ಮಡಿಕೇರಿ, ಫೆ. 9: ದಕ್ಷಿಣ ಕೊಡಗಿನ ಕಾನೂರು ಬಳಿ ಲಕ್ಷ್ಮಣತೀರ್ಥ ಹೊಳೆ ಬದಿಯಲ್ಲಿ ಅಪರಿಚಿತ ಮಹಿಳೆಯ ಕಳೇಬರ ಪತ್ತೆಯಾಗಿದ್ದು; ಇದೊಂದು ಅಸಹಜ ಸಾವಿನ ಪ್ರಕರಣವೆಂದು ಪೊಲೀಸರು ಶಂಕೆಯೊಂದಿಗೆ ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರಿಂದ ಲಭಿಸಿರುವ ಮಾಹಿತಿ ಮೇರೆಗೆ ಪೊನ್ನಂಪೇಟೆ ಹಾಗೂ ಕುಟ್ಟ ಠಾಣೆಯ ಪೊಲೀಸರು ಕಾನೂನು ಕ್ರಮದೊಂದಿಗೆ ಸ್ಥಳ ಮಹಜರು ನಡೆಸಿದ್ದಾರೆ.ಕಾನೂರು - ಬೆಕ್ಕೆಸೊಡ್ಲೂರು ವಿಗೆ ಒಳಪಡುವ ನಿರ್ಜನ ಸ್ಥಳದಲ್ಲಿ ಈ ಅಪರಿಚಿತ ಶವದ ಕುರುಹು ಪತ್ತೆಯಾಗಿದೆ. ಯಾರೋ ಅಪರಿಚಿತ ಮಹಿಳೆ ಅಥವಾ ಯುವತಿಗೆ ಸಂಬಂಧಿಸಿದ ಕಳೇಬರ ಇರಬಹುದೆಂದು ಊಹಿಸಲಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಗೆ ಲಭಿಸಿರುವ ಮಾಹಿತಿ ಮೇರೆಗೆ ಇಂದು ಅಪರಾಹ್ನ ಠಾಣಾಧಿಕಾರಿ ಕುಮಾರ್, ಎಎಸ್‍ಐ ಉದಯಕುಮಾರ್ ಹಾಗೂ ಸಿಬ್ಬಂದಿ ತೆರಳಿ ಪರಿಶೀಲಿಸಿದಾಗ; ತಲೆಬುರುಡೆ ಮತ್ತು ಮೂಳೆಗಳು ಗೋಚರಿಸಿವೆ. ಅಲ್ಲದೆ ಪಕ್ಕದಲ್ಲಿ ಹೆಣ್ಣು ಧರಿಸುವ ಕಪ್ಪುವರ್ಣದ ಪ್ಯಾಂಟೊಂದು ಕಂಡು ಬಂದಿದೆ. ಇದರೊಂದಿಗೆ ಪಿಂಕ್, ಹಸಿರು, ನೀಲಿ ಮಿಶ್ರಿತ ಎರಡು ಚೂಡಿದಾರ ಪತ್ತೆಯಾಗಿದೆ.
ಸ್ಥಳದಲ್ಲೇ ಪರೀಕ್ಷೆ : ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಕೊಲೆ ಕೃತ್ಯ ಎಂದು ಗೋಚರಿಸಿದ್ದು; ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕ ಪರಶಿವ ಮೂರ್ತಿ ಸ್ಥಳಕ್ಕೆ ಆಗಮಿಸುವದ ರೊಂದಿಗೆ; ಮಡಿಕೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡಾ. ಯೋಗೇಶ್ ಅವರನ್ನು ಆಹ್ವಾನಿಸುವದರೊಂದಿಗೆ; ಕಳೇಬರಹದ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲೇ ನಡೆಸಲಾಯಿತು.
ಘಟನೆ ಸ್ಥಳದಲ್ಲಿ ಲಭಿಸಿರುವ ತಲೆಬುರುಡೆ ಹಾಗೂ ಮೂಳೆಗಳ ಪ್ರಕಾರ ತೀರಾ ಕೃಷಕಾಯ ಶರೀರದ 26ರ ಆಸುಪಾಸಿನ ಹೆಣ್ಣು ಕೊಲೆಗೀಡಾಗಿರುವ ಸಂಶಯ ಹುಟ್ಟಿಕೊಂಡಿದ್ದು; ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪತ್ತೆಯಾಗಿರುವ ವಸ್ತ್ರಕ್ಕೆ ಬೆಂಕಿ ತಗಲಿರುವ ಕುರುಹು ಲಭಿಸಿದ್ದು; ಇನ್ನಷ್ಟೇ ಸತ್ತಾಕೆ ಯಾರು; ಎಲ್ಲಿಯವರು, ಯಾವ ಕಾರಣಕ್ಕಾಗಿ ಕೊಲೆ ಸಂಭವಿಸಿದೆ ಎನ್ನುವ ವಿವರ ಲಭಿಸಬೇಕಿದೆ.