ಮಡಿಕೇರಿ, ಫೆ.10 : ಮಕ್ಕಳಲ್ಲಿ ಸ್ವಚ್ಛತೆ ಮತ್ತು ಹಸಿರಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಹೊರ ವಲಯದಲ್ಲಿರುವ ಇಬ್ಬನಿ ರೆಸಾರ್ಟ್ ವತಿಯಿಂದ ತಾ.12ರಂದು ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ರೆಸಾರ್ಟ್‍ನ ಮಾಲೀಕ ನಿವೃತ್ತ ಕ್ಯಾಪ್ಟನ್ ಸೆಬಾಸ್ಟಿನ್ ತಿಳಿಸಿದರು.

ಸುದ್ದಿಗೊಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಪೂರ್ವಾಹ್ನ 8.30 ಗಂಟೆಗೆ ನಗರದ ಸುದರ್ಶನ ವೃತ್ತದಿಂದ ಅರಣ್ಯ ಭವನದವರೆಗೆ ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಮ್ಯಾರಥಾನ್ ನಡೆಯಲಿದ್ದು, ಪೂರ್ವಾಹ್ನ ರೆಸಾರ್ಟ್‍ನಲ್ಲಿ ಸಭಾ ಕಾರ್ಯಕ್ರಮ ಹಾಗೂ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಕುರಿತ ಕಿರುಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರೆಸಾರ್ಟ್‍ನಲ್ಲಿ ನಾವು ಕೈಗೊಂಡಿರುವ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಕ್ರಮಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಹಾಜರಿದ್ದ ರೆಸಾರ್ಟ್‍ನ ಸಲಹೆಗಾರ ಎಂ.ಎ. ನಿರಂಜನ್ ಅವರು ಮಾತನಾಡಿ, ಇಬ್ಬನಿ ರೆಸಾರ್ಟ್ ಆರಂಭದಿಂದಲೂ ಪರಿಸರ ಸಂರಕ್ಷಣೆಯೊಂದಿಗೆ ಸ್ವಚ್ಛತೆಗೂ ಒತ್ತು ನೀಡುತ್ತಾ ಬಂದಿದೆ. ಇದರೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದು, ಶಾಲೆಗಳು, ಅಂಗನವಾಡಿಗಳು, ಅನಾಥಾಶ್ರಮ ಗಳಿಗೆ ನೆರವು ನೀಡುತ್ತಾ ಬರುತ್ತಿದೆ. ತಾ.12ರಂದು ಪೂರ್ವಾಹ್ನ 11ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮ ದಲ್ಲಿ ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಮಾಜಿ ಸಚಿವ ಎಂ.ಸಿ.ನಾಣಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಶೆರಿ ಸೆಬಾಸ್ಟಿನ್ ಉಪಸ್ಥಿತರಿದ್ದರು.