ಕ್ರೀಡೆಯ ತವರಾದ ಕೊಡಗು ಅಸಂಖ್ಯ ಕ್ರೀಡಾ ಮೂರ್ತಿಗಳ ನಿರಂತರ ಸಾಧನೆಯಿಂದಾಗಿ ದಿನೇ ದಿನೇ ಕ್ರೀಡಾಕೀರ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದೆ. ದೇಶದ ಭೂಪಟದಲ್ಲಿ ಕೊಡಗು ಜಿಲ್ಲೆ ವಿಶೇಷ ಸ್ಥಾನ ಗಿಟ್ಟಿಸಿಕೊಳ್ಳಲು ಇದು ಕೂಡ ಪ್ರಮುಖ ಕಾರಣವಾಗಿದೆ.
ಕೊಡಗಿನ ಕ್ರೀಡಾಕಲಿಗಳ ಪ್ರಮುಖ ಪಟ್ಟಿಯಲ್ಲಿರುವ ಈ ಮಹಿಳಾ ಸಾಧಕಿ, ಕ್ರೀಡೆಯಲ್ಲಿ ಸಾಧನೆಗೈಯಲು ವಯಸ್ಸು, ವೃತ್ತಿ ಮತ್ತು ಕೌಟುಂಬಿಕ ವ್ಯವಸ್ಥೆ ಅಡ್ಡಿ ಬರುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ. ಕ್ರೀಡೆ ಇವರಿಗೆ ರಕ್ತಗತವಾಗಿ ಬಂದ ಬಳುವಳಿ. ಚಿಕ್ಕಂದಿನಿಂದಲೇ ಕ್ರೀಡೆಗೆ ಮೊದಲ ಆದ್ಯತೆ ನೀಡುತ್ತಾ ಬಂದವರು ಇವರು. ವಿವಾಹವಾಗಿ ಕೌಟುಂಬಿಕ ವ್ಯವಸ್ಥೆಗೆ ಹೊಂದಿಕೊಂಡು ಮನೆಯ ವ್ಯವಹಾರ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಯಿದ್ದರೂ ತನ್ನ ರಕ್ತದಲ್ಲಿ ಅಡಗಿರುವ ಕ್ರೀಡೆಗೆ ‘ನ್ಯಾಯ’ ಒದಗಿಸಿದ ಛಲಗಾರ್ತಿ ಗೃಹಿಣಿ ಇವರು. ‘ನಿನೆ’್ನ ಮತ್ತು ‘ಇಂದು’ ಕ್ರೀಡೆಯನ್ನೇ ಮೈಗೂಡಿಸಿ ಕೊಂಡಿರುವ, ನಾಳೆಯೂ ಕ್ರೀಡೆಯಲ್ಲಿಯೇ ಒಲವು ಹೊಂದಿರುವ ಈ ಮಹಿಳೆ ಕ್ರೀಡೆಯ ತವರಾದ ಕೊಡಗಿನ ಅಪ್ಪಟ ಪ್ರತಿಭೆ. ಇವರೇ ‘ಹ್ಯಾಟ್ರಿಕ್ ರಾಣಿ’ ಎಂಬ ಹೆಗ್ಗಳಿಕೆಯ ಬೊಪ್ಪಂಡ ಕುಸುಮಾ ಭೀಮಯ್ಯ.
ಕ್ರೀಡಾ ಕುಟುಂಬದ ಹಿನ್ನೆಲೆಯಿಂದ ಬಂದ ಇವರು, ತಮ್ಮ ಮುಂದಿನ ಪೀಳಿಗೆಯನ್ನೂ ಕ್ರೀಡೆಯಲ್ಲಿ ಮುಂದುವರೆಸುವಂತೆ ಸಂಕಲ್ಪಿಸಿ ಅದಕ್ಕಾಗಿ ಬುನಾದಿ ಕಲ್ಪಿಸಲು ಇದೀಗ ಪಣತೊಟ್ಟಂತಿದೆ. ಈ ಕಾರಣಕ್ಕಾಗಿಯೇ ತಮ್ಮ 12 ವರ್ಷ ಪ್ರಾಯದ ಮಗಳನ್ನು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ತಯಾರಿ ಮಾಡುತ್ತಿದ್ದು, ಭಾರತೀಯ ಶಾಲಾ ಪಂದ್ಯಾವಳಿ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ಐಸಿಎಸ್ಸಿ ವಿಭಾಗದ ಶಾಲಾ ತಂಡವನ್ನು ರಾಷ್ಟ್ರಮಟ್ಟದಲ್ಲಿ ಈಕೆ ಪ್ರತಿನಿಧಿಸಿದ್ದಾಳೆ. ತಮ್ಮ ಮುದ್ದಿನ ಮಗಳನ್ನು ರಾಷ್ಟ್ರಮಟ್ಟದ ಕ್ರೀಡಾತಾರೆಯಾಗಿ ರೂಪುಗೊಳಿಸಬೇಕೆಂಬ ಹೆಗ್ಗಳಿಕೆ ಕುಸುಮಾ ಅವರದು.
ಕುಸುಮಾ ಅವರು ಹುಟ್ಟಿದ್ದು ಕೊಡಗಿನ ವೀರಾಜಪೇಟೆ ತಾಲೂಕಿನ ಬೇತ್ರಿಯಲ್ಲಿ 1980ರಲ್ಲಿ ಕಂಬೀರಂಡ ಕಿಟ್ಟು ಕಾಳಪ್ಪ ಮತ್ತು ಮುತ್ತಮ್ಮ ದಂಪತಿಗಳ ಎರಡನೇ ಪುತ್ರಿಯಾಗಿ ಜನಿಸಿದ ಇವರು 1990ರಿಂದ 1997 ರವರೆಗೆ ಸ್ಪೋಟ್ರ್ಸ್ ಅಥಾರಿಟಿ ಆಫ್ ಇಂಡಿಯದ (ಸಾಯಿ) ಕ್ರೀಡಾಪಟು ವಾಗಿ ಮಡಿಕೇರಿ, ಮೈಸೂರು ಹಾಗೂ ಮಧ್ಯಪ್ರದೇಶದ ಗ್ವಾಲಿಯಾರ್‍ನಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಅಲ್ರೌಂಡರ್ ಆಗಿರುವ ಇದೀಗ 40 ವರ್ಷ ಪ್ರಾಯದ ಕುಸುಮ ಭೀಮಯ್ಯ ಅವರ ಸಾಧನೆ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು.
ಮೂಲತಃ ಕ್ರೀಡಾಪಟುವಾಗಿದ್ದ ತಮ್ಮ ತಂದೆಯವರಿಂದ ದೊರೆಯುತ್ತಿದ್ದ ನಿರಂತರ ಪ್ರೋತ್ಸಾಹದ ಪಲವಾಗಿ ಚಿಕ್ಕ ವಯಸ್ಸಿನಲ್ಲಿಯೇ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದರು. ದೇಶದ ಅನೇಕ ರಾಜ್ಯಗಳಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾ ತರಬೇತಿಗಳಲ್ಲಿ ಭಾಗವಹಿಸಿದ್ದಾರೆ. ಸಾಯಿಯಿಂದ ತಯಾರಿಸಲ್ಪಟ್ಟ ಕ್ರೀಡಾತಾರೆಯಾಗಿ ಹೊರಬಂದ ಕುಸುಮಾ ಇದೀಗ ತಮ್ಮ ಪ್ರಾಯದ ಮಿತಿಯನ್ನು ಲೆಕ್ಕಿಸದೆ ‘ಓಟ’ದಲ್ಲಿ ನಿರತರಾಗಿದ್ದಾರೆ.
ಗೋಣಿಕೊಪ್ಪಲುವಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ವೃತ್ತಿಯಲ್ಲಿ ನಿರತರಾಗಿದ್ದ ಅವಧಿಯಲ್ಲೂ ತಮ್ಮ ಕ್ರೀಡಾ ಸಾಧನೆ ಮೆರೆದಿದ್ದರು. ಇದೀಗ ಮಗಳ ಕ್ರೀಡಾ ಭವಿಷ್ಯಕ್ಕಾಗಿ ತಮ್ಮ 14 ವರ್ಷದ ವೃತ್ತಿ ಜೀವನಕ್ಕೆ ಸ್ವಯಂ ನಿವೃತ್ತಿ ಘೋಷಿಸಿ, ಮಗಳನ್ನು ಕ್ರೀಡೆಯಲ್ಲಿ ತಯಾರು ಮಾಡುತ್ತಿದ್ದಾರೆ. ಇದೀಗ ಮತ್ತೊಮ್ಮೆ ಕ್ರೀಡಾಕ್ಷೇತ್ರದತ್ತ ಮುಖ ಮಾಡಿರುವ ಕುಸುಮಾ ಅವರು, ಕ್ರೀಡೆಯಲ್ಲಿ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.
2019ರ ಡಿಸೆಂಬರ್ 2ರಿಂದ 7ರವರೆಗೆ ಮಲೇಷಿಯಾದ ಕುಚಿಂಗ್‍ನಲ್ಲಿ ನಡೆದ 21ನೇ ಏಷಿಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. 4ಘಿ400ಮೀ ಓಟದಲ್ಲಿ ಚಿನ್ನ, 400 ಮೀ. ಓಟದಲ್ಲಿ ಬೆಳ್ಳಿ ಮತ್ತು 800ಮೀ. ಓಟದಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇದಕ್ಕೂ ಮೊದಲು ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 35 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 2 ಚಿನ್ನ, 3 ಬೆಳ್ಳಿ ಪದಕ ಪಡೆದು ಮಾಸ್ಟರ್ಸ್ ಅಥ್ಲೆಟಿಕ್ ವಿಭಾಗದ ಅಂತರ್ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. 2019ರ ನವೆಂಬರ್ 3 ರಿಂದ 5ರವರೆಗೆ ನಡೆದ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್‍ನ 35 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 3 ಚಿನ್ನ ಮತ್ತು 1 ಬೆಳ್ಳಿ ಪದಕ ಗೆಲ್ಲುವುದರ ಮೂಲಕ ಮುಂಬರುವ ಫೆಬ್ರವರಿಯಲಿ ಗುಜರಾತಿನ ವಡೋದರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹಿರಿಯರ ಅಥ್ಲೆಟಿಕ್ಸ್ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಓಟದ ಸ್ಪರ್ಧೆಗಳಲ್ಲದೆ ಇತರ ಕ್ರೀಡೆಗಳಾದ ಹಾಕಿ, ವಾಲಿಬಾಲ್, ಕ್ರಿಕೇಟ್, ತ್ರೊಬಾಲ್, ಈಜು ಹಾಗೂ ಬ್ಯಾಡ್ಮಿಂಟನ್‍ನಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಇದಲ್ಲದೆ ರಾಮೇಶ್ವರದಲ್ಲಿ ನಡೆದ ಅಂತರ್ ವಿಶ್ವವಿದ್ಯಾಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗ್ವಾಲಿಯರ್ ತಂಡವನ್ನು ಪ್ರತಿನಿಧಿಸಿದ್ದಾರೆ. ಸತತ 8 ವರ್ಷಗಳ ಕಾಲ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಪಾಲ್ಗೊಂಡಿರುವ ಕುಸುಮಾ ಕಗ್ಗೋಡ್ಲುವಿನಲ್ಲಿ ನಡೆಯುವ ರಾಜ್ಯಮಟ್ಟದ ಕೆಸರುಗದ್ದೆ ನಾಟಿ ಓಟದಲ್ಲಿಯೂ ಕೂಡ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. 2004ರಲ್ಲಿ ‘ಹ್ಯಾಟ್ರಿಕ್ ರಾಣಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2003ರಲ್ಲಿ ಬೊಪ್ಪಂಡ ಭೀಮಯ್ಯ ಅವರನ್ನು ವಿವಾಹವಾದ ಕುಸುಮಾ 12 ವರ್ಷದ ದಿಯಾ ಭೀಮಯ್ಯ ಮತ್ತು 8 ವರ್ಷದ ವಿಶಾಲ್ ಉತ್ತಪ್ಪ ಈ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ.
ಕುಟುಂಬದ ಕ್ರೀಡಾಸಕ್ತಿ
ತಮ್ಮ ತವರುಮನೆಯಾದ ಕಂಬೀರಂಡ ಮನೆತನದ ಇವರ ಇಡೀ ಕುಟುಂಬವೇ ಕ್ರೀಡಾ ಲೋಕದ ಸಾಧಕ ಕ್ರೀಡಾಪಟುಗಳು ಎನ್ನಬಹುದು. ಇವರ ತಂದೆ ಕಂಬೀರಂಡ ಕಿಟ್ಟು ಕಾಳಪ್ಪ ಅವರು ರಾಜ್ಯಮಟ್ಟದ ಓಟಗಾರನಾಗಿ ಖ್ಯಾತಿ ಗಳಿಸಿದವರು. ಅಲ್ಲದೆ ಕೊಡಗಿನ ಹಾಕಿಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿದೆ. ಮೂರ್ನಾಡಿನ ಪದವಿ ಕಾಲೇಜಿನಲ್ಲಿ ದೈಹಿಕ ನಿರ್ದೇಶಕರಾಗಿರುವ ಸಹೋದರ ಬೋಪಣ್ಣ ಅವರು ವಿಶ್ವವಿದ್ಯಾಲಯ ಮಟ್ಟದ ಹಾಕಿಪಟುವಾಗಿ ಮಿಂಚಿದವರು. ಅಲ್ಲದೆ ದೈಹಿಕ ಶಿಕ್ಷಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳೆರಡರಲ್ಲೂ ಚಿನ್ನದ ಪದಕ ಪಡೆದುಕೊಂಡವರು. ಅಂತರರಾಷ್ಟ್ರೀಯ ಖ್ಯಾತಿಯ ಮಹಿಳಾ ಹಾಕಿಪಟು ಮಲ್ಲಮಾಡ ಪೊನ್ನಮ್ಮ ಬೋಪಣ್ಣ ಅವರ ಪತ್ನಿಯಾಗಿ ದ್ದಾರೆ. ಕುಸುಮ ಅವರ ಸಹೋದರಿ ಮಾಳೇಟಿರ ಸೀತಮ್ಮ ಅಥ್ಲೆಟಿಕ್ಸ್‍ನಲ್ಲಿ ಹಿಂದೆ ಗಮನಸೆಳೆದವರು. ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಸುಮ ಅವರ ಪತಿ ಬೊಪ್ಪಂಡ ಭೀಮಯ್ಯ ಅವರು ಕೂಡ ಅತ್ಯುತ್ತಮ ಶಟಲ್ ಬ್ಯಾಡ್ಮಿಂಟನ್ ಪಟುವಾಗಿದ್ದಾರೆ. ಇದೀಗ ಚಿಕ್ಕವಯಸ್ಸಿನಲ್ಲೇ ಬ್ಯಾಡ್ಮಿಂಟನ್‍ನಲ್ಲಿ ಮಿಂಚುತ್ತಿರುವ ಕುಸುಮ ಅವರ ಮಗಳು ದಿಯಾ ಕೂಡ ಬ್ಯಾಡ್ಮಿಂಟನ್‍ನಲ್ಲಿ ಭವಿಷ್ಯದ ಕ್ರೀಡಾಪಟು ಆಗಿದ್ದಾಳೆ.
?ರಫೀಕ್ ತೂಚಮಕೇರಿ