ಕುಶಾಲನಗರ, ಜ. 21: ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಜಾನಪದ ಕ್ರೀಡಾಕೂಟ-2020 ಕಾರ್ಯಕ್ರಮ ಕುಶಾಲನಗರದ ಪೊಲೀಸ್ ಗ್ರೌಂಡ್‍ನಲ್ಲಿ ನಡೆಯಿತು. ಉದ್ಯಮಿ ಹಾಗೂ ಸಮಾಜ ಸೇವಕ ಉಮಾಶಂಕರ್ ಆಯೋಜನೆ ಮಾಡಿದ್ದ ಕ್ರೀಡಾಕೂಟಕ್ಕೆ ಗೋವಿಗೆ ನವಧಾನ್ಯ ತಿನಿಸುವ ಮೂಲಕ ಪ.ಪಂ. ಸದಸ್ಯ ರೂಪಾ ಉಮಾಶಂಕರ್ ಚಾಲನೆ ನೀಡಿದರು. ಗ್ರಾಮೀಣ ಕ್ರೀಡೆಯಾದ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ತೆಂಗಿನಕಾಯಿಗೆ ಕಲ್ಲು ಹೊಡೆಯುವುದು, ಸ್ಲೋ ಸೈಕಲ್ ರೇಸ್, ಬೈಕ್ ರೇಸ್, ಭಾರದ ಗುಂಡು ಎಸೆತ, ಬಕೆಟ್ ಗೆ ಬಾಲು ಹಾಕುವುದು ಮತ್ತಿತರ ಸ್ಪರ್ಧೆಗಳು ಜರುಗಿದವು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನ ಮತ್ತು ಭಾಗವಹಿಸಿದ ಜನರಿಗೆ ಲಕ್ಕಿ ಡಿಪ್ ಮೂಲಕ 10 ಅದೃಷ್ಟಶಾಲಿ ವ್ಯಕ್ತಿಗಳಿಗೆ 10 ಗ್ರಾಂ ಬೆಳ್ಳಿ ನಾಣ್ಯ ಮತ್ತು 5 ಅದೃಷ್ಟಶಾಲಿ ವ್ಯಕ್ತಿಗಳಿಗೆ ವಿ-ಗಾರ್ಡ್ ಮಿಕ್ಸಿ ಬಹುಮಾನವಾಗಿ ನೀಡಲಾಯಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ಉದ್ಯಮಿ ಉಮಾಶಂಕರ್, ಜನಪದ ಸೊಗಡಿನ ಕ್ರೀಡಾಕೂಟಗಳ ಬಗ್ಗೆ ಯುವ ಪೀಳಿಗೆಗೆ ಪರಿಚಯಿಸುವುದರೊಂದಿಗೆ ಮತ್ತಷ್ಟು ಜನಪ್ರಿಯಗೊಳಿಸುವ ಸದುದ್ದೇಶ ಹೊಂದಲಾಗಿದೆ. ಸಾರ್ವಜನಿಕರು ಒಗ್ಗೂಡಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ದೇಶೀಯ ಕ್ರೀಡೆಗಳನ್ನು ಪ್ರೋತ್ಸಾಹಿಸುವುದೊಂದಿಗೆ ಸಾಮರಸ್ಯ ವೃದ್ಧಿಗೆ ಕೈಜೋಡಿಸುವಂತಾಗಬೇಕಿದೆ ಎಂದರು. ಈ ಸಂದರ್ಭ ಪ.ಪಂ. ಸದಸ್ಯರಾದ ಅಮೃತ್ ರಾಜ್, ಶೇಖ್ ಕಲೀಮುಲ್ಲಾ, ಜಗದೀಶ್, ಕ್ರೀಡಾ ಕೂಟದ ಪ್ರಮುಖರಾದ ಕೆ.ಎನ್. ದೇವರಾಜ್, ಚಂದ್ರು ಮತ್ತಿತರರು ಇದ್ದರು.