ಕುಶಾಲನಗರ, ಜ 31: ಕಾಡಿನಿಂದ ಪಟ್ಟಣಕ್ಕೆ ಬಂದ ಕೋತಿಯೊಂದಕ್ಕೆ ಕೆಲವರು ಹಲ್ಲೆ ಮಾಡಿದ ಹಿನ್ನಲೆಯಲ್ಲಿ ತಲೆ ಮತ್ತು ಕಾಲು ಭಾಗಕ್ಕೆ ಪೆಟ್ಟಾಗಿ ಓಡಾಡಲು ಸಂಕಷ್ಟಪಡುತ್ತಿದ್ದ ದೃಶ್ಯ ಕುಶಾಲನಗರದ ಬೈಚನಹಳ್ಳಿ ಬಳಿ ಕಂಡುಬಂದಿದೆ. ಕಾವೇರಿ ನದಿ ಬದಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೋತಿಗಳ ಓಡಾಟ ಅಧಿಕವಾಗಿದ್ದು ಈ ಬಗ್ಗೆ ಸಂಬಂಧಿಸಿದ ಅರಣ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗದೆ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಕೋತಿ ಚೇಷ್ಟೆ ಅತಿರೇಕಕ್ಕೆ ತಲುಪಿದೆ. ಆಹಾರದ ಕೊರತೆಯಿಂದ ಕೋತಿಗಳು ಅಂಗಡಿ, ಮನೆಗಳಿಗೆ ನುಗ್ಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ನಡುವೆ ಇದರಿಂದ ರೋಸಿ ಹೋದ ಕೆಲವರು ಕೋತಿಗಳ ಮೇಲೆ ಕಲ್ಲೆಸೆಯುವುದು, ಹಲ್ಲೆ ನಡೆಸುವುದು ಇತ್ತೀಚಿನ ಬೆಳವಣಿಗೆಯಾಗಿದ್ದು ಇದರಿಂದ ಕೋತಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗಿದೆ.

ಶುಕ್ರವಾರ ಬೆಳಗ್ಗೆ ಬೈಚÀನಹಳ್ಳಿ ಅಂಗಡಿಯೊಂದರ ಮುಂಭಾಗದಲ್ಲಿ ತೀವ್ರ ನೋವಿನಿಂದ ನರಳುತ್ತಿದ್ದ ಕೋತಿಯೊಂದಕ್ಕೆ ಸ್ಥಳೀಯ ಸಂಘಟನೆಯ ಮುಖಂಡರಾದ ಸಹದೇವ್ ಮತ್ತಿತರರು ಆರೈಕೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಚಿಕಿತ್ಸೆಗೆ ಕ್ರಮಕೈಗೊಳ್ಳಲಾಯಿತು.

-ಸಿಂಚು