*ಗೋಣಿಕೊಪ್ಪ, ಜ. 23: ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಬುಡಕಟ್ಟು ಕಾರ್ಮಿಕರ ಸಂಘ ವತಿಯಿಂದ ಲೈನ್ ಮನೆ ಕಾರ್ಮಿಕರಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಕೊಡಗು ಉಪವಿಭಾಗ ಅಧಿಕಾರಿ ನಂಜುಂಡೆ ಗೌಡ ಸಮ್ಮುಖದಲ್ಲಿ ಅಂತ್ಯ ಕಂಡಿತು.

ಬುಡಕಟ್ಟು ಕಾರ್ಮಿಕ ಸಂಘದ ಅಧ್ಯಕ್ಷ ಗಪ್ಪು ನೇತೃತ್ವದಲ್ಲಿ ಲೈನ್ ಮನೆ ಕಾರ್ಮಿಕರು ಮೂರನೇ ದಿನ ಅಹೋರಾತ್ರಿ ಧರಣಿಯಲ್ಲಿ ತಮ್ಮ ಹಕ್ಕಿಗಾಗಿ ಘೋಷಣೆಯನ್ನು ಕೂಗುತ್ತ ಪ್ರತಿಭಟನೆಯಲ್ಲಿ ನಿರತರಾಗಿದ್ದರು.

ಗುರುವಾರ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಅಧಿಕಾರಿ ಭೇಟಿ ನೀಡಿ ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ತಾ.27ರಂದು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಅಧಿಕಾರಿಗಳ ನೇತೃತ್ವದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಮ್ಮುಖದಲ್ಲಿ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವುದಾಗಿ ತಿಳಿಸಿದರು. ಸಭೆಯಲ್ಲಿ 10 ಜನರ ತಂಡವನ್ನು ರಚಿಸಿ ಸಮಸ್ಯೆಗಳ ಮತ್ತು ಬೇಕಾದ ಸೌಲಭ್ಯಗಳ ಬಗ್ಗೆ ಪಟ್ಟಿ ತಯಾರಿಸಿಕೊಳ್ಳುವಂತೆ ಸಲಹೆ ನೀಡಿದರು. ಸಭೆಯಲ್ಲಿ ಸಮಸ್ಯೆ ಬಗೆಹರಿಸುವುದರಿಂದ ಧರಣಿಯನ್ನು ಮುಂದೂಡುವಂತೆ ಪ್ರತಿಭಟನಾಕಾರರ ಮನವೊಲಿಸಿದರು. ಅಧಿಕಾರಿಯ ಭರವಸೆಯನ್ನು ನಂಬಿದ ಪ್ರತಿಭಟನಾಕಾರರು ಧರಣಿಗೆ ಅಂತ್ಯ ಕಾಣಿಸಿದರು. ಈ ಸಂದರ್ಭ ಕಂದಾಯ ಅಧಿಕಾರಿ ರಾಧಾಕೃಷ್ಣ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.