ಕುಶಾಲನಗರ, ಫೆ. 1: ಬಾರೊಂದರಲ್ಲಿ ರಾತ್ರಿ ವೇಳೆ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸ್ ಪೇದೆಯೋರ್ವ 25 ಸಾವಿರ ರೂ. ವಸೂಲಿ ಮಾಡಿದ ಪ್ರಕರಣ ಶನಿವಾರ ನಡೆದು ಆಕ್ರೋಶಗೊಂಡ ಜನರು ಪೊಲೀಸ್ ಪೇದೆಗೆ ಕೆಲಕಾಲ ದಿಗ್ಭಂದನ ಹಾಕಿದ ಘಟನೆ ನಡೆದಿದೆ. ಕುಶಾಲನಗರ- ಮಡಿಕೇರಿ ರಸ್ತೆಯ ಗಂಧದಕೋಟೆ ಬಳಿ ಬಾರೊಂದರಲ್ಲಿ ಶುಕ್ರವಾರ ರಾತ್ರಿ ಸ್ಥಳೀಯ ಗ್ಯಾರೆಜ್‍ನ ಮೂವರು ಸಿಬ್ಬಂದಿ ತೆರಳಿದ್ದ ಸಂದರ್ಭ ವ್ಯಕ್ತಿಯೋರ್ವ ಇವರೊಂದಿಗೆ ಮಾತಿಗೆ ಮಾತು ಬೆಳೆಸಿ ನಂತರ ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ನಂತರ ಕುಶಾಲನಗರ ಟ್ರಾಫಿಕ್ ಪೊಲೀಸ್ ವಿಜಯಕುಮಾರ್ ಹೊಸಮನಿ ಎಂಬಾತ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಗ್ಯಾರೆಜ್‍ಗೆ ಇತರೆ ಇಬ್ಬರೊಂದಿಗೆ ಬಂದು ಬೆದರಿಸಿ ದಿನೇಶ್ ರೈ, ಅರುಣ, ಮನು ಎಂಬವರಿಂದ 40 ಸಾವಿರಕ್ಕೆ ಬೇಡಿಕೆಯಿಟ್ಟು ಕೊನೆಗೆ 25 ಸಾವಿರ ಡೀಲ್ ಕುದುರಿಸಿರುವುದಾಗಿ ಗ್ಯಾರೆಜ್‍ನ ತೇಜಸ್ ತಿಳಿಸಿದ್ದಾರೆ. ವಿಜಯಕುಮಾರ್ ಸಹೋದರನಿಗೆ ಬಾರ್ ಬಳಿ ಗ್ಯಾರೆಜ್‍ನ ಸಿಬ್ಬಂದಿ ಹಲ್ಲೆ ನಡೆಸಿರುವ ಹಿನೆÀ್ನಲೆಯಲ್ಲಿ ಚಿಕಿತ್ಸೆಗೆ ಈ ಹಣ ಪಡೆದಿರುವುದಾಗಿ ಪೊಲೀಸ್ ಸಿಬ್ಬಂದಿ ವಿಜಯಕುಮಾರ್ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ತಪ್ಪೊಪ್ಪಿಗೆ ಪತ್ರವೊಂದನ್ನು ಕೂಡ ಪೊಲೀಸ್ ಬರೆಸಿಕೊಂಡಿದ್ದು ಅದರಲ್ಲಿ ಹಣ ಪಾವತಿಯಾಗಿರುವ ಬಗ್ಗೆ ದಾಖಲಿಸಿ ಅದಕ್ಕೆ ಸಾಕ್ಷಿಯಾಗಿ ಪೊಲೀಸ್ ವಿಜಯಕುಮಾರ್ ಸಹಿ ಕೂಡ ಹಾಕಿರುವುದು ಗೋಚರಿಸಿದೆ. ಈ ಸಂದರ್ಭ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಗ್ಯಾರೆಜ್ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂತು. ಮಾಹಿತಿ ತಿಳಿದ ಸ್ಥಳೀಯ ಗ್ಯಾರೆಜ್ ಕಾರ್ಮಿಕರ ಸಂಘದ ಪ್ರಮುಖರು ಪೊಲೀಸ್‍ನೊಂದಿಗೆ ಈ ಬಗ್ಗೆ ಚರ್ಚೆಗಿಳಿದಾಗ ಗೊಂದಲಕ್ಕೀಡಾದ ವಿಜಯಕುಮಾರ್ ತನ್ನ ಸಹವರ್ತಿಗಳನ್ನು ಕರೆಸಿಕೊಂಡು ಅಲ್ಲಿಂದ ಕಾಲ್ಕಿಳುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ಪ್ರಕರಣ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ವೇಳೆ ನ್ಯಾಯ ಕೇಳಲು ಹೋದ ವ್ಯಕ್ತಿಗಳನ್ನೇ ಪೊಲೀಸ್ ಠಾಣೆ ಒಳಗೆ ಕೂರಿಸಿ ಸತಾಯಿಸಿರುವ ಬಗ್ಗೆ ಸಂಘದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿಸಿದ ಡಿವೈಎಸ್ಪಿ ಎಚ್.ಎಂ.ಶೈಲೇಂದ್ರ ಪ್ರಕರಣದ ಬಗ್ಗೆ ಮಾಹಿತಿ ಪಡೆದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

-ಸಿಂಚು