ಮಡಿಕೇರಿ, ಫೆ. 10: ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಕ್ಲಬ್, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತರಿಗೆ ಕಾಫಿ ಕುಯ್ಲು ಕಾರ್ಯಕ್ರಮ ನಡೆಯಿತು. ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷರಾದ ಎಸ್.ಎಂ. ಚಂಗಪ್ಪ ಅವರ ಕುಂದಾ ಗ್ರಾಮದಲ್ಲಿ ಇರುವ ನಾಡುಗುಂಡಿ ಎಸ್ಟೇಟ್‍ನಲ್ಲಿ ನಡೆದ ವಿಭಿನ್ನ ಕಾರ್ಯಕ್ರಮದಲ್ಲಿ ಜಿಲ್ಲೆಯ ಪತ್ರಕರ್ತರು ಪಾಲ್ಗೊಂಡಿದ್ದರು.

ಎರಡನೇ ವರ್ಷದ ಕಾಫಿ ಕುಯ್ಲು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅತಿ ಹೆಚ್ಚು ಕಾಫಿ ಕುಯ್ಲು ಮಾಡಿದ ಪತ್ರಕರ್ತರಿಗೆ ಬಹುಮಾನ ಘೋಷಣೆ ಮಾಡಲಾಗಿತ್ತು. ಇದರಲ್ಲಿ ವಿಶ್ವ ಕುಂಬೂರು ಹಾಗೂ ವಿಘ್ನೇಶ್ ಭೂತನಕಾಡು ಜೋಡಿ ಪ್ರಥಮ ಸ್ಥಾನ ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ಪಾರ್ಥ ಚಿಣ್ಣಪ್ಪ ಹಾಗೂ ಚೆನ್ನನಾಯಕ್ ಜೋಡಿ ಪಡೆದುಕೊಂಡರೆ, ತೃತೀಯ ಬಹುಮಾನವನ್ನು ರೆಜಿತ್ ಕುಮಾರ್ ಹಾಗೂ ರಿಜ್ವಾನ್ ಜೋಡಿ ಪಡೆದುಕೊಂಡರು. ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಬಹುಮಾನ ವಿತರಣೆ ಮಾಡಿದರು. ವೇದಿಕೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾರೈ, ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಂಘದ ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ, ಕೆ.ಎ. ಆದಿತ್ಯ, ಪ್ರಧಾನ ಕಾರ್ಯದರ್ಶಿ, ಬಾಚರಣಿಯಂಡ ಅನುಕಾರ್ಯಪ್ಪ, ಪ್ರೆಸ್‍ಕ್ಲಬ್ ಖಜಾಂಚಿ ರೆಜಿತ್ ಕುಮಾರ್ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಆನಂದ್ ಕೊಡಗು ಕಾರ್ಯಕ್ರಮ ನಿರೂಪಣೆ ಮಾಡಿದರು. ಜಿಲ್ಲೆಯ ಮೂಲೆಮೂಲೆಗಳಿಂದ ಸುಮಾರು 34 ಮಂದಿ ಪತ್ರಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಅನುಭವ ಪಡೆದರು.