ಕುಶಾಲನಗರ, ಜ. 20: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಪಂಚಾಯ್ತಿ ಅಧ್ಯಕ್ಷೆ ಮತ್ತು ಸದಸ್ಯರೊಬ್ಬರ ನಡುವೆ ಮಾತಿನ ಚಕಮಕಿ ನಡೆದು ಪ್ರಕರಣ ವಿಕೋಪಕ್ಕೆ ತೆರಳಿ ಅಧ್ಯಕ್ಷೆ ಸದಸ್ಯನ ಶರ್ಟ್‍ನ್ನು ಹರಿದು ಹಾಕಿದ ಘಟನೆ ನಡೆದಿದೆ.

ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಪಂಚಾಯಿತಿಯ ಹಿಂದಿನ ಸಭೆಯ ನಡಾವಳಿಗಳನ್ನು ಕಾರ್ಯರೂಪಕ್ಕೆ ತರದಿರುವ ಬಗ್ಗೆ ಸಭೆಯಲ್ಲಿ ಕೆಲವು ಸದಸ್ಯರು ಅಧ್ಯಕ್ಷರ ವಿರುದ್ಧ ಆರೋಪ ವ್ಯಕ್ತಪಡಿಸಿದ್ದಾರೆ. ಚರ್ಚೆಗಳು ನಡೆಯುತ್ತಿರುವ ವೇಳೆ ಪಂಚಾಯಿತಿ ಅಧ್ಯಕ್ಷೆ ಭವ್ಯ ಮತ್ತು ಸದಸ್ಯ ಹರೀಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಉದ್ವೇಗಕ್ಕೆ ಒಳಗಾದ ಅಧ್ಯಕ್ಷೆ ಭವ್ಯ ಸದಸ್ಯ ಹರೀಶ್ ಅವರ ಶರ್ಟ್‍ಗೆ ಕೈಹಾಕಿ ಎಳೆದಿದ್ದಾರೆ.

ಈ ಸಂದರ್ಭ ಕೆರಳಿದ ಅಧ್ಯಕ್ಷೆ ಯಾವಾಗಲೂ ಸಭೆಯಲ್ಲಿ ನನ್ನನ್ನೇ ಟಾರ್ಗೆಟ್ ಮಾಡುತ್ತೀಯ. ತಾಕತ್ತಿದ್ದರೆ ತನ್ನನ್ನು ಹೊಡೆದು ನೋಡು ಎಂದು ಸವಾಲೊಡ್ಡಿ ಸಭೆಯ ಸಭಾಂಗಣದಲ್ಲಿ ಎಲ್ಲರ ಮುಂದೆ ಶರ್ಟ್ ಹಿಡಿದು ಎಳೆದಾಡಿದ್ದಾರೆ. ಈ ಸಂದರ್ಭ ಸದಸ್ಯ ಹರೀಶ ಅವರ ಶರ್ಟ್ ಹರಿದು ಹೋಗಿದೆ.

ಅಧ್ಯಕ್ಷೆ ವಿರುದ್ಧ ದೂರು ದಾಖಲಿಸಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹರೀಶ್ ಎಚ್ಚರಿಸಿದ ಬೆನ್ನಲ್ಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಿರಿಯ ಸದಸ್ಯರು, ಮಹಿಳಾ ಸದಸ್ಯರ ರಾಜಿ ತೀರ್ಮಾನ ಮಾಡುವ ಮೂಲಕ ಪ್ರಕರಣ ಅಂತ್ಯ ಕಂಡಿದೆ.