ಸೋಮವಾರಪೇಟೆ,ಫೆ.10: ತಾಲೂಕಿನ 10 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ರೂ. 7.52ಕೋಟಿ ವೆಚ್ಚದ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಆಲೂರು ಸಿದ್ದಾಪುರ, ಶನಿವಾರಸಂತೆ ಗ್ರಾಮ ಪಂಚಾಯ್ತಿಗೆ 138 ಲಕ್ಷ, ದುಂಡಳ್ಳಿಗೆ 43ಲಕ್ಷ, ಗೌಡಳ್ಳಿ ಗ್ರಾ.ಪಂ.ಗೆ 53 ಲಕ್ಷ, ದೊಡ್ಡಮಳ್ತೆಗೆ 63 ಲಕ್ಷ, ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ 68 ಲಕ್ಷ, ಬ್ಯಾಡಗೊಟ್ಟ ವ್ಯಾಪ್ತಿಯಲ್ಲಿ 23 ಲಕ್ಷ, ಕೊಡ್ಲಿಪೇಟೆಗೆ 161 ಲಕ್ಷ, ಬೆಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 58 ಲಕ್ಷ ಸೇರಿದಂತೆ ಒಟ್ಟು 7.52 ಕೋಟಿ ರೂ. ಗಳ ಕಾಮಗಾರಿಗಳಿವೆ ಚಾಲನೆ ನೀಡಲಾಗಿದೆ. ಶನಿವಾರಸಂತೆ ಹಾಗೂ ಕೊಡ್ಲಿಪೇಟೆಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ತಲಾ 50ಲಕ್ಷ ಒದಗಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಕೊಡಗು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಸಾಕಷ್ಟು ಅನುದಾನ ಒದಗಿಸಿದ್ದಾರೆ. ಪ್ರತಿ ರಸ್ತೆಗಳಿಗೆ ಕನಿಷ್ಟ 5 ಲಕ್ಷ ಒದಗಿಸುವ ಮೂಲಕ ರಸ್ತೆ ಅಭಿವೃದ್ಧಿಗೆ ಒತ್ತು ನೀಡುವ ಕೆಲಸ ಮಾಡಲಾಗಿದೆ ಎಂದರು.

ಈ ಸಂದರ್ಭ ಜಿ.ಪಂ ಸದಸ್ಯರಾದ ಸರೋಜಮ್ಮ, ಪುಟ್ಟರಾಜು, ತಾ.ಪಂ ಸದಸ್ಯರಾದ ಕುಶಾಲಪ್ಪ, ಲೀಲಾವತಿ, ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಾರ್ವತಮ್ಮ, ಸ್ಥಳಿಯ ಗ್ರಾ.ಪಂ ಅಧ್ಯಕ್ಷರುಗಳು, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರುಗಳಾದ ಭರತ್‍ಕುಮಾರ್, ಸುನೀಲ್, ನವೀನ್ ಅಜ್ಜಳ್ಳಿ, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.