ಮಡಿಕೇರಿ, ಜ. 31: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ ಕಳೆದ ಹಲವಷ್ಟು ವರ್ಷಗಳ ಹಿಂದೆಯೇ ರೂಪಿತಗೊಂಡಿದ್ದರೂ, ವರ್ಷಾನುಗಟ್ಟಲೆ ಪೂರ್ಣಗೊಳ್ಳದಿದ್ದ ಕುಂಡಾಮೇಸ್ತ್ರಿ ನೀರಿನ ಯೋಜನೆ ಸದ್ಯದಲ್ಲಿ ಮುಕ್ತಾಯಗೊಳ್ಳುವ ಭರವಸೆ ವ್ಯಕ್ತಗೊಂಡಿದೆ. ಈ ಯೋಜನೆಗೆ ಸಂಬಂಧಿಸಿದ ಕಿರು ಅಣೆಕಟ್ಟೆ ಕಾಮಗಾರಿ ಪ್ರಸ್ತುತ ಪ್ರಗತಿಯಲ್ಲಿದ್ದು, ಜನತೆಯ ಬಹು ವರ್ಷಗಳ ಬೇಡಿಕೆ ಈ ಬಾರಿ ಈಡೇರಲಿದೆ ಎನ್ನಲಾಗುತ್ತಿದೆ.
ಕಳೆದ ಕೆಲ ಸಮಯಗಳಿಂದ ಕುಂಡಾಮೇಸ್ತ್ರಿಯಲ್ಲಿ ಕಿರು ಅಣೆಕಟ್ಟು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಪುಷ್ಪಗಿರಿ ಕಣಿವೆಯ ವಣಚಲು ಮತ್ತು ಕಾಲೂರು ಗ್ರಾಮಗಳ ಕಾಡುಮೇಡುಗಳ ಒಳಗಿನಿಂದ ನೈಸರ್ಗಿಕವಾಗಿ ಹರಿದು ಬರುವ ಎರಡು ಬೃಹತ್ ತೊರೆಗಳು ಕುಂಡಾಮೇಸ್ತ್ರಿಯಲ್ಲಿ ನದಿಯಾಗಿ ಸಂಗಮವಾಗುತ್ತಿದ್ದು, ಈ ಸ್ಥಳದಲ್ಲೇ ಉದ್ದೇಶಿತ ಕಿರು ಅಣೆಕಟ್ಟು ಕಾಮಗಾರಿ ನಡೆಸಲಾಗುತ್ತಿದೆ. ಅಣೆಕಟ್ಟು ಕಾಮಗಾರಿಗಾಗಿ ನದಿ ಹರಿಯುವ ಒಂದು ಭಾಗವನ್ನು ಅಂದಾಜು 100 ಮೀಟರ್ ನಷ್ಟು ಉದ್ದ ಬಂದ್ ಮಾಡಿ ನೀರು ಹರಿಯುವ ದಿಕ್ಕನ್ನು ಬದಲಿಸಲಾಗಿದೆ.
ನಗರೋತ್ಥಾನ 3ನೇ ಹಂತದ ಯೋಜನೆಯ ಅಡಿಯಲ್ಲಿ ಕರ್ನಾಟಕ ಜಲ ಮಂಡಳಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, 2021ರಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಂಡು 87 ದಶಲಕ್ಷ ಲೀಟರ್ ನೀರನ್ನು ಸಂಗ್ರಹಿಸಿಕೊಳ್ಳುವ ಅಣೆಕಟ್ಟು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಒಟ್ಟು 5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಿರು ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ವರ್ಷದ ಬೇಸಿಗೆಯ 4 ತಿಂಗಳ ಕಾಲ ಅಥವಾ ಅಗತ್ಯವಿದ್ದಲ್ಲಿ ಮಾತ್ರವೇ ಕುಂಡಾಮೇಸ್ತ್ರಿ ಡ್ಯಾಮ್ನಿಂದ ನೀರನ್ನು ಪಂಪ್ ಮಾಡಲಾಗುತ್ತದೆ. 40 ಮೀಟರ್ ಉದ್ದ, 9 ಮೀಟರ್ ಎತ್ತರದ ಅಣೆಕಟ್ಟೆಗೆ ನೂತನ ತಂತ್ರಜ್ಞಾನದ 3 ಹೈಡ್ರಾಲಿಕ್ ಗೇಟ್ಗಳಿರಲಿದ್ದು, ಮಳೆಗಾಲ ಪ್ರಾರಂಭವಾದಾಗ ಈ 3 ಗೇಟ್ಗಳನ್ನು ಸಂಪೂರ್ಣವಾಗಿ ತೆರೆದಿಡಲಾಗುತ್ತದೆ.
ಬಹು ಕೋಟಿ ಯೋಜನೆಯಾದ ಕುಂಡಾಮೇಸ್ತ್ರಿ ನೀರನ್ನು ಮಡಿಕೇರಿ ನಗರದ ಎಲ್ಲಾ ಬಡಾವಣೆಗೆ ಹಂಚಿಕೆ ಮಾಡಲು ಕರ್ನಾಟಕ ಜಲ ಮಂಡಳಿ ಮತ್ತು ನಗರಸಭೆ ಯೋಜನೆ ರೂಪಿಸುತ್ತಿದೆ. ನಗರದ ಸ್ಟೋನ್ ಹಿಲ್, ಕೊಡಗು ವಿದ್ಯಾಲಯ ಸಮೀಪ ಮತ್ತು ಮೈಸೂರು ರಸ್ತೆಯ ಗ್ಲಾಸ್ಹೌಸ್ ಬಳಿ 3 ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಲು ನಗರಸಭೆ ಕಾರ್ಯೋನ್ಮುಖವಾಗಿದೆ. ಟ್ಯಾಂಕ್ ನಿರ್ಮಾಣ, ಪೈಪ್ ಲೈನ್ ಸೇರಿದಂತೆ ಯೋಜನೆಗೆ 12 ಕೋಟಿ ರೂ.ಗಳ ಅಗತ್ಯವಿದ್ದು, ಡಿಪಿಆರ್ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಅನುದಾನದಲ್ಲಿ ನಗರದ ಕ್ರೈಸ್ತ ಸಮುದಾಯ ಸ್ಮಶಾನ ಸಮೀಪ ಮತ್ತು ವ್ಯಾಲಿ ವ್ಯೂ ಹೊಟೇಲ್ ಬಳಿ 2 ನೂತನ ಪಂಪ್ ಹೌಸ್ಗಳನ್ನು ಕೂಡ ನಿರ್ಮಿಸಲಾಗುತ್ತದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಟೋನ್ ಹಿಲ್ ಬಳಿಯಿರುವ ನೀರಿನ ಶುದ್ದೀಕರಣ ಘಟಕದಿಂದ ಎಲ್ಲಾ ಓವರ್ ಹೆಡ್ ಟ್ಯಾಂಕ್ಗಳಿಗೆ ನೀರನ್ನು ಪಂಪ್ ಮಾಡಿ ಪ್ರತಿ ಮನೆಗೂ ನೀರನ್ನು ಪೂರೈಕೆ ಮಾಡುವ ಯೋಜನೆ ಇದಾಗಿದೆ.
ಕಾಮಗಾರಿಯ ಸ್ಥಳಕ್ಕೆ ನಗರಸಭಾ ಪೌರಾಯುಕ್ತ ರಮೇಶ್ ಮತ್ತು ಇಂಜಿನಿಯರ್ ನಾಗರಾಜ್ ಮತ್ತು ಕರ್ನಾಟಕ ಜಲ ಮಂಡಳಿಯ ಮಡಿಕೇರಿ ವಿಭಾಗದ ಇಂಜಿನಿಯರ್ ಪ್ರಸನ್ನ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಯಾಂಡ್ ಬಂಡ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮತ್ತು ಮಳೆಯಿಂದ ತುಂಬಿರುವ ಹೂಳನ್ನು ತೆಗೆದು ಹೆಚ್ಚಿನ ನೀರನ್ನು ಸಂಗ್ರಹಿಸಲು ಅಧಿಕಾರಿಗಳು ಸೂಚನೆ ನೀಡಿದರು. ಬಳಿಕ ಯೋಜನೆ ಬಗ್ಗೆ ಮಾತನಾಡಿದ ಪೌರಾಯುಕ್ತ ರಮೇಶ್ ಅವರು, ಡ್ಯಾಂ ನಿರ್ಮಾಣದ ಹೊಣೆ ನೀಡಿರುವ ಹಿನ್ನಲೆಯಲ್ಲಿ ಸ್ಯಾಂಡ್ ಬಂಡ್ ನಿರ್ಮಾಣದ ಜವಾಬ್ದಾರಿ ಯನ್ನು ಕರ್ನಾಟಕ ಜಲ ಮಂಡಳಿ ವಹಿಸಿಕೊಂಡಿದೆ. ಮೇ ತಿಂಗಳಲ್ಲಿ ಡ್ಯಾಂ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯವಾಗಲಿದ್ದು, ಶಾಶ್ವತವಾಗಿ ನೀರಿನ ಸಂಗ್ರಹಕ್ಕೆ ಲಭ್ಯವಾಗಲಿದೆ ಎಂದು ಹೇಳಿದರು. ಇದಲ್ಲದೇ, 12 ಕೋಟಿ ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ಗಳು, ಪಂಪ್ ಹೌಸ್ಗಳನ್ನು ಕೂಡ ನಿರ್ಮಿಸಲಾಗುತ್ತದೆ. ಇದಾದ ಬಳಿಕ ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ಕೆರೆಗಳನ್ನು ಉಪ ಘಟಕಗಳನ್ನಾಗಿ ವಿಂಗಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೂಟುಹೊಳೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಮುಂದಿನ 15 ದಿನಗಳ ಕಾಲ ಮಾತ್ರವೇ ಇಲ್ಲಿಂದ ನೀರು ನಗರಕ್ಕೆ ಪೂರೈಕೆಯಾಗುತ್ತದೆ. ಇದೀಗ 1.5 ಕಿ.ಮೀ ಸುತ್ತಳತೆಯಲ್ಲಿ ನೀರು ನಿಂತಿದ್ದು, ಈ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನೆÀ್ನಲೆಯಲ್ಲಿ ಎಚ್ಚೆತ್ತುಕೊಂಡ ನಗರಸಭೆ ಜನವರಿ ಅಂತ್ಯಕ್ಕೆ ಕುಂಡಾಮೇಸ್ತ್ರಿಯಲ್ಲಿ ಸ್ಯಾಂಡ್ ಬಂಡ್ ನಿರ್ಮಿಸುವ ಕಾರ್ಯಕ್ಕೆ ಕೈಹಾಕಿದೆ.
ಸ್ಯಾಂಡ್ಬಂಡ್ ಅಳವಡಿಸುವ ಕಾಮಗಾರಿಯನ್ನು ಕರ್ನಾಟಕ ಜಲ ಮಂಡಳಿಗೆ ವಹಿಸಲಾಗಿದ್ದು, ನಗರ ಸಭೆಯ ಕೋರಿಕೆಯ ಮೇರೆಗೆ ಜಲ ಮಂಡಳಿ ಉಚಿತವಾಗಿ ಈ ಕಾಮಗಾರಿಯನ್ನು ನಡೆಸುತ್ತಿದೆ. ಇದರಿಂದಾಗಿ ನಗರಸಭೆಯ ಬೊಕ್ಕಸಕ್ಕೆ ಅಂದಾಜು 6 ಲಕ್ಷ ರೂ.ಗಳಷ್ಟು ಉಳಿತಾಯವಾಗಿದೆ. ಈಗಾಗಲೇ ಕುಂಡಾಮೇಸ್ತ್ರಿಯಲ್ಲಿ 40 ಅಡಿ ಆಳವಿರುವ ಜಾಕ್ವೆಲ್ ಅನ್ನು ನಿರ್ಮಿಸಲಾಗಿದ್ದು, ತಲಾ 300 ಹೆಚ್.ಪಿಯ 3 ಮೋಟಾರ್ಗಳನ್ನು ಅಳವಡಿಸಲಾಗಿದೆ. ಈ ಪೈಕಿ 2 ಮೋಟಾರ್ಗಳು ಏಕಕಾಲದಲ್ಲಿ ಚಾಲನೆಯಲ್ಲಿದ್ದರೆ, ಮತ್ತೊಂದು ಮೋಟಾರನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗುತ್ತದೆ. ಕಳೆದ 2 ವರ್ಷಗಳಿಂದ ಬೇಸಿಗೆ ತಿಂಗಳಲ್ಲಿ ಇಲ್ಲಿಂದಲೇ ನೀರನ್ನು ಪಂಪ್ ಮಾಡಲಾಗುತ್ತಿದೆ. ಬೃಹತ್ ಹಿಟಾಚಿ ಯಂತ್ರದ ಸಹಾಯದಿಂದ ಈಗಾಗಲೇ ಕುಂಡಾಮೇಸ್ತ್ರಿಯಲ್ಲಿ ತುಂಬಿರುವ ಹೂಳನ್ನು ಎತ್ತಲಾಗುತ್ತಿದೆ. 40 ಮೀಟರ್ ಉದ್ದ, 6 ಮೀಟರ್ ಎತ್ತರದ ಸ್ಯಾಂಡ್ಬಂಡ್ ನಿರ್ಮಾಣ ವಾಗುತ್ತಿದ್ದು, ಮೋಟಾರ್ ಪಂಪ್ನ 2 ಪುಟ್ವಾಲ್ಗಳು ನೀರಿನಲ್ಲಿ ಕನಿಷ್ಟ 5 ಅಡಿಗಳಷ್ಟು ಮುಳುಗಲು ಸಾಧ್ಯವಾಗುವಂತೆ ಯೋಜನೆ ರೂಪಿಸಲಾಗಿದೆ.