ಎಲ್ಲ ದೇವತೆಗಳು ಮಹಾನ್ ಋಷಿ ಅಗಸ್ತ್ಯರನ್ನು ಸ್ತುತಿಸುತ್ತ ಹೇಳುತ್ತಾರೆ: “ಅಸ್ಮಾಕಂ ಭಯ ಭೀತಾನಾಂ ನಿತ್ಯಶೋ ಭಗವಾನ್ಗತಿ: ತತಸ್ತ್ವಾರ್ತಾ: ಪ್ರಯಾಚಾಮೋ ವರಂ ತ್ವಾಂ ವರದೋ ಹ್ಯಸಿ” ಆರ್ತರಾಗಿರುವ ನಾವು ನಿಮ್ಮನ್ನು ಪ್ರಾರ್ಥಿಸುವ ಸಲುವಾಗಿ ನಿಮ್ಮ ಬಳಿ ಬಂದಿರುತ್ತೇವೆ. ವರದರಾಗಿರುವ ನೀವು ನಾವು ಕೇಳಲಿರುವ ವರವನ್ನು ಕೊಟ್ಟು ನಮ್ಮ ಭೀತಿಯನ್ನು ದೂರ ಮಾಡಲು ಸಮರ್ಥರಾಗಿರುವಿರಿ.
ಈ ಮಾತಿಗೆ ಅಪಾರ ಮನ್ನಣೆ ನೀಡಿದ ಅಗಸ್ತ್ಯರು ತಮ್ಮ ಜೊತೆಗಿದ್ದ ಋಷಿ ಮುನಿಗಳು ಹಾಗೂ ದೇವತೆಗಳೊಡನೆ ಸಮುದ್ರ ತೀರಕ್ಕೆ ತೆರಳುತ್ತಾರೆ.. ತಮ್ಮ ಸುತ್ತಲೂ ಆದರದಿಂದ ನೆರೆದಿದ್ದ ದೇವ- ಮಾನವರನ್ನು ಕುರಿತು ಹೀಗೆ ಹೇಳುತ್ತಾರೆ:” ಭೋ, ದೇವತೆಗಳಿರಾ, ವರುಣನ ನಿವಾಸ ಸ್ಥಾನವಾದ ಈ ಸಮುದ್ರವನ್ನು ನಾನೀಗಲೇ ಕುಡಿದು ಬಿಡುತ್ತೇನೆ. ಸಮುದ್ರದ ಆಪೋಶನವಾದ ನಂತರ ಮಾಡಬೇಕಾದ ಕಾರ್ಯಕ್ಕೆ ನೀವೀಗಲೇ ಸಿದ್ಧರಾಗಿರಿ.”
ಹೀಗೆಂದು ಹೇಳಿ ಅಗಸ್ತ್ಯರು ಕೋಪಗೊಂಡವರಾಗಿ ದೇವ ಮಾನವರು ನೋಡುತ್ತಿರುವಂತೆಯೇ ಸಮುದ್ರವನ್ನು ಪಾನ ಮಾಡಲುಪಕ್ರಮಿಸಿದರು. ಸಮುದ್ರವು ಮಹಾ ಪ್ರವಾಹ ರೂಪವಾಗಿ ಅಗಸ್ತ್ಯರ ಗುಹಾ ಸದೃಶವಾದ ಮುಖದೊಳಗೆ ಪ್ರವೇಶಿಸುತ್ತಿರುವದನ್ನು ಕಂಡು ದೇವತೆಗಳೆಲ್ಲರೂ ಆಶ್ಚರ್ಯಭರಿತರಾಗುತ್ತಾರೆ. ಅಗಸ್ತ್ಯರ ಮಹಿಮೆಯನ್ನು ಸ್ತೋತ್ರಗಳ ಮೂಲಕ ಕೊಂಡಾಡುತ್ತಾರೆ. “ತ್ವಂ ನಸ್ತ್ರಾತಾ ವಿಧಾತಾ ಚ ಲೋಕಾನಾಂ ಲೋಕಭಾವನ. ತ್ವತ್ಪ್ರಸಾದಾತ್ಸಮುಚ್ಛೇದಂ ನ ಗಚ್ಛೇತ್ಸಾಮರಂ ಜಗತ್’’ ಅಂದರೆ, “ನೀವೇ ನಮ್ಮ ರಕ್ಷಕರು. ನೀವೇ ಬ್ರಹ್ಮನೂ ಆಗಿರುತ್ತೀರಿ. ಜಗತ್ತುಗಳ ಉತ್ಪತ್ತಿಗೂ ಸಹ ನೀವೇ ಕಾರಣರಾಗಿರುತ್ತೀರಿ. ನಿಮ್ಮ ಪ್ರಸಾದದಿಂದಲೇ ದೇವತೆಗಳಿಂದ ಕೂಡಿರುವ ಈ ಪ್ರಪಂಚವು ವಿನಾಶವನ್ನು ಹೊಂದದಿರಲು ಸಾಧ್ಯವಾಗಿದೆ”. ಇದೇ ಮುಂತಾಗಿ ದೇವತೆಗಳು ಸ್ತೋತ್ರ ಮಾಡುತ್ತಿದ್ದರು.ಗಂಧರ್ವರು ಸುಮನೋಹರವಾದ ವಾದ್ಯಗಳನ್ನು ನುಡಿಸುತ್ತ್ತಿದ್ದರು.ಮಹಾತ್ಮರಾದ ಅಗಸ್ತ್ಯರ ಮೇಲೆ ಅನಂತವಾಗಿ ಪುಷ್ಪವೃಷ್ಟಿಯಾಗುತ್ತಿದ್ದಿತು. ಈ ಮಧ್ಯದಲ್ಲಿ ಅಗಸ್ತ್ಯರು ಸಮುದ್ರದ ಅಪಾರವಾದ ನೀರನ್ನು ಕುಡಿದು ಮುಗಿಸಿಬಿಟ್ಟರು.
ದೇವತೆಗಳು ಸಮುದ್ರವನ್ನು ದಿಟ್ಟಿಸಿ ನೋಡಿದರು. ಒಂದು ತೊಟ್ಟಾದರೂ ನೀರಿರಲಿಲ್ಲ. ಆಶ್ಚರ್ಯಭರಿತರಾದರು. ಅಮಿತಾನಂದವನ್ನು ಹೊಂದಿದರು. ಇದೀಗ ದೇವತೆಗಳ ಕೆಲಸ ಬಾಕಿ. ಸಮುದ್ರದಲ್ಲಿ ಅಡಗಿದ್ದ ಕಾಲಕೇಯ ರಕ್ಕಸರಿಗೆ ಗತಿಯಿಲ್ಲದ ಸಂದರ್ಭ. ಸಮುದ್ರವೇ ಇಲ್ಲದ ಮೇಲೆ ಅವರು ಮೇಲೆ ಬರಲೇಬೇಕು. ದೇವತೆಗಳ ಕಣ್ಣ್ಣಿಗೆ ಸುಲಭದಲ್ಲಿ ಗೋಚರರಾದರು. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ದೇವತೆಗಳು ಈ ಹಿಂದೆಯೇ ಅಗಸ್ತ್ಯರು ಸೂಚಿಸಿದ್ದಂತೆ ಆಯುಧಪಾಣಿಗಳಾಗಿ ಶಸ್ತ್ರ ರಹಿತರಾಗಿದ್ದ ಕಾಲೇಯರ ಮೇಲೆ ರಭಸದಿಂದ ನುಗ್ಗಿದರು. ಆಯಧಗಳಿಂದ ದಾನವರನ್ನು ಪ್ರಹರಿಸಲು ತೊಡಗಿದರು. ನಿರಾಯುಧರಾಗಿದ್ದ ಕಾಲೇಯರು ಕೆಲ ಕಾಲ ತಮ್ಮ ಬಲವೆಲ್ಲವನ್ನೂ ಕೇಂದ್ರೀಕರಿಸಿ ಪ್ರತಿ ಹೋರಾಟ ನಡೆಸಿದರು. ಆದರೆ, ಈ ಹಿಂದೆ ತಪಸ್ವಿಗಳನ್ನು ಕೊಂದು ಪಾಪಿಷ್ಠರೆನಿಸಿಕೊಂಡ ಕಾಲೇಯರಿಗೆ ಅಪಜಯ ಕಾದಿತ್ತು. ದೇವತೆಗಳು ಅವರನ್ನು ವಧಿಸಿದರು. ಕೆಲವರು ಮಾತ್ರ ಪ್ರಾಣಾಪಾಯದಿಂದ ತಪ್ಪಿಸಿಕೊಂಡು ಪಾತಾಳದಲ್ಲಿ ಅವಿತುಕೊಂಡರು.
ಕಾಲೇಯರನ್ನು ಧ್ವಂಸ ಮಾಡಿ ಲೋಕದಲ್ಲಿದ್ದ ಭಯಭೀತಿಯ ವಾತಾವರಣವನ್ನು ನೀಗಿದ ದೇವತೆಗಳು ಬಳಿಕ ಮತ್ತೆ ಅಗಸ್ತ್ಯ ಮಹರ್ಷಿಗಳ ಬಳಿ ತೆರಳಿದರು. ಅವರನ್ನು ಹೀಗೆ ಸ್ತುತಿಸಿದರು: “ತ್ವತ್ಪ್ರಸಾದಾನ್ಮಹಾಭಾಗ ಲೋಕೈ: ಪ್ರಾಪ್ತಂ ಮಹತ್ಸುಖಂ, ತ್ವತ್ತೇಜಸಾ ಚ ನಿಹತಾ: ಕಾಲೇಯಾ: ಕ್ರೂರ ವಿಕ್ರಮಾ:, ಪೂರಯಸ್ವ ಮಹಾಬಾಹೋ ಸಮುದ್ರಂ ಲೋಕಭಾವನ, ಯತ್ತ್ವಯಾ ಸಲಿಲಂ ಪೀತಂ ತದಸ್ಮಿನ್ಪುನರುತ್ಸøಜ” ಅಂದರೆ:”ಮಹಾಬಾಹೋ, ಮಹಾತ್ಮನ್, ನಿಮ್ಮ ಅನುಗ್ರಹ ದಿಂದಾಗಿ ಮೂರು ಲೋಕಗಳಿಗೂ ಮಹಾ ಸುಖವುಂಟಾಯಿತು. ನಿಮ್ಮಿಂದ ಅನುಗೃಹೀತರಾಗಿ ಮಹಾಪರಾಕ್ರಮಿಗಳೆನಿಸಿದ್ದ ಕಾಲೇಯರನ್ನು ನಾವು ಧ್ವಂಸ ಮಾಡಿದೆವು. ನಿಮ್ಮ ಅಪಾರವಾದ ಶಕ್ತಿಯಿಂದಲೇ ಅವರು ನಿರ್ನಾಮ ಹೊಂದಿದರು. ಜಗದುತ್ಪಾದಕರೇ, ಮಹಾಬಾಹೋ, ನೀವು ಕುಡಿದಿರುವ ಸಮುದ್ರದ ನೀರನ್ನು ಪುನ: ನಿಮ್ಮ ತಪೋಬಲದ ಉದರದಿಂದ ಹೊರ ಹಾಕಿ ಬತ್ತಿ ಹೋಗಿರುವ ಸಮುದ್ರವನ್ನು ತುಂಬುವ ಕೃಪೆ ಮಾಡಿ” ಹೀಗೆಂದು ಹೇಳಿದ ದೇವತೆಗಳಿಗೆ ಅಗಸ್ತ್ಯರು ಈ ರೀತಿ ಉತ್ತರಿಸಿದರು:-”ಜೀರ್ಣಂ ತದ್ಧಿ ಮಯಾ ತೋಯಮುಪಾಯೋನ್ಯ: ಪ್ರಚಿಂತ್ಯತಾಂ, ಪೂರಣಾರ್ಥ ಸಮುದ್ರಸ್ಯ ಭವದ್ಭಿರ್ಯತ್ನಮಾಸ್ಥಿತೈ:” ಅಂದರೆ, ದೇವತೆಗಳಿರಾ, ನಾನು ಕುಡಿದ ಸಮುದ್ರದ ನೀರು ಈಗಾಗಲೇ ನನ್ನ ಉದರದಲ್ಲಿ ಜೀರ್ಣವಾಗಿ ಹೋಗಿರುವದು. ಸಮುದ್ರವನ್ನು ಪುನ: ತುಂಬಿಸಲೇಬೇಕಾದರೆ ನೀವು ಪ್ರಯತ್ನಪೂರ್ವಕವಾದ ಬೇರಾವುದಾದರೂ ಉಪಾಯವನ್ನು ಆಲೋಚಿಸಲೇಬೇಕು.” ಈ ಮಾತನ್ನು ಕೇಳಿದೊಡನೆ ಕೆಲ ಕಾಲ ದೇವತೆಗಳು ದಿಙ್ಮೂಢರಾಗುತ್ತಾರೆ. ಅವರು ನಿರೀಕ್ಷಿಸಿರದ ಸಮುದ್ರವು ಅಗಸ್ತ್ಯರ ಉದರದಲ್ಲಿಯೇ ಜೀರ್ಣಗೊಂಡ ಘಟನೆ ವಿಚಿತ್ರವೆನಿಸಿದರೂ ಸತ್ಯ ಎಂಬದರ ಅರಿವಾದಾಗ ಮುಂದೆ ಸಮುದ್ರವನ್ನು ತುಂಬುವದು ಹೇಗೆ ಎನ್ನುವ ಚಿಂತೆ ಆವರಿಸುತ್ತದೆ. ಬಳಿಕ ಅವರೆಲ್ಲ ಬ್ರಹ್ಮದೇವನನ್ನು ಕಂಡು ಪರಿಹಾರೋಪಾಯ ಕೇಳಿದಾಗ ಮುಂದೆ ಭಗೀರಥ ಎಂಬ ರಾಜರ್ಷಿಯಿಂದ ಈ ಕಾರ್ಯ ನೆರವೇರುತ್ತದೆ. ಆದರೆ, ಇನ್ನೂ ಬಹಳ ಕಾಲಾವಕಾಶ ಬೇಕಾಗುತ್ತದೆ ಎಂದು ಬ್ರಹ್ಮನಿಂದ ದೊರೆತ ಭರವಸೆ ಮೇರೆಗೆ ದೇವತೆಗಳು ತಮ್ಮ ಲೋಕಕ್ಕೆ ಹಿಂತಿರುಗಿದರು. ಈ ಸಂದರ್ಭ ಧರ್ಮರಾಯ ಕೇಳುತ್ತಾನೆ: ಬಳಿಕ ಸಮುದ್ರವನ್ನು ತುಂಬಿದ ಬಗೆ ಹೇಗೆ ? ಲೋಮಶರು ವಿವರಿಸುತ್ತಾರೆ:- “ಯುಧಿಷ್ಠಿರಾ, ಇಕ್ಷ್ವಾಕು ವಂಶದಲ್ಲಿ ಸಗರ ಎಂಬ ರಾಜನಿದ್ದ. ಅವನಿಗೆ ಪುತ್ರ ಪ್ರಾಪ್ತಿ ಯಾಗಿರಲಿಲ್ಲ. ಶಿವನ ಕುರಿತು ಆತ ತಪಸ್ಸು ಮಾಡುತ್ತಾನೆ. ಆಗ ಶಿವನು ಒಲಿಯುತ್ತಾನೆ. ತನಗೆ ಪುತ್ರ ಪ್ರಾಪ್ತಿ ಯಾಗಬೇಕೆಂದು ಅನುಗ್ರಹಿಸಲು ಕೋರುತ್ತಾನೆ. ನೀನು ವರ ಕೋರಿದ ಘಳಿಗೆಯನ್ವಯ ನಿನ್ನ ಓರ್ವಳು ಪತ್ನಿಯಲ್ಲಿ ಓರ್ವ ಪುತ್ರ ಜನಿಸುತ್ತಾನೆ. ಮತ್ತೋರ್ವಳು ಪತ್ನಿಯಲ್ಲಿ 60 ಸಾವಿರ ಪುತ್ರರು ಜನಿಸುತ್ತಾರೆ ಎಂದು ಶಿವನು ನುಡಿಯುತ್ತಾನೆ. ಆತ ಒಬ್ಬ ಪತ್ನಿಯಿಂದ ಅಸಮಂಜನೆಂಬ ಪುತ್ರನನ್ನು ಪಡೆಯುತ್ತಾನೆ. ಮತ್ತೊಂದು ಪತ್ನಿ ಯಲ್ಲಿ ಸೋರೆ ಕಾಯಿಯ ರೀತಿಯ ಪಿಂಡವೊಂದರ ಜನನವಾಯಿತು. ಆಶ್ಚರ್ಯಕರವಾಗಿ ಆ ಪಿಂಡವು ಒಡೆದು 60 ಸಾವಿರ ಮಕ್ಕಳು ಜನಿಸಿದರು. ಸಗರ ಚಕ್ರವರ್ತಿ ಒಮ್ಮೆ ಅಶ್ವಮೇಧ ಯಾಗ ಮಾಡುತ್ತಾನೆ. ಆತನ 60 ಸಾವಿರ ಮಕ್ಕಳೂ ಕುದುರೆಯ ಜೈತ್ರಯಾತ್ರೆಗೆ ಹೋಗುತ್ತಾರೆ. ಅಗ ಅಶ್ವಮೇಧ ಕುದುರೆಯು ಸಮುದ್ರವಿದ್ದ ಜಾಗದಲ್ಲಿ ತಪ್ಪಿಸಿಕೊಳ್ಳ್ಳುತ್ತದೆ. ಅದನ್ನು ಹುಡುಕಲು ಈ ಹಿಂದೆ ಜಲಪೂರ್ಣವಾಗಿದ್ದು ಬಳಿಕ ಅಗಸ್ತ್ಯರಿಂದ ಆಪೋಶನಗೊಂಡಿದ್ದ ಸಮುದ್ರವಿದ್ದ ಜಾಗವನ್ನು 60 ಸಾವಿರ ಪುತ್ರರು ಅಗೆಯುತ್ತ ಹೋಗುತ್ತಾರೆ. ಅಲ್ಲಿ ತಳಭಾಗದಲ್ಲಿ ಒಂದೆಡೆ ತಪಶ್ಚರ್ಯೆಯಲ್ಲಿದ್ದ ಮಹಾನ್ ತಪಸ್ವಿ ವಾಸುದೇವ ಸ್ವರೂಪಿ ಕಪಿಲ ಮಹರ್ಷಿಯ ಬಳಿಯಲ್ಲಿ ಕುದುರೆ ನಿಂತಿರುತ್ತದೆ. ಆ ಸಂದರ್ಭ ಸಗರನ ಮಕ್ಕಳು ಅಟ್ಟಹಾಸಗೈದು ಕಪಿಲ ಮಹರ್ಷಿಯ ತಪೋಭಂಗಕ್ಕೆ ಕಾರಣರಾಗಿ ಎಲ್ಲರೂ ಆತನ ಕೋಪೋದ್ರಿಕ್ತ ಸಿಟ್ಟಿಗೆ ಸುಟ್ಟು ಬೂದಿಯಾದರು. ಸಗರನು ತನ್ನ ಪುತ್ರರು ಬಾರದಿರುವದನ್ನು ನೋಡಿ ತನ್ನ ಮತ್ತೊಬ್ಬ ಪುತ್ರ ಅಸಮಂಜನ ಮಗ ತನ್ನ ಮೊಮ್ಮಗನಾದ ಅಂಶುಮಂತನನ್ನು ಶೋಧನೆಗೆ ಕಳುಹಿಸುತ್ತಾನೆ. ಆತ ಸಾಗರವಿದ್ದ ಸ್ಥಳಕ್ಕೆ ತೆರಳಿ ಅಗೆಯಲ್ಪಟ್ಟಿದ್ದ ಭಾಗದ ತಳಕ್ಕೆ ಹೋದಾಗ ಅಲ್ಲಿ ತನ್ನ ಚಿಕ್ಕಪ್ಪಂದಿರು ಭಸ್ಮೀಭೂತರಾಗಿರುವದನ್ನು ನೋಡುತ್ತಾನೆ. ಅಲ್ಲದೆ, ಕಪಿಲ ಮಹರ್ಷಿಗಳನ್ನೂ ಹಾಗೂ ಅವರ ಬಳಿಯಿದ್ದ ಕುದುರೆಯನ್ನೂ ಕಂಡು ಅವರಿಗೆ ಶರಣಾಗಿ ಅನುಗ್ರಹ ಬೇಡುತ್ತಾನೆ. ಅದರಂತೆ ಕಪಿಲ ಮಹರ್ಷಿಗಳು ಅನುಗ್ರಹ ಮಾಡುತ್ತ “ಅಂಶುಮಂತ, ನೀನು ಈ ಕುದುರೆಯನ್ನು ಕರೆದೊಯ್ಯು, ನಿನ್ನ ತಾತ ಸಗರ ಚಕ್ರವರ್ತಿ ಯಜ್ಞವನ್ನು ಪೂರೈಸಲಿ. ಅಲ್ಲದೆ ಈ ಸಮುದ್ರ ಪ್ರದೇಶದ ಅಧಿಪತಿಂiÀiನ್ನು ಸಗರ ಚಕ್ರವರ್ತಿ ತನ್ನ ಮಗನಾಗಿ ಸ್ವೀಕರಿಸಲಿ. ಇದರಿಂದಾಗಿ ಇದಕ್ಕೆ ಸಾಗರ ಎಂದು ಹೆಸರು ಬರಲಿ. ಅಲ್ಲದೆ, ಅಂಶುಮಂತನೇ, ಕಾಲಕ್ರಮೇಣ ನಿನಗೆ ದಿಲೀಪನೆಂಬ ಪುತ್ರನಾಗುತ್ತಾನೆ, ಆತನಿಗೆ ಭಗೀರಥ ಎಂಬ ಪುತ್ರನಾಗುತ್ತಾನೆ. ಆ ಭಗೀರಥನ ಶತ ಪ್ರಯತ್ನದ ತಪಸ್ಸಿನ ಫಲವಾಗಿ ದೇವ ಗಂಗೆ ಧರೆಗೆ ಇಳಿಯುತ್ತಾಳೆ. ಆ ಸಂದರ್ಭ ಅಗಸ್ತ್ಯರು ಆಪೋಶನ ಮಾಡಿ ಖಾಲಿಯಾಗಿರುವ ಸಮುದ್ರವೂ ತುಂಬುತ್ತದೆ. ಅಲ್ಲದೆ, ನಿನ್ನ ಚಿಕ್ಕಪ್ಪಂದಿರಾದ 60 ಸಾವಿರ ಮಂದಿಯ ಆತ್ಮಗಳಿಗೂ ಸದ್ಗತಿ ಸಿಗುತ್ತದೆ ಎಂದು ಆಶಿರ್ವದಿಸುತ್ತಾನೆ.
ಬಳಿಕ ಅಂಶುಮಂತನು ಯಜ್ಞದ ಕುದುರೆ ಸಹಿತ ತನ್ನ ರಾಜ್ಯಕ್ಕೆ ಮರಳಿ ತನ್ನ ತಾತ ಸಗರ ಚಕ್ರವರ್ತಿಯ ಯಜ್ಞವು ಪೂರ್ಣಗೊಳ್ಳು ವಂತೆ ಮಾಡುತ್ತಾನೆ. ಸಗರನಿಗೆ ತನ್ನ ಮಕ್ಕಳು ಸತ್ತರೂ ಶಿವನ ಇಚ್ಚೆ ಎಂದು ಭಾವಿಸಿ ಮುಂದೆ ಕಪಿಲ ಮಹರ್ಷಿಗಳ ಭರವಸೆಯ ನುಡಿಯಿಂದ ಸಮಾಧಾನಗೊಂಡು ಬಳಿಕ ವಾನಪ್ರಸ್ಥಾಶ್ರಮಕ್ಕೆ ತೆರಳುತ್ತಾನೆ. ಆತನ ಮೊಮ್ಮಗನ ಮರಿ ಮಗ ಅಂದರೆ ಅಂಶುಮಂತನ ಮೊಮ್ಮಗ ಭಗೀರಥನ ಶತ ಪ್ರಯತ್ನದಿಂದ ಆತ ಶಿವನನ್ನುದ್ದೇಶಿಸಿ ದೀರ್ಘ ಕಾಲ ತಪಗೈದು ಭಗವಾನ್ ತ್ರಿನೇತ್ರ ಶಿವನ ಅನುಗ್ರಹದಿಂದ ಭೂಮಿಗೆ ಗಂಗಾತರಣಗೊಳ್ಳುತ್ತದೆ. ಪವಿತ್ರ ಗಂಗಾಮಾತೆಯು ತಾನು ಪ್ರತ್ಯೇಕವಾಗಿ ಹರಿಯುವಳಲ್ಲದೆ, ಭಗೀರಥನ ಪ್ರಾರ್ಥನೆಯಂತೆ, ಶಿವನ ನಿರ್ದೇಶನದಂತೆ ಮಹರ್ಷಿ ಅಗಸ್ತ್ಯರ ಆಪೋಶನದಿಂದ ಬತ್ತಿ ಹೋಗಿದ್ದ ಸಮುದ್ರ ದಲ್ಲಿಯೂ ಹರಿದು ತುಂಬಿ ವಿಶಾಲ ಸಾಗರವಾಗಿ ರೂಪುಗೊಂಡು ಸಮೃದ್ಧಗೊಳಿಸುತ್ತಾಳೆ ಎಂದು ಲೋಮಶರು ಧರ್ಮರಾಯನಿಗೆ ವಿವರಿಸುತ್ತಾರೆ.
(ಮುಂದಿನ ವಾರ: ಅಗಸ್ತ್ಯರಿಂದ ವಿಂಧ್ಯ ಪರ್ವತ ನಿಯಂತ್ರಣ)