*ಸಿದ್ದಾಪುರ, ಫೆ.2: ಕಳೆದ ಮಳೆಗಾಲದಲ್ಲಿ ಉಂಟಾದ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ವಾಲ್ನೂರು ಹೊಳೆಕರೆಯ ಸುಮಾರು 35 ಕುಟುಂಬಗಳ ಬದುಕು ಡೋಲಾಯಮಾನವಾಗಿದೆ.
ಮನೆಗಳು ಹಾನಿಗೀಡಾಗಿರುವ ಪ್ರದೇಶದಲ್ಲಿ ವಾಸಿಸಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಹೊಳೆ ಬದಿಯ ಸುಮಾರು 100 ಮೀ. ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸಬಾರದೆಂದು ಈಗಾಗಲೇ ವಾಲ್ನೂರು ಗ್ರಾ.ಪಂ ನಿರ್ಣಯವನ್ನು ತೆಗೆದುಕೊಂಡಿದೆ. ಮನೆಯಲ್ಲಿ ವಾಸವಿರಲು ಸರ್ಕಾರದಿಂದ ಬಾಡಿಗೆ ಹಣವು ಬಾರದೆ, ತಾವಿದ್ದ ಮೊದಲಿನ ಜಾಗಕ್ಕೂ ತೆರಳಲಾಗದೆ ಬಡ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿವೆ. ನಿವೇಶನ ಗುರುತಿಸುವಂತೆ ಮನವಿ ಮಾಡಿಕೊಂಡಿದ್ದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.