ಮಡಿಕೇರಿ, ಜ. 21: ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಸುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಶಿಕ್ಷಣದೊಂದಿಗೆ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸುವಂತೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ನಿರ್ಧರಿಸಲಾಗಿದೆ. ಸೂರ್ಲಬ್ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ವತಿಯಿಂದ ಜಂಟಿಯಾಗಿ ಏರ್ಪಡಿಸಲಾಗಿದ್ದ ಪೋಷಕರ ಸಭೆಯಲ್ಲಿ ಈ ಕುರಿತು ಮಾತನಾಡಿದ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಎಂ. ಬಿ. ಅಭಿಮನ್ಯುಕುಮಾರ್ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಈ ದಿಸೆಯಲ್ಲಿ ಸೂರ್ಲಬ್ಬಿ ಮತ್ತು ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸೂರ್ಲಬ್ಬಿ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ತೆರೆಯುವ ಮೂಲಕ ಇಂಗ್ಲೀಷ್ ಭಾಷೆ ಕಲಿಸುವ ದಿಸೆಯಲ್ಲಿ ಪೋಷಕರು ಹೆಚ್ಚಿನ ಗಮನ ಹರಿಸಬೇಕು ಎಂದರು. ಸೂರ್ಲಬ್ಬಿ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಆರಂಭಿಸುವ ಕುರಿತು ತಾವು ಸರ್ಕಾರ ಮತ್ತು ಶಿಕ್ಷಣ ಇಲಾಖೆಯೊಂದಿಗೆ ವ್ಯವಹರಿಸುವುದಾಗಿ ತಿಳಿಸಿದರು. ಶಾಲಾ ಶಿಕ್ಷಕರು ಸೂರ್ಲಬ್ಬಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಕ್ಕಳ ಸಮೀಕ್ಷೆ ನಡೆಸಿ ಪೂರ್ವ ಪ್ರಾಥಮಿಕ ಶಾಲೆಗೆ ಸೇರಲಿರುವ ಮಕ್ಕಳ ಪಟ್ಟಿಯನ್ನು ಇಲಾಖೆಗೆ ಸಲ್ಲಿಸಲು ಸೂಚಿಸಿದ ಎಂ. ಬಿ. ಅಭಿಮನ್ಯು ಕುಮಾರ್, ಬರುವ ಶೈಕ್ಷಣಿಕ ವರ್ಷದಿಂದ ಸೂರ್ಲಬ್ಬಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುವ ಕುರಿತು ವಿಸ್ತ್ರುತ ಚರ್ಚೆ ನಡೆಸಲು ಸದ್ಯದಲ್ಲೇ ಶಾಸಕ ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ಸಭೆಯನ್ನು ಸಂಘಟಿಸಲಾಗುವುದು ಎಂದರು. ಈ ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ.ಆರಂಭಿಸಿ ಇಂಗ್ಲೀಷ್ ಭಾಷಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಿತಿ ವತಿಯಿಂದ ಪ್ರತಿ ತಿಂಗಳು ಸಂಭಾವನೆ ನೀಡಲು ಸಹಕರಿಸುವುದಾಗಿ ಸಮಿತಿಯ ಅಧ್ಯಕ್ಷ ಪುದಿಯತಂಡ ಲೋಕೇಶ್ ಚಂಗಪ್ಪ ತಿಳಿಸಿದರು. ಗರ್ವಾಲೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚಾಮೇರ ಜಿ. ಪಳಂಗಪ್ಪ, ಈ ಶಾಲೆಯ ಬೆಳವಣಿಗೆಗೆ ಗ್ರಾ.ಪಂ. ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಭಾರ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು ಮತ್ತು ಪೋಷಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸೂರ್ಲಬ್ಬಿ ನಾಡಿನ ಅಧ್ಯಕ್ಷ ಮುದ್ದಂಡ ತಿಮ್ಮಯ್ಯ, ಮುದ್ದಂಡ ನಾಣ್ಯಪ್ಪ ಶಾಲಾಭಿವೃದ್ಧಿ ಕುರಿತು ಸಲಹೆ ನೀಡಿದರು. ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಬಿ. ಎಂ. ಸುಂದರಿ, ಅಧ್ಯಾಪಕರಾದ ಕೆ.ಡಿ. ರಜಿತ, ಎಂ.ಟಿ. ಪೂವಯ್ಯ, ಕೆ. ಯಶೋಧ, ಕೆ.ಎ. ಅಮೀನ, ಹಿರಿಯ ವಿದ್ಯಾರ್ಥಿ ರಘು ಚಂಗಪ್ಪ, ಸಮಿತಿ ಸದಸ್ಯೆ ಪ್ರೀತು ಇತರರು ಇದ್ದರು. ಜನಸಂಖ್ಯೆ ಕ್ಷೀಣಿಸಿದಂತೆ ಶಾಲೆಗೆ ಮಕ್ಕಳ ಸಂಖ್ಯೆಯೂ ಕ್ಷೀಣಿಸಿರುವ ಕುರಿತು ಸಭೆಯಲ್ಲಿ ನೆನಪಿಸಿದರು.
ಆನೆ-ಮಾನವ ಸಂಘರ್ಷಕ್ಕೆ ತಾರ್ಕಿಕ ಕಾಣಲು ಸುಪ್ರಿಂಕೋರ್ಟ್ ಮೆಟ್ಟಿಲೇರಲಿರುವ ಸಂಕೇತ್...!
ಗೋಣಿಕೊಪ್ಪಲು, ಜ. 21: ಕೊಡಗು ಜಿಲ್ಲೆಯಲ್ಲಿ ನಿರಂತರ ಆನೆ ಮಾನವ ಸಂಘರ್ಷ, ಹುಲಿ ಹಾವಳಿಗೆ ತಾರ್ಕಿಕ ಅಂತ್ಯ ಕಾಣಲು ದೇಶದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲು ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಜಿಲ್ಲೆಯ 9 ಅರಣ್ಯ ವಲಯಗಳ ವ್ಯಾಪ್ತಿಗಳಲ್ಲಿ ಆನೆ-ಮಾನವ ಸಂಘರ್ಷದಿಂದ ಮಾನವನ ಪ್ರಾಣ ಹಾನಿ, ಹುಲಿ ದಾಳಿಯಿಂದ ರೈತರ ಜಾನುವಾರುಗಳ ಬಲಿ ಇದರಿಂದ ನೊಂದ ಕುಟುಂಬಗಳಿಗೆ ಸರ್ಕಾರವು ನೀಡಿರುವ ಪರಿಹಾರದ ವಿಚಾರವಾಗಿ ಮಾಹಿತಿ ಹಕ್ಕಿನಲ್ಲಿ ದಾಖಲೆಗಳನ್ನು ಪಡೆದಿರುವ ಇವರು ಸುಪ್ರೀಂಕೋರ್ಟ್‍ನ ಉನ್ನತ ವಕೀಲರಿಂದ ಈ ಬಗ್ಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ.
1998ರಲ್ಲಿ ಅರಣ್ಯ ದಿನಗೂಲಿ ನೌಕರರ ರಾಮು ಕಾಡಾನೆ ದಾಳಿಯಿಂದ ಮೃತಪಟ್ಟ ಘಟನೆಯಿಂದ ಪ್ರಸ್ತುತ ವರ್ಷದವರೆಗೂ ಮಾಹಿತಿಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲಿದ್ದಾರೆ. ನ್ಯಾಯಾಲಯವು ಸರ್ಕಾರದ ಅಂಕಿ ಅಂಶಗಳನ್ನು ಪುರಸ್ಕಾರ ಮಾಡಬೇಕಾಗಿ ರುವುದರಿಂದ ಅಧಿಕೃತವಾಗಿಯೇ ಇಲಾಖೆಯಿಂದ ಅಂಕಿ ಅಂಶಗಳನ್ನು ಪಡೆಯಲಾಗಿದೆ. ಸರ್ಕಾರ ನೋಂದಾಯಿತ ಸಂಸ್ಥೆಯಿಂದ ಸರ್ವೆ ನಡೆಸಿರುವ ಮಾಹಿತಿ ಪ್ರಕಾರ ಈಗಾಗಲೇ 5,500 ಕಾಡಾನೆಗಳು ರಾಜ್ಯದ ರೈತರ ಕಾಫಿ ತೋಟಗಳಲ್ಲಿ ನೆಲೆ ಕಂಡುಕೊಂಡಿವೆ. ನೆರೆಯ ಕೇರಳ ರಾಜ್ಯದಿಂದ 1100 ಆನೆಗಳು ಹಾಗೂ ತಮಿಳುನಾಡಿನಿಂದ 2000 ಕಾಡಾನೆಗಳು ಕರ್ನಾಟಕವನ್ನು ಪ್ರವೇಶ ಮಾಡಿವೆ. ಕರ್ನಾಟಕದ ಬಂಡಿಪುರ,ತಮಿಳುನಾಡಿನ ಮಧುಮಲೈ, ಕೇರಳ ರಾಜ್ಯದ ವೈನಾಡು ಪ್ರದೇಶಗಳು ಈ ಮೂರು ರಾಜ್ಯದ ವ್ಯಾಪ್ತಿಗೆ ಬರುವ ‘ನೀಲ್‍ಗಿರೀಶ್ ಬಯೋಸ್ಪೀಯರ್’ ಆಗಿದೆ. ಇದು ಒಂದೇ ರಾಜ್ಯಕ್ಕೆ ಸೀಮಿತವಾಗಿರದ ಕಾರಣ ಬೆಳೆ ನಾಶ, ಸಾವು-ನೋವು ನಡೆಯುತ್ತಲೇ ಇವೆ.
ಕಾಡಾನೆಗಳ ಹಾವಳಿಗೆ ಕಾರ್ಮಿಕರು ಹೆಚ್ಚಾಗಿ ಬಲಿಯಾಗುತ್ತಿರುವುದು ಅಂಕಿ ಅಂಶಗಳು ದೃಢಪಡಿಸಿವೆ. ಬಹುತೇಕ ಕಾರ್ಮಿಕರು ದಾಖಲೆ ಇರುವ ಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭವೇ ಇಂತಹ ದುರಂತಗಳು ಸಂಭವಿಸಿವೆ. ಕಾಡಾನೆಗಳು ಕಾಡಿನಲ್ಲಿ ಇರಬೇಕಾಗಿದೆ. ಬದಲಾಗಿ ಇವುಗಳು ಕಾಫಿ ತೋಟದಲ್ಲಿ ಆಶ್ರಯ ಪಡೆಯುತ್ತಿವೆ. ವೈಜ್ಞಾನಿಕವಾಗಿ ಕಂದಕ ನಿರ್ಮಾಣವಾಗದಿರುವುದು, ಅವೈಜ್ಞಾನಿಕವಾಗಿ ಭೂ ಪರಿವರ್ತನೆಗಳು,ಭೂ ಕಬಳಿಕೆಗಳು ಆಗಿರುವುದರಿಂದ ಇಂತಹ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಿದೆ. ಕಾಡಿನಲ್ಲಿ ಹಣ್ಣು ಹಂಪಲು ಮರಗಳು ಬೆಳೆಸದಿರುವುದು ವನ್ಯ ಜೀವಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ಹಾಗೂ ಅರಣ್ಯದಲ್ಲಿ ಹೊಂಡಗಳಿಗೆ ನೀರು ಪೂರೈಕೆ ಆಗದಿರುವುದರಿಂದ ಕಾಡಾನೆಗಳು ಸಹಜವಾಗಿಯೇ ಆಹಾರ ಹುಡುಕುತ್ತಾ ನಾಡಿನತ್ತ ಮುಖ ಮಾಡಿವೆ.
ಇಂತಹ ಘಟನೆಗಳು ಸಂಭವಿಸಿದಾಗ ಕೇವಲ ಕಿರಿಯ ಅಧಿಕಾರಿಗಳು ಇವುಗಳ ಜವಾಬ್ದಾರಿ ಹೊರುತ್ತಿರುವುದರಿಂದ ಉನ್ನತ ಮಟ್ಟದಿಂದ ಅರಣ್ಯ ಅಧಿಕಾರಿಗಳಿಗೆ ಇಲ್ಲಿಯ ನೈಜ್ಯ ಪರಿಸ್ಥಿತಿ ಅರಿವಿಗೆ ಬರುತ್ತಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಾಡಾನೆ ದಾಳಿಯಿಂದ ಸಾವು ಸಂಭವಿಸಿದ ಹಾಗೂ ಅಂಗವಿಕಲಗೊಂಡಿರುವ 136 ಕುಟುಂಬಗಳನ್ನು ಭೇಟಿ ಮಾಡಿ ಇವರ ಪರಿಸ್ಥಿತಿಯನ್ನು ಅವಲೋಕಿಸಿರುವ ಇವರು ಘಟನೆಗೆ ನೈಜ ಕಾರಣಗಳನ್ನು ಪಡೆದಿದ್ದಾರೆ.
ನಿರಂತರ ಹುಲಿ ದಾಳಿಯಿಂದ ರೈತರ ಜಾನುವಾರುಗಳು ಬಲಿಯಾಗುತ್ತಿವೆ. ಇದರಿಂದ ರೈತನ ಸಂಕಷ್ಟ ಮತ್ತಷ್ಟು ಕಗ್ಗಂಟ್ಟಾಗಿದೆ. ಇಲಾಖೆಯು ನೀಡುವ ಪರಿಹಾರ ಏನೇನೂ ಸಾಲದು. ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುವ ಹುಲಿಗಳ ಸೆರೆಗೆ ರಾತ್ರಿ ಕಾರ್ಯಾಚರಣೆ ನಡೆಸುತ್ತಿಲ್ಲ. ರಾತ್ರಿ ವೇಳೆಯಲ್ಲಿಯೇ ಹುಲಿ ಸಂಚಾರವಿದ್ದರೂ ಕಾರ್ಯಾಚರಣೆಗೆ ಮಾತ್ರ ಅವಕಾಶವಿಲ್ಲ. ಆದ್ದರಿಂದ ಹುಲಿ ಸೆರೆ ಹಿಡಿಯಲು ಹಿನ್ನಡೆಯಾಗಿದೆ. ಕಾನೂನಿನಲ್ಲಿ ಬದಲಾವಣೆ ತರಬೇಕಾಗಿದೆ. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ, ಗುತ್ತಿಗೆ ನೌಕರರಿಗೆ ಭದ್ರತೆ, ಗುಣಮಟ್ಟದ ಗಸ್ತು ವಾಹನ, ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ ಸಹಕಾರ ನೀಡದಿರುವುದು. ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡದಿರುವುದು ಕೂಡ ಕೋರ್ಟಿನಲ್ಲಿ ಗಮನ ಸೆಳೆಯಲಿವೆ.
ಉನ್ನತ ತಜ್ಞರ ಸಮಿತಿಯ ನೇಮಕ, ವೈಜ್ಞಾನಿಕ ಕಂದಕ ನಿರ್ಮಾಣ ಸಾವಿಗೀಡಾಗುವ ಕುಟುಂಬದ ವ್ಯಕ್ತಿಗೆ ಸರ್ಕಾರಿ ನೌಕರಿ ಹಾಗೂ ರೂ. 25 ಲಕ್ಷ ಪರಿಹಾರ, ಅಂಗವೈಕಲ್ಯಗೊಂಡರೆ ಪರಿಹಾರ ಹಾಗೂ ಅಂಗವಿಕಲ ಮೀಸಲಾತಿ ಅಡಿಯಲ್ಲಿ ಸರ್ಕಾರಿ ನೌಕರಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ನೇರ ಹೊಣೆ ಮಾಡುವುದು, ಮೂರು ರಾಜ್ಯದ ಅರಣ್ಯ ಸಚಿವರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಸಭೆ ಆಯೋಜಿಸುವುದು, ಮೂರು ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಒಟ್ಟಾಗಿ ಸಭೆ ನಡೆಸಿ ಚರ್ಚೆ ನಡೆಸುವುದು, ಕೇಂದ್ರ ಪರಿಸರ ಇಲಾಖೆಯ ಮೂಲಕ ಪ್ರಧಾನಮಂತ್ರಿ ಬಳಿಗೆ ಸಮಸ್ಯೆ ಕೊಂಡೊಯ್ಯುವುದು, ಕೇಂದ್ರ ಹಾಗೂ ರಾಜ್ಯದಿಂದ ಇದಕ್ಕಾಗಿ ಹಣ ಬಿಡುಗಡೆಗೊಳಿಸುವುದು ಸೇರಿದಂತೆ ಅನೇಕ ವಿಚಾರಗಳನ್ನು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸುವ ಮೂಲಕ ಇವುಗಳಿಗೆ ಪರಿಹಾರ ಕಂಡುಕೊಳ್ಳಲು ತೀರ್ಮಾನ ಕೈಗೊಂಡಿದ್ದಾರೆ.
ಕಾಡಾನೆ ಹಾವಳಿಗೆ ತಾರ್ಕಿಕ ಅಂತ್ಯ ಕಾಣಲು ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸಭೆ ಸೇರುವ ಮೂಲಕ ಕಾಡಾನೆ ಹಾವಳಿಯನ್ನು ತಪ್ಪಿಸಲು ವೈಜ್ಞಾನಿಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆಸುವ ಮೂಲಕ ಅಂತಿಮ ತೀರ್ಮಾನಕ್ಕೆ ತರಬೇಕಾಗಿದೆ. ಇವರು ಕೈಗೊಂಡ ತೀರ್ಮಾನಗಳನ್ನು ಈ ಮೂರು ರಾಜ್ಯದ ಅರಣ್ಯ ಮಂತ್ರಿಗಳೊಂದಿಗೆ ಆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ಇಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಕೇಂದ್ರ ಪರಿಸರ ಇಲಾಖೆಯ ಮೂಲಕ ದೇಶದ ಪ್ರಧಾನಿಗಳ ಗಮನಕ್ಕೆ ತರಬೇಕಾಗಿದೆ. ಇದಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಆಯಾಯ ರಾಜ್ಯವು ಸೇರಿದಂತೆ ಕೇಂದ್ರದಿಂದ ಅನುದಾನ ಬಿಡುಗಡೆಗೊಳಿಸುವ ಮೂಲಕ ಅವಶ್ಯವಿರುವ ಕಡೆ ಆನೆ ಕಂದಕಗಳು, ರೈಲ್ವೆ ಕಂಬಿಗಳ ಬೇಲಿ, ಸೋಲಾರ್ ಬೇಲಿಗಳು ನಿರ್ಮಾಣ ವಾಗಬೇಕಾಗಿದೆ.
ಇವುಗಳಿಂದ ಕಾಡಾನೆಗಳನ್ನು ಕಾಡಿನಲ್ಲಿಯೇ ಉಳಿಸುವ ಪ್ರಯತ್ನ ಸಫಲವಾಗುವ ಭರವಸೆ ಇವರದ್ದಾಗಿದೆ. 10 ಕಾಡಾನೆ ಇದ್ದಲ್ಲಿ ಕೇವಲ ಎರಡು ಕಾಡಾನೆಗಳನ್ನು ಮಾತ್ರ ಸೆರೆ ಹಿಡಿಯುವ ವಿಚಾರದಲ್ಲಿ ಇಲಾಖೆಯು ಕೈಗೊಳ್ಳುತ್ತಿರುವ ತೀರ್ಮಾನಗಳು ಪ್ರಯೋಜನಕಾರಿ ಇಲ್ಲದಿರುವು ದರಿಂದ ಇದನ್ನು ಕೂಡ ನ್ಯಾಯಾ ಲಯದಲ್ಲಿ ಪ್ರಶ್ನಿಸಲಾಗುವುದು.
- ಹೆಚ್.ಕೆ. ಜಗದೀಶ್