ವೀರಾಜಪೇಟೆ, ಜ. 24: ಕೇರಳದ ಹುಲಿಕಲ್‍ನ ಆದಿ ಬೈತೂರು ದೇವಸ್ಥಾನದಲ್ಲಿ ಬೈತೂರಪ್ಪ ಉತ್ಸವದ ಅಂಗವಾಗಿ ಇಂದು ಬೆಳಗಿನಿಂದಲೇ ದೇವರಿಗೆ ವಿವಿಧ ರೀತಿಯ ಅಭಿಷೇಕಗಳು, ಸಾಂಪ್ರದಾಯಿಕ ಪೂಜೆ, ಪುನಸ್ಕಾರಗಳು ಭಕ್ತಾದಿಗಳಿಂದ ಶ್ರದ್ಧಾ ಭಕ್ತಿಯಿಂದ ಜರುಗಿದವು.

ಅಪರಾಹ್ನ 2.30ಗಂಟೆಗೆ ವರ್ಷಂಪ್ರತಿಯಂತೆ ಉತ್ಸವ ಮೂರ್ತಿಯನ್ನು ಆನೆಯಲ್ಲಿ ಕೂರಿಸಿ ಕೇರಳದ ಚಂಡೆಮೇಳದೊಂದಿಗೆ ಉತ್ಸವದ ವಿಧಿ ವಿಧಾನದಂತೆ ಏಳು ಸುತ್ತು ಪ್ರದಕ್ಷಿಣೆ ನಡೆಸಲಾಯಿತು. ಇಂದಿನ ಉತ್ಸವದಲ್ಲಿ ಕೇರಳ ಕೊಡಗು ಜಿಲ್ಲೆ ಸೇರಿದಂತೆ ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಕೊಡಗಿನಿಂದ ಬಂದ ಭಕ್ತಾದಿಗಳು ಕೊಡವ ಸಾಂಪ್ರದಾಯಿಕ ಉಡುಪನ್ನು ಧರಿಸಿ ಉತ್ಸವದಲ್ಲಿ ಪಾಲ್ಗೊಂಡಿದ್ದು ಉತ್ಸವಕ್ಕೆ ಕೊಡಗಿನ ಮೆರುಗನ್ನು ನೀಡಿದಂತಾಗಿತ್ತು.

ದೇವಸ್ಥಾನದ ಸುತ್ತ ಆನೆ ಅಂಬಾರಿ ಪ್ರದಕ್ಷಿಣೆ ಅಪರಾಹ್ನ 2.30ರಿಂದ 4.30ರ ವರೆಗೂ ನಡೆಯಿತು. ನಂತರ ಕೈ ಭಂಡಾರದ ಕಾರ್ಯಕ್ರಮವು ಜರುಗಿತು. ಉತ್ಸವದ ಪ್ರಯುಕ್ತ ಬೆಳಿಗ್ಗೆ 10ಗಂಟೆಗೆ ದೇವಸ್ಥಾನದ ಹೊರ ಸಭಾಂಗಣದಲ್ಲಿ ಮೈಸೂರು ಕೊಡವ ಸಮಾಜದಿಂದ ಬೊಳಕಾಟ್ ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಜೆ 6ಗಂಟೆಗೆ ಹುಳಿಕಲ್‍ನ ಮುಖ್ಯ ಬೀದಿಗಳಲ್ಲಿ ಜ್ಯೋತಿ ಹಿಡಿದು ಇತರ ಸಾಂಪ್ರದಾಯಿಕ ಕಾರ್ಯಕ್ರಮ ಗಳೊಂದಿಗೆ ರಾತ್ರಿ ತನಕವೂ ಮೆರವಣಿಗೆ ಜರುಗಿ ದೇವಾಲಯಕ್ಕೆ ತೆರಳಿತು.

ಬೈತೂರು ಉತ್ಸವದ ಅಂಗವಾಗಿ ಇಂದು ಅಪರಾಹ್ನ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆಗೊಳಿಸಲಾಗಿತ್ತು. ಬೈತೂರು ಉತ್ಸವಕ್ಕೆ ತಾ. 15ರಂದು ಸಾಂಪ್ರದಾಯಿಕ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗಿತ್ತು. ತಾ.26ರಂದು ಉತ್ಸವ ಸಮಾರೋಪಗೊಳ್ಳಲಿದೆ.