ನಿಡ್ತ-ಸೋಮವಾರಪೇಟೆ, ಫೆ. 1: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ನಿಡ್ತ ಗ್ರಾಮದಲ್ಲಿ ಆಯೋಜಿಸಲಾಗಿದ್ದ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಿ ಸಬೇಕು ಎಂಬದೂ ಸೇರಿದಂತೆ ಒಟ್ಟು 9 ನಿರ್ಣಯಗಳನ್ನು ಕೈಗೊಂಡು ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಯಿತು.ರಾಷ್ಟ್ರದ ಜೈನ ಕಾಶಿ ಎಂದೇ ಖ್ಯಾತಿ ಪಡೆದಿರುವ ಕೊಂಗಾಳ್ವರ ರಾಜಧಾನಿಯಾಗಿದ್ದ ಮುಳ್ಳೂರು ಗ್ರಾಮದಲ್ಲಿರುವ ತ್ರಿವಳಿ ಜೈನ ಬಸದಿಗಳು ಮತ್ತು ಮಾಲಂಬಿ ಗ್ರಾಮದ ಮಳೆ ಮಲ್ಲೇಶ್ವರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವದು.ಶನಿವಾರಸಂತೆಯಲ್ಲಿರುವ ದೇಶದ ಹೆಮ್ಮೆಯ ಸುಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮಸ್ಥಳದಲ್ಲಿ ಮಿಲಿಟರಿ ಮ್ಯೂಸಿಯಂ ಸ್ಥಾಪಿಸುವದು ಹಾಗೂ ಮಧ್ಯಪೇಟೆ ಯಲ್ಲಿ ಕಾರ್ಯಪ್ಪ ಅವರ ಪುತ್ಥಳಿ ನಿರ್ಮಿಸುವದು.

ಹಾಸನ ಜಿಲ್ಲೆಗೆ ಹೊಂದಿ ಕೊಂಡಿರುವ ಹಾಗೂ ಈ ಹಿಂದೆ ಪುರಸಭೆಯಾಗಿ ತನ್ನದೇ ಆದ ಇತಿಹಾಸ ಹೊಂದಿರುವ ಶನಿವಾರ ಸಂತೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೆಲ್ದರ್ಜೆಗೆ ಏರಿಸುವದು.

ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ರಸ್ತೆಗಳ ಅಭಿವೃದ್ಧಿ ಮತ್ತು ಗ್ರಾಮೀಣ ಬಸ್ ಸೇವೆಯನ್ನು ಆರಂಭಿಸುವ ಮೂಲಕ ಜನತೆಗೆ ಉತ್ತಮ ಸೌಲಭ್ಯ ಕಲ್ಪಿಸುವದು.

ಶನಿವಾರಸಂತೆ ಭಾಗದ ಜನರ ಬಹುದಿನಗಳ ಕನಸಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಸಜ್ಜಿತ ಬಸ್ ನಿಲ್ದಾಣದ ಸ್ಥಾಪನೆಗೆ ಕ್ರಮ ಕೈಗೊಳ್ಳುವದು.

ಜಿಲ್ಲೆಯ ಗ್ರಾಮೀಣ ಪ್ರದೇಶ ದಲ್ಲಿರುವ ಎಲ್ಲ ಸರ್ಕಾರಿ ಕನ್ನಡ ಮಾಧ್ಯಮ (ಮೊದಲ ಪುಟದಿಂದ) ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವದು ಮತ್ತು ಶಿಕ್ಷಕರಿಗೂ ಕೂಡ ಉತ್ತಮ ಸೌಲಭ್ಯ ಕಲ್ಪಿಸುವ ಮೂಲಕ ಉತ್ತೇಜನ ನೀಡುವದು.

ಜಿಲ್ಲೆಯ ಪಟ್ಟಣಗಳಲ್ಲಿ ಸಣ್ಣ ಕೈಗಾರಿಕೆಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಕಲ್ಪಿಸುವದು.

ಕಾಡಾನೆ ಧಾಳಿಯಿಂದ ತತ್ತರಿಸಿರುವ ಪ್ರದೇಶಗಳ ರೈತರ ತೋಟಗಳು ಮತ್ತು ಬೆಳೆ ಬೆಳೆಯುವ ಸ್ಥಳಗಳಿಗೆ ಹಾನಿಯಾಗದಂತೆ ಮತ್ತು ಪ್ರಾಣ ಹಾನಿಯಾಗದಂತೆ ಸೂಕ್ತ ಎಚ್ಚರಿಕೆ ವಹಿಸುವದು. ಇದರೊಂದಿಗೆ ಸೋಲಾರ್ ವಿದ್ಯುತ್ ಬೇಲಿ ಅಳವಡಿಸಲು ಮುಂದಾಗುವದು.

ಸತತ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿರುವ ಕೊಡಗು ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯ ಬಜೆಟ್‍ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಜಿಲ್ಲೆಯ ಜನತೆಯಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು ಎಂಬ ನಿರ್ಣಯಗಳನ್ನು ಸಮ್ಮೇಳನ ದಲ್ಲಿ ಹಾಜರಿದ್ದ ಕನ್ನಡಾಭಿಮಾನಿಗಳ ಬೆಂಬಲದೊಂದಿಗೆ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.

ಕಸಾಪ ಗೌರವ ಕಾರ್ಯದರ್ಶಿ ಎನ್.ಎ. ಅಶ್ವಥ್‍ಕುಮಾರ್ ಅವರು ನಿರ್ಣಯಗಳನ್ನು ಮಂಡಿಸಿದರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ನಾಗೇಶ್ ಕಾಲೂರು, ಕೊಡಗು ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಕಸಾಪ ನಿರ್ದೇಶಕ ಕೆ.ಕೆ. ನಾಗರಾಜ ಶೆಟ್ಟಿ ಅವರುಗಳು ಉಪಸ್ಥಿತರಿದ್ದರು.