ಮಡಿಕೇರಿ, ಜ.23: ಇತ್ತೀಚಿನ ದಿನಗಳಲ್ಲಿ ಕೈಮಗ್ಗ ಉದ್ಯಮವು ನಶಿಸುತ್ತಿದು,್ದ ಈ ಉದ್ಯಮವನ್ನು ಉತ್ತೇಜಿಸಲು ಹಾಗೂ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್, ಸಹಾಯಕ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೇಂದ್ರ ಭಾಗ ಹಾಗೂ ಪ್ರವಾಸಿ ತಾಣವಾದ ರಾಜಾಸೀಟ್ ಹತ್ತಿರದ ಗಾಂಧಿ ಮೈದಾನದಲ್ಲಿ ಜನವರಿ, 24 ರಿಂದ 30 ರವರೆಗೆ ‘ಕಾವೇರಿ ವಸ್ತ್ರಸಿರಿ’ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

ಸಭಾಂಗಣವನ್ನು ತಾ.24 ರಂದು ಮಧ್ಯಾಹ್ನ 3 ಗಂಟೆಗೆ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಉದ್ಘಾಟಿಸಲಿದ್ದಾರೆ. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ದೀಪ ಬೆಳಗಿಸಲಿದ್ದು, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸರೋಜಮ್ಮ ಅವರು ರೇಷ್ಮೆ ಮತ್ತು ಹತ್ತಿ ಮಳಿಗೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯ, ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆ ದಕ್ಷಿಣ ವಿಭಾಗದ ಜಂಟಿ ನಿರ್ದೇಶಕರಾದ ಎ.ಸುರೇಶ್ ಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ.

ಮೇಳದಲ್ಲಿ ಕೈಮಗ್ಗ ನೇಕಾರರು ತಾವು ಉತ್ಪಾದಿಸಿದ ಪರಿಶುದ್ಧ ರೇಷ್ಮೆ ಸೀರೆಗಳು, ಕಾಟನ್ ಸೀರೆಗಳು, ಕಾಂಚಿಪುರಂ ಸೀರೆಗಳು, ಮೊಣಕಾಲ್ಮೂರ್ ಸೀರೆಗಳು, ಇಳಕಲ್ ಸೀರೆಗಳು, ಟವಲ್, ಬೆಡ್‍ಶೀಟ್, ಲುಂಗಿ, ಕಂಚಿಕಾಟನ್ ಸೀರೆಗಳು, ಇನ್ನೂ ಮುಂತಾದ ನಿತ್ಯ ಬಳಕೆಯ ಗೃಹೋಪಯೋಗಿ ವಸ್ತುಗಳನ್ನು ನೇರವಾಗಿ ಮಾರಾಟ ಮಾಡಲಾಗುತ್ತದೆ. ಮೇಳದ ಅವಧಿಯಲ್ಲಿ ಗ್ರಾಹಕರು ಕೊಳ್ಳುವ ವಸ್ತುಗಳ ಮೇಲೆ ರಾಜ್ಯ ಸರ್ಕಾರದ ವಿಶೇಷ ಶೇ.20 ರಷ್ಟು ರಿಯಾಯಿತಿ ಇರುವುದರಿಂದ ಜಿಲ್ಲೆಯ ಗ್ರಾಹಕರು ಕೈಮಗ್ಗ ವಸ್ತುಗಳನ್ನು ಖರೀದಿಸಿ ಈ ಮೇಳದ ಸದುಪಯೋಗ ವನ್ನು ಪಡೆದುಕೊಳ್ಳುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಅವರು ಕೋರಿದ್ದಾರೆ.