ಕುಶಾಲನಗರ, ಜ. 21: ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರ ಅಳವಡಿಸಬೇಕೆಂದು ಕುಶಾಲನಗರ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ ತಿಳಿಸಿದ್ದಾರೆ. ಶಕ್ತಿಯೊಂದಿಗೆ ಪ್ರತಿಕ್ರಿಯಿಸಿದ ಅವರು, ಅಪರಾಧಗಳ ಸಂಖ್ಯೆ ಇಳಿಮುಖಗೊಳಿಸುವ ನಿಟ್ಟಿನಲ್ಲಿ ಕುಶಾಲನಗರ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಕೆಲವು ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದು ಬಸ್ ನಿಲ್ದಾಣ, ದೇವಾಲಯ, ಮಸೀದಿ, ಚರ್ಚ್ ಮತ್ತಿತರ ಪ್ರಾರ್ಥನಾ ಮಂದಿರಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಈಗಾಗಲೆ ಸೂಚನೆ ನೀಡಲಾಗಿದೆ.

ಪಟ್ಟಣದ ಪ್ರತಿಯೊಂದೂ ಅಂಗಡಿ ಮುಂಗಟ್ಟುಗಳಲ್ಲಿ ಕೂಡ ಸಿಸಿ ಕ್ಯಾಮೆರಾ ಅಳವಡಿಸಿ ಅಪರಾಧ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದಿದ್ದಾರೆ.

ಪ್ರವಾಸಿ ಕೇಂದ್ರಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಜನರ ಚಲನವಲನ ಬಗ್ಗೆ ನಿಗಾವಹಿಸಲು ಸಿಸಿ ಕ್ಯಾಮೆರ ಸಹಕಾರಿಯಾಗುತ್ತವೆ ಎಂದು ತಿಳಿಸಿರುವ ಶೈಲೇಂದ್ರ ಅವರು, ಯಾವುದೇ ವಾಹನ ಚಲಾವಣೆ ಸಂದರ್ಭ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಚಾಲಕರು ಪಾಲಿಸಬೇಕು. ಈ ಮೂಲಕ ಅಪಘಾತಗಳನ್ನು ತಡೆಗಟ್ಟಲು ಸಾಧ್ಯ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು ಕಾರು ಮತ್ತಿತರ ವಾಹನಗಳಲ್ಲಿ ಚಾಲಕರು ಮತ್ತು ಸಹ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವ ನಿಯಮ ಪ್ರತಿಯೊಬ್ಬರೂ ಪಾಲಿಸುವುದರೊಂದಿಗೆ ಅಪಘಾತ ಸಂದರ್ಭ ಅನಾಹುತಗಳನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ.

ವಾಹನ ಚಾಲನೆ ಸಂದರ್ಭ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು. 18 ವರ್ಷ ಒಳಗಿನ ಮಕ್ಕಳು ವಾಹನ ಚಲಾವಣೆ ಮಾಡುವುದು ಕಂಡುಬಂದಲ್ಲಿ ಪೋಷಕರ ಮೇಲೆ ಕ್ರಮಕೈಗೊಳ್ಳುವುದರೊಂದಿಗೆ ಪೋಷಕರ ಮೇಲೆ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕುಶಾಲನಗರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ 8 ಕ್ಯಾಮೆರಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ನಿಲ್ದಾಣದ ನಿಯಂತ್ರಣಾಧಿಕಾರಿ ಶ್ಯಾಂಶೆಟ್ಟಿ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು ಮತ್ತು ಪ್ರಯಾಣಿಕರ ವಾಹನಗಳ ನಿಲುಗಡೆ ಕೇಂದ್ರಕ್ಕೆ ಈ ಸಿಸಿ ಕ್ಯಾಮೆರಗಳನ್ನು ಇನ್ನೆರೆಡು ದಿನಗಳಲ್ಲಿ ಅಳವಡಿಸಲಾಗುತ್ತದೆ ಎಂದ ಅವರು ಕುಶಾಲನಗರ ರೋಟರಿ ಸಂಸ್ಥೆ ಈ ಕಾರ್ಯಕ್ಕೆ ಮುಂದೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.