ಮಡಿಕೇರಿ, ಜ. 24: ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ತೋಡು ಬೈಗೋಡು ಗ್ರಾಮದ ಕಾಫಿ ತೋಟವೊಂದರಲ್ಲಿ; ಅಸ್ಸಾಂ ಮೂಲದ ಕಾರ್ಮಿಕ; ಓರ್ವ ಮಹಿಳೆ ಹಾಗೂ ಆಕೆಯ ಪುತ್ರಿಯನ್ನು ಹೊಡೆದು ಸಾಯಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ; ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಅಸ್ಸಾಂ ಮೂಲದ ಗಫೂರ್ ಆಲಿ (38) ಎಂಬಾತನನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಬಂಧಿಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈ ಸಂಜೆ ತಮ್ಮ ಕಚೇರಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು; ಇಂತಹ ಅಪರಾಧಗಳಿಗೆ ಅವಕಾಶ ವಾಗದಂತೆ ಕಾಫಿ ಬೆಳೆಗಾರರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂದು ತಿಳಿ ಹೇಳಿದರು. (ಮೊದಲ ಪುಟದಿಂದ) ಈ ಕೃತ್ಯ ನಡೆದಿರುವ ಕಾಫಿ ತೋಟದ ಮಾಲೀಕರು ಹೊರ ರಾಜ್ಯದ ಆರೋಪಿ ಕಾರ್ಮಿಕನಿಂದ ಯಾವದೇ ದಾಖಲಾತಿ ಅಥವಾ ಗುರುತು ಪತ್ರ ಹೊಂದಿಕೊಂಡಿರಲಿಲ್ಲ ಎನ್ನುವದು ಕೊಲೆ ಪ್ರಕರಣದ ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದ ಪೊಲೀಸ್ ವರಿಷ್ಠಾಧಿಕಾರಿಗಳು; ಕಾಫಿ ತೋಟಗಳ ಮಾಲೀಕರು ನಿರ್ಲಕ್ಷ್ಯ ವಹಿಸದಂತೆ ತಿಳಿಹೇಳಿದರು.
ದೂರವಾಣಿ ನೀಡಿದ ಸುಳಿವು : ತಾ. 20 ರಂದು ಕೊಲೆಗೈದಿರುವ ಆರೋಪಿ ತಾ. 21 ರಂದು ಕೊಳ್ತೋಡು ಬೈಗೋಡು ತೋಟದಿಂದ ಪರಾರಿಯಾಗಿದ್ದು; ಪಕ್ಕದ ತೋಟದ ಇನ್ನೋರ್ವ ಅಸ್ಸಾಂ ಮೂಲದ ಕಾರ್ಮಿಕ ನೀಡಿದ ಮೊಬೈಲ್ ದೂರವಾಣಿ ಸಂಖ್ಯೆಯಿಂದ ಕೊಲೆಗಾರನ ಪತ್ತೆ ಹಚ್ಚಲು ಸಾಧ್ಯವಾದುದಾಗಿ ವಿವರಿಸಿದರು.
ಕೃತ್ಯದ ಹಿನ್ನೆಲೆ : ವೀರಾಜಪೇಟೆ ತಾಲೂಕು ಕೊಳ್ತೋಡು ಬೈಗೋಡು ಗ್ರಾಮದ ಫಿರ್ಯಾದಿ ಮುಕ್ಕಾಟೀರ ದೇವಯ್ಯ ಅವರ ತೋಟಕ್ಕೆ ಕಳೆದ 15 ದಿನಗಳ ಹಿಂದೆ; ಅಸ್ಸಾಂ ಮೂಲದ ಆಲಿ ಆತನ ಹೆಂಡತಿ ಹಾಗೂ 15 ವರ್ಷದ ಮಗಳನ್ನು ಕರೆದುಕೊಂಡು ಬಂದು ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ತಾ. 19 ರಂದು ರೂ. 13 ಸಾವಿರ ಕೂಲಿ ಕೆಲಸದ ಹಣವನ್ನು ಪಡೆದುಕೊಂಡಿದ್ದ. ತಾ. 20 ರಂದು ಮಹಿಳೆ ಮತ್ತು ಆಕೆಯ ಮಗಳು ಸಂತೆಗೆ ಹೋಗಿ ಬರುತ್ತೆವೆಂದು ಹೇಳಿ ಹೋಗಿದ್ದು; ಆರೋಪಿ ಲೈನ್‍ಮನೆಯಲ್ಲಿಯೇ ಇದ್ದ ಆ ದಿನ ಆಲಿಯ ಹೆಂಡತಿ ಮತ್ತು ಮಗಳ ಮನೆಗೆ ಬಾರದೇ ಇದ್ದು ತಾ. 21 ರಂದು ಆಲಿಯು ಹೆಂಡತಿ ಮತ್ತು ಮಗಳನ್ನು ಹುಡುಕಿಕೊಂಡು ಬರುವುದಾಗಿ ಹೇಳಿ ಹೋಗಿದ್ದಾನೆ. ಅಂದಿನಿಂದ ಆರೋಪಿ ವಾಪಾಸ್ಸು ಬಂದಿರುವುದಿಲ್ಲ. ತಾ. 23 ರಂದು ಬೆಳಗ್ಗೆ 9 ಗಂಟೆಗೆ ತೋಟದ ಕೆಲಸ ..... ಕಾವೇರಿ ತೋಟದ ಬಾವಿಯಲ್ಲಿ ಎರಡು ಮೃತದೇಹಗಳು ತೇಲುತ್ತಿದುದ್ದು ಗಮನಿಸಿದ್ದಾರೆ. ಅಲ್ಲದೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ತಾಯಿ ಮಗಳದ್ದಾಗಿದೆ ಎಂದು ಸುಳಿವು ನೀಡಿದ್ದಾರೆ. ಈ ಕೃತ್ಯವನ್ನು ಆಕೆಯ ಗಂಡ ಆಲಿ ಮಾಡಿರಬಹುದೆಂಬ ಅನುಮಾನವಿರುವುದಾಗಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 06/2020 ಕಲಂ 302, 201, ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಮೃತರ ಹೆಸರು ಮತ್ತು ಆರೋಪಿಯ ವಿಳಾಸ ದೊರಕದೇ ಇದ್ದರೂ ಸಹ ವೈಜ್ಞಾನಿಕವಾಗಿ ಸಿಡಿಆರ್ ಮಾಹಿತಿಯನ್ನು ಪಡೆದುಕೊಂಡು ಪ್ರಕರಣದ ತನಿಖೆ ಕೈಗೊಳ್ಳಾಗಿದೆ. ಮೃತರನ್ನು ಮುರ್ಷಿದಾ ಕತೂನ್ (40) ಹಾಗೂ ಆಕೆಯ 16 ವರ್ಷದ ಮಗಳೆಂದು ಪತ್ತೆ ಮಾಡಲಾಗಿದೆ. ಅಲ್ಲದೆ ಪ್ರಕರಣ ಆರೋಪಿ ಗಫೂರ್ ಆಲಿ ತಂದೆ ಲೇಟ್ ಹಲೀಮ್ಮುದ್ದೀನ್ (38) ಕೂಲಿ ಕೆಲಸ, ಸ್ವಂತ ಊರು ನಿಜ್ ದಲೇಗಾಂವ್, ದಲ್‍ಗಾಂವ್, ಮಂಗಳದೇಯಿ ಜಿಲ್ಲೆ, ದರಾಂಗ್, ಅಸ್ಸಾಂ ರಾಜ್ಯ ಎಂದು ಗೊತ್ತಾಗಿದೆ. ಇವರನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದು ತಂದು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಯು ಹಣದ ವಿಚಾರವಾಗಿ ಆತನೊಡನೆ ವಾಸವಾಗಿದ್ದ ಮುರ್ಷಿದಾ ಕತೂನ್ ಹಾಗೂ ಆಕೆಯ ಮಗಳನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ನಂತರ ಬಾವಿಗೆ ಹಾಕಿರುವದಾಗಿ ಒಪ್ಪಿಕೊಂಡಿದ್ದಾನೆ.
ಬೇರೊಬ್ಬರ ಪತ್ನಿ : ಆರೋಪಿಯು ಕೊಲೆಗೈದಿರುವ ಜೋಡಿಯು ಅಸ್ಸಾಂ ರಾಜ್ಯದ ದಲೇಗಾಂ ನಿವಾಸಿ ಅಲ್ತಫ್‍ಖಾನ್ ಎಂಬಾತನ ಪತ್ನಿ ಹಾಗೂ ಆಕೆಯ ಪುತ್ರಿ ಎಂದು ತನಿಖೆಯ ವೇಳೆ ದೃಢಪಟ್ಟಿದೆ. ಆರೋಪಿಗೆ ಇಬ್ಬರು ಮಕ್ಕಳೊಂದಿಗೆ ದರೆಗಾಂನಲ್ಲಿ ಪತ್ನಿ ಕೂಡ ಇದ್ದು; ತನ್ನೊಂದಿಗಿದ್ದ ಮಹಿಳೆ ಹಣ ನೀಡದ ಕಾರಣ ಕೊಲೆಗೈದಿದ್ದಾನೆ; ಅಲ್ಲದೆ ಆಕೆಯ ಮಗಳು ಸಾಕ್ಷಿ ನುಡಿಯಬಹುದು ಎನ್ನುವ ದುರಾಲೋಚನೆಯಿಂದ ಅಮಾಯಕಳನ್ನೂ ಹತ್ಯೆಗೈದು ಪರಾರಿಯಾಗಿದ್ದು ಬೆಳಕಿಗೆ ಬಂದಿದೆ. ಈ ಮೂಲಕವಾದರೂ ಬೆಳೆಗಾರರು ಎಚ್ಚೆತ್ತುಕೊಳ್ಳುವಂತೆ ಎಸ್‍ಪಿ ತಿಳಿಹೇಳಿದರು.
ಈ ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕಿ ಹಾಗೂ ವೀರಾಜಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಜಯಕುಮಾರ್ ಮಾರ್ಗದರ್ಶನದಲ್ಲಿ, ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೇಗೌಡ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಎಎಸ್‍ಐ ಶ್ರೀಧರ್, ಸಿಬ್ಬಂದಿಯವರಾದ ಬಿ.ಎಂ. ರಾಮಪ್ಪ, ಹೆಚ್.ಎಸ್. ಶ್ರೀನಿವಾಸ, ಮುಸ್ತಾಫ, ಮುನೀರ್, ಟಿ.ಎಸ್. ಗಿರೀಶ, ಮಹಿಳಾ ಪೇದೆ ಶಿಲ್ಪ, ಸುಕುಮಾರ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ಘಟಕದ ರಾಜೇಶ್ ಮತ್ತು ಗಿರೀಶ್ ಪಾಲ್ಗೊಂಡಿದ್ದರು.