ಸೋಮವಾರಪೇಟೆ,ಜ.24: ತಾಲೂಕಿನ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ನೆಲೆಸಿರುವ ಹೊರರಾಜ್ಯಗಳ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಅವರುಗಳ ಗುರುತಿನ ಚೀಟಿ ಪರಿಶೀಲನಾ ಕಾರ್ಯ ನಡೆಯುತ್ತಿದೆ.

ನಿನ್ನೆ ದಿನ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಂತೆ 47 ಮಂದಿಯ ಗುರುತು ಚೀಟಿಗಳನ್ನು ಪರಿಶೀಲಿಸಲಾಗಿದ್ದು, ಇಂದು 13 ಮಂದಿಯ ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಕಾಫಿ ಕೊಯ್ಲು ಸಮಯ ವಾಗಿರುವದರಿಂದ ತೋಟಗಳ ಲೈನ್‍ಮನೆಯಲ್ಲಿ ಹೆಚ್ಚಿನ ಕಾರ್ಮಿಕರಿಗೆ ಆಶ್ರಯ ನೀಡಲಾಗಿದ್ದು, ಇವರುಗಳ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಲು ತೋಟ ಮಾಲೀಕರುಗಳೇ ತಮ್ಮ ವಾಹನದಲ್ಲಿ ಪೊಲೀಸ್ ಠಾಣೆಗೆ ಕರೆತರುತ್ತಿದ್ದಾರೆ.

ಇಂತಹ ಕಾರ್ಮಿಕರು ಅಸ್ಸಾಂ, ಬಿಹಾರ, ಪಶ್ಚಿಮಬಂಗಾಳ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯದವರಾಗಿದ್ದು, ಸ್ಥಳೀಯ ಪೊಲೀಸರಿಗೆ ತಮ್ಮಲ್ಲಿರುವ ಗುರುತಿನ ಚೀಟಿಗಳನ್ನು ತೋರಿಸಿ ಪರಿಶೀಲನೆಗೆ ಒಳಪಡುತ್ತಿದ್ದಾರೆ.ಹೆಚ್ಚಿನವರು ಆ ರಾಜ್ಯಗಳ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳನ್ನು ಹಾಜರುಪಡಿಸುತ್ತಿದ್ದಾರೆ.