡಿ ಅಪ್ಪಂಡೇರಂಡ ಯಶ್ವಂತ್ ಕಾಳಪ್ಪ, ಅಪ್ಪಂಡೇರಂಡ ದೇವಯ್ಯ, ಪಳೆಯಂಗಡ ಸ್ಮಿತ್, ಗುಡಿಯಂಗಡ ಲಿಖಿನ್, ಮಲ್ಲೆಂಗಡ ಸೋಮಣ್ಣ, ಅಜ್ಜಿಕುಟ್ಟಿರ ಮಾದಯ್ಯ ಮುಂತಾದ ಯುವಕರು ಈ ಹಿಂದಿನಿಂದಲೂ ಕ್ಲಬ್ ಆಶ್ರಯದಲ್ಲಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮವನ್ನು ನಡೆಸುವ ಮೂಲಕ ಯಶಸ್ವಿಯಾಗಿ ದ್ದಾರೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಇವರೆಲ್ಲರ ಸಹಕಾರದಿಂದ ತಾ. 15ರ ಮುಂಜಾನೆ 5 ಗಂಟೆಗೆ ಬೆಂಗಳೂರಿನ ಕೊಡವ ಸಮಾಜದ ಆವರಣದಲ್ಲಿ ನಿವೃತ್ತ ಎಸಿಪಿ ಬಿದ್ದಂಡ ಅಶೋಕ್ ಕುಮಾರ್ ಅವರು ರ್ಯಾಲಿಗೆ ಚಾಲನೆ ನೀಡಲಿದ್ದಾರೆ. 8 ಗಂಟೆಗೆ ಮಂಡ್ಯ ತಲುಪಲಿದ್ದು ಶ್ರೀರಂಗಪಟ್ಟಣ, ಇಲವಾಲ, ಮೂಲಕ ಕೊಡಗಿನ ಆನೆ ಚೌಕೂರಿನ ಮೂಲಕ ಗೋಣಿ ಕೊಪ್ಪಲುವಿನ ಕಾವೇರಿ ಕಾಲೇಜು ಬಳಿ ಮುಕ್ತಾಯಗೊಳ್ಳಲಿದೆ ಎಂದರು. ಗೋಷ್ಠಿಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ, ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಕೊಡವ ರೈಡರ್ಸ್ ಕ್ಲಬ್ನ ಪ್ರಮುಖರಾದ ಸಣ್ಣುವಂಡ ದರ್ಶನ್ ಉಪಸ್ಥಿತರಿದ್ದರು.