ಆರ್ಥಿಕ ಸುಧಾರಣೆ ಕಂಡುಕೊಳ್ಳುವ ಆಮಿಷವೊಡ್ಡಿ, ಬಳಿಕ ಮೋಸ ಗೊಳಿಸಿರುವ ಜಾಲವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ನಾಲ್ವರು ರೈತರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.ಸೋಮವಾರಪೇಟೆ ತಾಲೂಕಿನ ಕಿರುಗಂದೂರುವಿನ ಇಬ್ಬರು ಹಾಗೂ ಬಿಳಿಗೇರಿ ಮತ್ತು ದೊಡ್ಡಹಣಕೋಡು ವಿನ ತಲಾ ಒಬ್ಬರಂತೆ ನಾಲ್ವರು ಇದೀಗ ಸೋಮವಾರಪೇಟೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಅಲ್ಲದೆ ಕೋಳಿ ಹಾಗೂ ಮೊಟ್ಟೆ ಸೇರಿದಂತೆ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಕೇರಳದ ತಿರುವನಂತಪುರಂ ಮೂಲದ ನಂಜನಗೂಡಿನಲ್ಲಿ ಶಾಖೆ ಹೊಂದಿರುವ ‘ಒಮೆಗಾ3;6’ ಎಂಬ ಹೆಸರಿನಲ್ಲಿ ಹನ್ನೊಂದು ಮಂದಿಯ ತಂಡ ತಮಗೆ ಮೋಸಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ತಂಡದ ಪ್ರಮೋದ್, ಸಂಪತ್, ಸೆಲ್ವಿ, ಪ್ರಮೋದ್ ಔಗಾರ್, ಬೆನ್ನಿ ಅಲಿಯಾಸ್ ಬೆನ್ಸನ್, ಸುನಿಲ್ ಕುಮಾರ್, ಮಧು, ರೇಷ್ಮ, ಅರುಣ್ ಕುಮಾರ್, ವಿಷ್ಣುಕುಮಾರ್, ರಾಮಚಂದ್ರನ್ ಎಂಬವರು ಸೇರಿ ವಂಚನೆ ಎಸಗಿದ್ದಾಗಿ ಪುಕಾರಿನಲ್ಲಿ ತಿಳಿಸಲಾಗಿದೆ.ಮೇಲ್ಕಂಡ ಮಂದಿ ತಮ್ಮಿಂದ ತಲಾ ರೂ. 6.59 ಲಕ್ಷ, ರೂ. 35 ಲಕ್ಷ, 2.35 ಲಕ್ಷ, 2.50 ಲಕ್ಷದಂತೆ ಮುಂಗಡ ಪಡೆದು, ಕೋಳಿಗಳನ್ನು ಸಾಕಾಣೆಗೆ ನೀಡಿದ್ದಾಗಿಯೂ ಮೋಸಹೋಗಿರುವ ರೈತರು ಪುಕಾರಿನಲ್ಲಿ ಬಹಿರಂಗಗೊಳಿಸಿದ್ದಾರೆ.
ಬಳಿಕ ತಾವು 18 ತಿಂಗಳು ಸಾಕಿದ ಕೋಳಿಗಳಿಂದ ಮೊಟ್ಟೆಗಳನ್ನು; ಸಂಸ್ಥೆಯಿಂದ ಖರೀದಿಸಲಾಗುವುದು ಎಂದು ನಂಬಿಸಿದ್ದು, ಹಣ ಪಡೆದ ಬಳಿಕ ಕೋಳಿಗಳು ಸಾಕಷ್ಟು ಮೊಟ್ಟೆ ಇರಿಸಿಲ್ಲವೆಂದು ಆಪಾದಿಸಿದ್ದಾರೆ. ಈ ಬಗ್ಗೆ ನಂಜನಗೂಡು ಪೊಲೀಸರಿಗೆ ದೂರು ನೀಡಲಾಗಿ; ಅಲ್ಲಿನ ಕೇರಳ ಸಂಸ್ಥೆ ಮುಖ್ಯಸ್ಥರು ರಾಜೀ ಸಂಧಾನದೊಂದಿಗೆ ಹಣ ಹಿಂತಿರುಗಿಸಿ, ಕೋಳಿಗಳನ್ನು ಪಡೆಯುವುದಾಗಿ ಒಡಂಬಡಿಕೆ ಮಾಡಿಕೊಂಡರೆನ್ನಲಾಗಿದೆ.
ಅನಂತರ ರೈತರ ಕೋಳಿಗಳನ್ನು ವಾಪಾಸು ಪಡೆದು ಹಣ ನೀಡದೆ, ಈಗ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮೋಸ ಹೋಗಿರುವ ನಾಲ್ವರು ಸೋಮವಾರಪೇಟೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆ ಮೇರೆಗೆ ಎಸ್ಪಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶೈಲೇಂದ್ರ ಅವರ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸರು ಇದೀಗ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕಾಗಿ ತನಿಖೆ ಕೈಗೊಂಡಿದ್ದಾರೆ.