ಶ್ರೀಮಂಗಲ, ಜ. 31: ಕೊಡಗು ಜಿಲ್ಲೆ ಸತತ ಎರಡು ವರ್ಷದಿಂದ ಮಹಾಮಳೆಯಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಲುಗಿದೆ. ಕಂಡು ಕೇಳರಿಯದಷ್ಟು ಮಳೆ ಮತ್ತು ಪ್ರವಾಹಕ್ಕೆ ಜಿಲ್ಲೆ ತತ್ತರಿಸಿ ಹೋಗಿತ್ತು. ಮಳೆಗಾಲದಲ್ಲಿ ಸುರಿದ ಅತಿವೃಷ್ಠಿಯ ನೆನಪು ಹಸಿರಿರುವಾಗಲೇ ಮಳೆ ನಿಂತು ಎರಡು ತಿಂಗಳಲ್ಲಿಯೇ ಕೊಡಗಿನ ಪ್ರಮುಖ ನದಿ, ತೋಡು ಹಾಗೂ ಜಲ ಮೂಲಗಳಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ.

ವಾಡಿಕೆಯಂತೆ ಕೊಡಗಿನ ಪ್ರಮುಖ ನದಿಗಳಲ್ಲಿ ದಿಢೀರಾಗಿ ನೀರಿನ ಹರಿವಿನ ಪ್ರಮಾಣ ಕುಸಿಯುತ್ತಿರಲಿಲ್ಲ. ಅವುಗಳು ಬೇಸಿಗೆಯವರೆಗೂ ಹರಿಯುತ್ತಿದ್ದವು. ಆದರೆ, ಮಳೆಗಾಲದಲ್ಲಿ ಅತಿವೃಷ್ಠಿಗೆ ತುತ್ತಾದ ಕೊಡಗು ಜಿಲ್ಲೆ ಬೇಸಿಗೆಯ ಆರಂಭದಲ್ಲಿಯೇ ಉಷ್ಣಾಂಶದ ಏರಿಕೆ ಹಾಗೂ ನದಿ ಮೂಲಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವುದು ಆತಂಕಕ್ಕಿಡು ಮಾಡುವಂತಾಗಿದೆ.

ಕೊಡಗಿನಲ್ಲಿ ಸಾಂಪ್ರದಾಯಿಕವಾದ ಭತ್ತದ ಕೃಷಿಯನ್ನು ನಾನಾ ಕಾರಣಗಳಿಂದ ತೊರೆಯುವ ಮೂಲಕ ಸಾವಿರಾರು ಏಕ್ರೆ ಭತ್ತದ ಭೂಮಿ ಪಾಳು ಬಿದ್ದಿದೆ. ಇದರೊಂದಿಗೆ ಭತ್ತದ ಭೂಮಿ ಕೃಷಿಯೇತ್ತರ ಚಟುವಟಿಕೆಗಳಿಗೂ ವ್ಯಾಪಕವಾಗಿ ಪರಿವರ್ತನೆಯಾಗುತ್ತಿದೆ. ಭತ್ತದ ಕೃಷಿ ಇದ್ದಾಗ ಗದ್ದೆಯಲ್ಲಿ ಸುಮಾರು ಆರು ತಿಂಗಳವರೆಗೆ ನೀರು ನಿಲ್ಲುತ್ತಿದ್ದವು. ದೀರ್ಘಕಾಲಿಕ ಭತ್ತದ ಬೆಳೆ ಸುಮಾರು ಆರು ತಿಂಗಳ ಅವಧಿಯಲ್ಲಿ ಬರುವುದರಿಂದ ನಾಟಿ ಮಾಡಿದ ಸಮಯದಿಂದ ಕಟಾವು ಮಾಡುವವರೆಗೆ ನೀರಿನ ಅಗತ್ಯತೆ ಇರುವುದರಿಂದ ಗದ್ದೆಗಳಲ್ಲಿ ನೀರನ್ನು ನಿಲ್ಲಿಸಲಾಗುತ್ತಿತ್ತು. ಇದರಿಂದ ಗದ್ದೆಯಲ್ಲಿ ನಿಂತ ನೀರು ಅಂರ್ತಜಲವಾಗಿ ಭೂಮಿಯೊಳಗೆ ಸೇರಿ ಅಂರ್ತಜಲ ಮಟ್ಟವನ್ನು ಏರಿಕೆ ಮಾಡುತ್ತಿತ್ತು. ಮಳೆಯ ನೀರು ಗದ್ದೆಗಳಲ್ಲಿ ನಿಲ್ಲುತ್ತಿದ್ದವು. ಹೀಗೆ ನಿಲ್ಲುತ್ತಿದ್ದ ನೀರುಗಳು ಅಂರ್ತಜಲದ ಮೂಲಕ ತೋಡು, ನದಿಗಳಿಗೆ ಬಿಡುಗಡೆಯಾಗುತ್ತಿದ್ದವು. ಇದರಿಂದ ಬೇಸಿಗೆಯಲ್ಲಿಯೂ ನದಿಗಳಲ್ಲಿ ನೀರಿನ ಮಟ್ಟ ದಿಢೀರಾಗಿ ಕುಸಿಯದಂತೆ ಕಾಪಾಡುತ್ತಿದ್ದವು.

ಭತ್ತದ ಕೃಷಿ ತೊರೆದಿರುವುದರಿಂದ ಮತ್ತು ಅಂತಹ ಭೂಮಿಗಳು ಪಾಳು ಬಿದ್ದಿರುವುದರಿಂದ ಮಳೆಯ ನೀರು ಗದ್ದೆಗಳಲ್ಲಿ ನಿಲ್ಲದೆ ಅವುಗಳು ಹರಿದು ಹೋಗಿ ತೋಡು, ಕಾಲುವೆಗಳ ಮೂಲಕ ನೇರವಾಗಿ ನದಿಗಳಿಗೆ ಸೇರುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಭೂಮಿಯಲ್ಲಿ ನೀರು ಇಂಗುವುದಿಲ್ಲ. ಇದರಿಂದ ಮಳೆ ಬಂದಾಗ ನದಿ ತೋಡುಗಳು ತುಂಬಿ ಹರಿಯುತ್ತದೆ. ಮಳೆ ನಿಂತಾಗ ದಿಢೀರಾಗಿ ನೀರಿನ ಪ್ರಮಾಣ ಕುಸಿತವಾಗುತ್ತದೆ.

ಕೊಡಗಿನಲ್ಲಿ 2019 ಡಿಸೆಂಬರ್ ಮೊದಲ ವಾರದಲ್ಲಿ ಮಳೆಯಾಗಿತ್ತು. ತದ ನಂತರ ಮಳೆಯಾಗಿಲ್ಲ. ಸುಮಾರು ಎರಡು ತಿಂಗಳ ಅವಧಿಯಲ್ಲಿ ಮಳೆ ಇಲ್ಲದೇ ಇರುವುದರಿಂದ ಜಿಲ್ಲೆಯ ಪ್ರಮುಖ ನದಿಗಳಾದ ಕಾವೇರಿ, ಲಕ್ಷ್ಮಣತೀರ್ಥ, ಕೀರೆಹೊಳೆ, ಬರಪೊಳೆ, ಕೊಂಗಣ ಪೊಳೆ ಇತ್ಯಾದಿ ನದಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿತ ಕಾಣುವಂತಾಗಿದೆ.

ಭತ್ತದ ಕೃಷಿ ತೊರೆಯಲು ಪ್ರಮುಖ ಕಾರಣಗಳು: ಭತ್ತದ ಕೃಷಿ ಲಾಭದಾಯಕವಲ್ಲ, ಕಾರ್ಮಿಕರ ಕೊರತೆ, ಉತ್ಪಾದನ ವೆಚ್ಚ ಹೆಚ್ಚಳ, ವನ್ಯಪ್ರಾಣಿಗಳ ಹಾವಳಿ, ಅವೈಜ್ಞಾನಿಕ ಮಾರುಕಟ್ಟೆದರ ಹಾಗೂ ಇತರೆ ಕಾರಣ.