ಶನಿವಾರಸಂತೆ, ಜ. 25: ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಆಟೋರಿಕ್ಷಾವೊಂದಕ್ಕೆ ಖಾಸಗಿ ಬಸ್ ಡಿಕ್ಕಿಪಡಿಸಿದ ಪರಿಣಾಮ ಆಟೋ ಮಗುಚಿ ಬಿದ್ದು ಆಟೋದೊಳಗಿದ್ದ ಮಹಿಳೆಗೆ ಗಾಯವಾಗಿದೆ.
ಸುಳುಗಳಲೆ ಗ್ರಾಮದ ನಿವಾಸಿ ಲಲಿತಮ್ಮ ಚೆನ್ನೇಗೌಡ ಅವರು ಶುಕ್ರವಾರ ಬೆಳಿಗ್ಗೆ ತಮ್ಮ ಸಹಪಾಠಿಗಳಾದ ವಿಜಯಲಕ್ಷ್ಮಿ, ಗೌರಮ್ಮ ಮತ್ತು ಪೊನ್ನಮ್ಮ ಅವರೊಂದಿಗೆ ಕೂಲಿಕೆಲಸಕ್ಕೆಂದು ಆಟೋರಿಕ್ಷಾದಲ್ಲಿ ಗುಂಡೂರಾವ್ ಬಡಾವಣೆಗೆ ಹೋಗುತ್ತಿರುವಾಗ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಎದುರುಗಡೆಯಿಂದ ಬಂದ ಖಾಸಗಿ ಬಸ್ ಡಿಕ್ಕಿಯಾಗಿದೆ. ಆಟೋರಿಕ್ಷಾ ಮಗುಚಿಕೊಂಡು ಬಿದ್ದಾಗ ಅವರಿಗೆ ಗಾಯವಾಗಿದೆ. ಗಾಯಾಳುವನ್ನು ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರಸಂತೆ ಪೊಲೀಸ್ ಠಾಣೆಗೆ ದೊರೆತ ದೂರಿನನ್ವಯ ಠಾಣೆಯ ಹೆಡ್ಕಾನ್ಸ್ಟೇಬಲ್ ಬೋಪಣ್ಣ ಅವರು ಹಾಸನದ ಸರಕಾರಿ ಆಸ್ಪತ್ರೆಗೆ ತೆರಳಿ ಗಾಯಾಳುವಿನ ಹೇಳಿಕೆ ಪಡೆದು ವಿಧಿ 279, 337 ಐಪಿಸಿ ಪ್ರಕರಣ ದಾಖಲಿಸಿ ಖಾಸಗಿ ಬಸ್ ಹಾಗೂ ಆಟೋರಿಕ್ಷಾವನ್ನು ಠಾಣೆಯ ವಶಕ್ಕೆ ಪಡೆದಿರುತ್ತಾರೆ.