ಮಡಿಕೇರಿ, ಜ. 24: ಹಾಸನ ಜಿಲ್ಲೆಯ ಹೊಳೆನರಸಿಪುರದಿಂದ ನಾಪತ್ತೆಯಾಗಿದ್ದ ವಿವಾಹ ನಿಶ್ಚತಾರ್ಥಗೊಂಡಿದ್ದ ಮದುಮಗ ಮಡಿಕೇರಿಯಲ್ಲಿ ಪತ್ತೆಯಾಗಿದ್ದು, ಪೊಲೀಸರ ಸಮ್ಮುಖದಲ್ಲಿ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.ಹಾಸನ ಜಿಲ್ಲೆಯ ಹೊಳೆನರಸಿಪುರ ನಿವಾಸಿ ಸೆಸ್ಕ್ ಉದ್ಯೋಗಿ ಬಿ.ಪಿ. ಸುನಿಲ್ಕುಮಾರ್ ವಿವಾಹ ಮುಂಬರುವ ತಾ. 28ಕ್ಕೆ ನಿಶ್ಚಯವಾಗಿತ್ತು. ಆದರೆ ಸುನಿಲ್ ಕಳೆದ ತಾ. 18ರಂದು ಮೈಸೂರಿಗೆ ಲಗ್ನಪತ್ರಿಕೆ ನೀಡಲೆಂದು ತೆರಳಿದವನು ಅಲ್ಲಿಂದ ತುಮಕೂರಿಗೆ ಹೋಗುವುದಾಗಿ ಹೇಳಿದವನು ಅಂದಿನಿಂದ ನಾಪತ್ತೆಯಾಗಿದ್ದ ಅವನ ಮೊಬೈಲ್ ಕೂಡ ‘ಸ್ವಿಚ್ ಆಫ್’ ಆಗಿತ್ತು. ಈ ಬಗ್ಗೆ ಸುನಿಲ್ ಪೋಷಕರು ನೀಡಿದ ದೂರಿನ ಮೇರೆಗೆ ಹೊಳೆನರಸಿಪುರ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತುಈ ನಡುವೆ ಸುನಿಲ್ನ ಆಮಂತ್ರಣ ಪತ್ರಿಕೆ ಮಂಗಳೂರು ರಸ್ತೆಯ ತಾಳತ್ಮನೆ ಬಳಿ ರಸ್ತೆ ಬದಿಯಲ್ಲಿ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಪತ್ರಿಕೆಯಲ್ಲಿದ್ದ ಮೊ. ನಂಬರ್ ಅನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ಇದನ್ನಾಧರಿಸಿ ಹೊಳೆನರಸಿಪುರ ಪೊಲೀಸರು (ಮೊದಲ ಪುಟದಿಂದ) ಹಾಗೂ ಸುನಿಲ್ನ ಸಂಬಂಧಿಕರು ಮಡಿಕೇರಿಯಲ್ಲಿ ಸುತ್ತ ಮುತ್ತ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಸುಳಿವು ಸಿಗದಿದ್ದಾಗ ‘ಶಕ್ತಿ’ ಕಚೇರಿಗೆ ಆಗಮಿಸಿ ಈ ಬಗ್ಗೆ ವರದಿ ಮಾಡಿ ಪತ್ತೆ ಹಚ್ಚಲು ಸಹಕರಿಸುವಂತೆ ಮನವಿ ಮಾಡಿದ್ದರು. ಈ ಬಗ್ಗೆ ‘ಶಕ್ತಿ’ಯಲ್ಲಿ ತಾ. 23ರಂದು ‘ಹಾಸನದ ಮದುಮಗ ನಾಪತ್ತೆ’ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು.
‘ಶಕ್ತಿ’ ಸುಳಿವು : ನಿನ್ನೆ ದಿನ ಮಂಗಳೂರು ರಸ್ತೆಯಲ್ಲಿರುವ ಬಾರೊಂದರಲ್ಲಿ ಯುವಕನೋರ್ವ ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ‘ಶಕ್ತಿ’ಯಲ್ಲಿ ಪ್ರಕಟಗೊಂಡ ಚಿತ್ರವನ್ನು ಹೋಲುವ ಯುವಕನನ್ನು ಕಂಡು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ನಿತ್ಯ ವಲಸಿಗ ಕಾರ್ಮಿಕರ ತಪಾಸಣೆ ಕರ್ತವ್ಯದಲ್ಲಿದ್ದ ವೃತ್ತ ನಿರೀಕ್ಷಕರು ತಮ್ಮ ಸಿಬ್ಬಂದಿ ದಿನೇಶ್ ಅವರನ್ನು ಮಫ್ತಿಯಲ್ಲಿ ಹೋಗಿ ಹಿಡಿದುಕೊಂಡು ಬರುವಂತೆ ಸೂಚಿಸಿದ್ದಾರೆ. ಅದೇ ವೇಳೆಗೆ ಸುನಿಲ್ನ ಮೊಬೈಲ್ ಆನ್ ಆಗಿದ್ದರಿಂದ ಲೋಕೇಶನ್ನಲ್ಲಿ ಚಿಕ್ಕಪೇಟೆ ಎಂದು ತೋರಿಸಿದ್ದು, ದಿನೇಶ್ ತೆರಳುವಷ್ಟರಲ್ಲಿ ಸುನಿಲ್ ಮಂಗಳೂರು ಕಡೆಯ ಬಸ್ಸನ್ನೇರಿದ್ದಾನೆ. ದಿನೇಶ್ ಕೂಡ ಬಸ್ಸನ್ನೇರಿ ಆತನನ್ನು ಹಿಡಿದು ಠಾಣೆಗೆ ಕರೆ ತಂದಿದ್ದಾರೆ.
ಅಂತ್ಯ ಕಾಣಲಿದ್ದ...!
ಮದುವೆ ನಿಶ್ಚಯವಾದ ಬಳಿಕ ಸುನಿಲ್ ಮಾನಸಿಕವಾಗಿ ಕುಗ್ಗಿಹೋಗಿದ್ದು, ಹಣಕಾಸು ತೊಂದರೆ ಇರುವುದರಿಂದ ಸುಳ್ಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದುದಾಗಿ ವಿಚಾರಿಸಿದಾಗ ಸುನಿಲ್ ಹೇಳಿಕೊಂಡಿದ್ದ. ತನ್ನಲ್ಲಿದ್ದ ಬ್ಯಾಗ್ನಲ್ಲಿ ಮದ್ಯದೊಂದಿಗೆ ವಿಷದ ಬಾಟಲಿ ಕೂಡ ಇಟ್ಟುಕೊಂಡಿದ್ದನೆನ್ನಲಾಗಿದೆ. ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿ, ಭಾವಚಿತ್ರದಿಂದಾಗಿ ಆತ ಸಿಕ್ಕಿದ್ದಾನೆ.
ಆಸ್ಪತ್ರೆಗೆ ದಾಖಲು : ಸುನಿಲ್ ಸಿಕ್ಕಿರುವ ವಿಚಾರವನ್ನು ಹೊಳೆನರಸಿಪುರ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಅಲ್ಲಿನ ಪೊಲೀಸರು ಮಡಿಕೇರಿಗೆ ಆಗಮಿಸಿ ಆತನನ್ನು ಕರೆದೊಯ್ದಿದ್ದಾರೆ. ಆತ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದು, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪೋಷಕರು ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೊಳೆನರಸಿಪುರ ಠಾಣಾಧಿಕಾರಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
- ಸಂತೋಷ್