ಮಡಿಕೇರಿ, ಜ. 25: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ; ಸಂಬಂಧಿಸಿದ ಇಲಾಖೆಯ ಮುಖಾಂತರ ಒಟ್ಟು ರೂ. 40 ಕೋಟಿಯ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಈ ಪೈಕಿ ರೂ. 21 ಕೋಟಿಯ ಕಾಮಗಾರಿಗೆ ಕರ್ನಾಟಕ ಸರಕಾರ ಅನುಮೋದನೆ ನೀಡಿದೆ. ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿ ಯೊಂದಿಗೆ; ವೀರಾಜಪೇಟೆಯ ಮಲೆತಿರಿಕೆ ಅಯ್ಯಪ್ಪ ಬೆಟ್ಟದಲ್ಲಿ ರೂ. 3.50 ಕೋಟಿಯ ಅಭಿವೃದ್ಧಿ ಹಾಗೂ ಚಿಟ್ಟೆಗಳ ಉದ್ಯಾನ ನಿರ್ಮಿಸಿ ಪ್ರವಾಸಿಗಳ ಆಕರ್ಷಣೆಗೆ ಯೋಜನೆ ರೂಪಿಸಲಾಗುತ್ತಿದೆ.ಜಿಲ್ಲೆಯ ಅಭಿವೃದ್ಧಿ ಕುರಿತು ಮಾಹಿತಿ ಬಯಸಿದಾಗ, ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಪ್ರಬಾರ ಅಧಿಕಾರಿ ರಾಘವೇಂದ್ರ ಹಾಗೂ ಮಾರ್ಗದರ್ಶನ ಸಮಾಲೋಚಕ ಚೇತನ್ ಅವರುಗಳು ಭವಿಷ್ಯದ ಕಾಮಗಾರಿ ಬಗ್ಗೆ ವಿವರಿಸಿದರು. ಶ್ರೀ ಓಂಕಾರೇಶ್ವರ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಓಂಕಾರೇಶ್ವರ ದೇವಾಲಯ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗಾಗಿ ರೂ. 40.80 ಲಕ್ಷ ವೆಚ್ಚದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಪಕ್ಕದಲ್ಲೇ ಐದು ಶೌಚಾಲಯಗಳೊಂದಿಗೆ; ಮೂಲಭೂತ ಸೌಲಭ್ಯಕ್ಕಾಗಿ ರೂ. 36 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜಾಸೀಟ್ : ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ರೂ. 4.55 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಲ್ಲಲ್ಲಿ ಪ್ರವಾಸಿಗರ ಸಂಚಾರಕ್ಕಾಗಿ ಬ್ಯಾರಿಕೇಡ್ ನಿರ್ಮಾಣ, ಪಾತ್ವೇ, ರೈಲಿಂಗ್ ಸೌಲಭ್ಯ ರೂಪಿಸಲಾಗುವುದು ಎಂದು ಬೊಟ್ಟು ಮಾಡಿದರು. ಪಕ್ಕದಲ್ಲೇ ಕೂರ್ಗ್ ವಿಲೇಜ್ ಹಾಗೂ ಕೊಡಗು ಶಾಫಿಂಗ್ ಕೇಂದ್ರ ರೂಪುಗೊಳ್ಳುತ್ತಿದ್ದು, ಈ ಬಾಬ್ತು ರೂ. 98.50 ಲಕ್ಷದಲ್ಲಿ ಕೆಲಸ ಮುಂದುವರಿದಿದೆ ಎಂದರು.
ಜನರಲ್ ತಿಮ್ಮಯ್ಯ ಸ್ಮಾರಕ : ನಗರದ ಮುಖ್ಯ ರಸ್ತೆಗೆ ಹೊಂದಿ ಕೊಂಡಂತೆ ಕೊಡಗಿನ ವೀರ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕದ ಮುಂದುವರಿದ ಕಾಮಗಾರಿಗೆ ರೂ. 1.42 ಕೋಟಿ ಹೆಚ್ಚಿನ ಅನುದಾನ ಕೋರಲಾಗಿದ್ದು, ಈ ಸ್ಮಾರಕ ಭವನಕ್ಕೆ ಅಗತ್ಯ ಕಾಯಕಲ್ಪ ಒದಗಿಸಲಾಗುವುದು ಎಂದು ನೆನಪಿಸಿದರು.
ರಸ್ತೆ ಅಭಿವೃದ್ಧಿ : ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಮಾಂದಲಪಟ್ಟಿ ಪ್ರವಾಸಿ ತಾಣದ ರಸ್ತೆ, ರೈಲಿಂಗ್ಸ್, ಮೆಟ್ಟಿಲುಗಳು, ಪಾರ್ಕಿಂಗ್, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯದೊಂದಿಗೆ ಆಸನ ವ್ಯವಸ್ಥೆ ಕಲ್ಪಿಸಲು ರೂ. 5.50 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಅರಣ್ಯ ಇಲಾಖೆ ಕಾಮಗಾರಿ ನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಂತೆಯೇ ಭಾಗಮಂಡಲದ ಕೆಂಪುರಾಶಿ ಮೊಟ್ಟೆ ರಸ್ತೆ, ಕಕ್ಕಬ್ಬೆ ಬಳಿ ನಾಲ್ಕುನಾಡು ಅರಮನೆಗೆ ತೆರಳುವ ರಸ್ತೆ ಕಾಂಕ್ರಿಟೀಕರಣಕ್ಕೆ ತಲಾ ರೂ. 3 ಕೋಟಿಯಂತೆ ಒಟ್ಟು ರೂ. 6 ಕೋಟಿಯ ಕಾಮಗಾರಿ ನಡೆಯುತ್ತಿ ರುವುದಾಗಿ ಮಾಹಿತಿ ನೀಡಿದರು.
ಅಬ್ಬಿ ಜಲಪಾತ : ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಅಬ್ಬಿ ಜಲಪಾತ ದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ರೂ. 1.75 ಕೋಟಿ ವೆಚ್ಚದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಯೊಂದಿಗೆ, ಇತರ ಮೂಲಭೂತ ಸೌಕರ್ಯ ರೂಪಿಸಲು ಕ್ರಮ ವಹಿಸಲಾಗಿದೆ. ಈ ಕೆಲಸ ಪೂರ್ಣಗೊಳಿಸಿದ ಬಳಿಕ ಅಲ್ಲಿನ ಗ್ರಾ.ಪಂ.ಗೆ ನಿರ್ವಹಣೆ ವಹಿಸಲಾ ಗುವುದು ಎಂದು ರಾಘವೇಂದ್ರ ವಿವರಿಸಿದರು.
ಕೊಡವ ಹೆರಿಟೇಜ್ : ನಗರದ ಗಾಲ್ಫ್ ಬಳಿ ಅಪೂರ್ಣಗೊಂಡಿರುವ ಕೊಡವ ಹೆರಿಟೇಜ್ ಕಟ್ಟಡ ಕಾಮಗಾರಿಗೆ, ಮರು ಟೆಂಡರ್ ಪ್ರಕ್ರಿಯೆಯೊಂದಿಗೆ; ಲೋಕೋಪ ಯೋಗಿ ಇಲಾಖೆ ಕೆಲಸವನ್ನು ಪೂರೈಸಲಿದ್ದು,
(ಮೊದಲ ಪುಟದಿಂದ) ರೂ. 171.93 ಲಕ್ಷ ಅನುದಾನ ಇದುವರೆಗೆ ವೆಚ್ಚವಾಗಿದೆ. ಈ ಕಾಮಗಾರಿಗೆ ಒಟ್ಟು ರೂ. 268.04 ಲಕ್ಷದ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ಒದಗಿಸಿದರು. ಇದೀಗ ಪುನರ್ ಟೆಂಡರ್ ಕರೆಯಲಾಗಿದೆ ಎಂದರು.
ಮಲ್ಲಳ್ಳಿ ಜಲಪಾತ : ಈಗಾಗಲೇ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿಗಳ ಸುರಕ್ಷತೆಗಾಗಿ ರೂ. 1.92 ಕೋಟಿ 92 ಲಕ್ಷದ ಅಭಿವೃದ್ಧಿ ಕೈಗೊಂಡು ಮೆಟ್ಟಿಲು, ರೈಲಿಂಗ್, ತಂತಿ ಬೇಲಿ ಸಹಿತ ಪಾರ್ಕಿಂಗ್, ಮಳಿಗೆ, ಶೌಚಾಲಯ ಮುಂತಾದ ಸೌಲಭ್ಯ ರೂಪಿಸಲಾಗಿದ್ದು, ಶೇ. 70ರಷ್ಟು ಕೆಲಸ ಮುಗಿದಿದೆ ಎಂದರು. ಪ್ರವಾಸಿಗರು ಪ್ರಾಣಾಪಾಯಕ್ಕೆ ಒಳಗಾಗದಂತೆ ಈ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ ಎಂದರು.
ದುಬಾರೆ ಅಭಿವೃದ್ಧಿ : ಕುಶಾಲನಗರ ಬಳಿಯ ಸಾಕಾನೆ ಶಿಬಿರದ ದುಬಾರೆ ವ್ಯಾಪ್ತಿಯಲ್ಲಿ ಪ್ರವಾಸಿಗಳ ವಾಹನ ನಿಲುಗಡೆಗೆ ರೂ. 2.30 ಕೋಟಿಯ ಕಾಮಗಾರಿ ಹಾಗೂ ರೂ. 1.73 ಕೋಟಿ ವೆಚ್ಚದಲ್ಲಿ ಸೋಪಾನಕಟ್ಟೆಯೊಂದಿಗೆ ಉದ್ಯಾನ ನಿರ್ಮಾಣ ಮಾಡಲಾಗುವುದೆಂದು ಮಾಹಿತಿ ನೀಡಿದರು.
ತೂಗು ಸೇತುವೆ : ದುಬಾರೆ ಸಾಕಾನೆ ಶಿಬಿರಕ್ಕೆ ತೆರಳಲು ರೂ. 4 ಕೋಟಿ ವೆಚ್ಚದಲ್ಲಿ ತೂಗು ಸೇತುವೆ ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆಗೆ ವಹಿಸಲಾಗುವುದು ಎಂದರ ಲ್ಲದೆ, ಪ್ರವಾಸಿಗಳಿಗೆ ಮೂಲಭೂತ ಸೌಕರ್ಯಕ್ಕೆ ಕ್ರಮ ವಹಿಸಲಾಗಿದೆ ಎಂದು ಯೋಜನೆ ಬಗ್ಗೆ ಹೇಳಿದರು.
ತಾವರೆ ಕೆರೆ : ಕುಶಾಲನಗರ ಹೆದ್ದಾರಿ ಬಳಿ ಪಟ್ಟಣ ಪಂಚಾಯಿತಿಗೆ ಸೇರಿದ ವಿಶಾಲ 2 ಎಕರೆ ಕೆರೆಯನ್ನು ಅಭಿವೃದ್ಧಿಗೊಳಿಸಿ; ಈ ತಾವರೆ ಕರೆಯಲ್ಲಿ ದೋಣಿ ವಿಹಾರ, ಉದ್ಯಾನ, ಆಸನ ಮುಂತಾದ ವ್ಯವಸ್ಥೆ ರೂಪಿಸಲು ಇಲಾಖೆ ರೂ. 50 ಲಕ್ಷ ನೀಡಲಿದ್ದು, ಮಿಕ್ಕ ಹಣ ಪಟ್ಟಣ ಪಂಚಾಯಿತಿ ಕಲ್ಪಿಸಲಿದೆ ಎಂದರು.
ಇರ್ಪು - ಚೇಲಾವರ : ಅಂತೆಯೇ ಇರ್ಪು ಹಾಗೂ ಚೇಲಾವರ ಜಲಪಾತಗಳ ಅಭಿವೃದ್ಧಿ ಯೊಂದಿಗೆ; ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆಗಾಗಿ ರೂ. 1 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈ ಪೈಕಿ ರೂ. 80 ಲಕ್ಷದ ಅಭಿವೃದ್ಧಿ ಇರ್ಪುವಿನಲ್ಲಿ ಹಾಗೂ ರೂ. 20 ಲಕ್ಷದ ಕೆಲಸ ಚೇಲಾವರ ಜಲಪಾತದಲ್ಲಿ ಕೈಗೊಂಡು ಪ್ರವಾಸಿಗರಿಗೆ ಪ್ರಾಣಾಪಾಯ ಎದುರಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮುಳ್ಳೂರು : ಶನಿವಾರಸಂತೆ ಬಳಿ ಮುಳ್ಳೂರು ಜೈನ ಬಸೀದಿಗೆ ತೆರೆಳುವ ರಸ್ತೆ ಅಭಿವೃದ್ಧಿಯೊಂದಿಗೆ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಕ್ಕಾಗಿ ರೂ. 1 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, ಈ ಎಲ್ಲ ಅಭಿವೃದ್ಧಿಯನ್ನು ಕರ್ನಾಟಕ ಪ್ರವಾಸೋದ್ಯಮ ಸಚಿವರ ಸಿ.ಟಿ. ರವಿ ಅವರ ಸಲಹೆಯೊಂದಿಗೆ ಇಲಾಖೆಯ ಮೇಲಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ನಿರ್ದೇಶನದಂತೆ ಕೈಗೊಂಡಿರುವುದಾಗಿ ರಾಘವೇಂದ್ರ ಹಾಗೂ ಚೇತನ್ ಸ್ಪಷ್ಟಪಡಿಸಿದರು.