ಮಡಿಕೇರಿ, ಜ. 23: ಕೊಡಗು ಜಿಲ್ಲೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅತ್ಯಂತ ಸೂಕ್ತ ವಾತಾವರಣವನ್ನು ಹೊಂದಿದ್ದು, ಪ್ರಮುಖವಾಗಿ ಕಾಫಿ, ಏಲಕ್ಕಿ, ಕಾಳುಮೆಣಸು, ಬಾಳೆ, ಅಡಿಕೆ, ತೆಂಗು, ಕಿತ್ತಳೆ ಹಾಗೂ ಇತರ ತೋಟದ ಹಣ್ಣಿನ ಬೆಳೆಗಳನ್ನು 39368 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ತೋಟಗಾರಿಕೆ ಇಲಾಖಾ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ, ತಾಳೆಬೆಳೆ ಅಭಿವೃದ್ಧಿ ಯೋಜನೆ, ತಾಳೆಬೆಳೆ ಅಭಿವೃದ್ಧಿ. ಸೂಕ್ಷ್ಮ ನೀರಾವರಿ ಯೋಜನೆ ಹಾಗೂ ಇತರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಮುಖ ತೋಟಗಾರಿಕೆ ಬೆಳೆಗಳಾದ ಕಾಳುಮೆಣಸು, ಕೊಡಗಿನ ಕಿತ್ತಳೆ, ತಾಳೆಬೆಳೆ, ಗೇರು ಬೆಳೆಗಳ ಪ್ರದೇಶ ವಿಸ್ತರಣೆ, ಪುನಶ್ಚೇತನ ಕಾರ್ಯಕ್ರಮ, ಸೂಕ್ಷ್ಮ ನೀರಾವರಿ ಅಳವಡಿಕೆ, ಗ್ರೀನ್ ಹೌಸ್ ನಿರ್ಮಾಣ, ಕೋಯ್ಲೋತ್ತರ ನಿರ್ವಹಣೆ, ಜೇನುಗಾರಿಕೆ, ಸಮಗ್ರ ರೋಗ ನಿಯಂತ್ರಣ ಇತ್ಯಾದಿ ಕಾರ್ಯಕ್ರಮಗಳಿಗೆ ಸಹಾಯಧನವನ್ನು ನೀಡಲಾಗುವುದು.

2019-20ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆ ಅಭಿವೃದ್ಧಿಗಾಗಿ ರೂ. 316.83 ಲಕ್ಷ ಅನುದಾನದಲ್ಲಿ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ. ಇಲಾಖೆಯ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಯಲ್ಲಿ 9,73,659 ಸಂಖ್ಯೆಯ ವಿವಿಧ ಗಿಡಗಳನ್ನು ಉತ್ಪಾದಿಸಿ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.