ಮಡಿಕೇರಿ, ಜ. 20: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಪಾಯಕಾರಿ ಬಾಂಬ್ ಪತ್ತೆಯಾಗಿರುವ ಬೆನ್ನಲ್ಲೇ; ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದಂತೆ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯು ಸಂಪೂರ್ಣ ಜಾಗೃತ ವ್ಯವಸ್ಥೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.ಮುಖ್ಯವಾಗಿ ಜಿಲ್ಲೆಯ ಹಾರಂಗಿ ಜಲಾಶಯ; ಪ್ರಮುಖ ಪಟ್ಟಣಗಳು ಸೇರಿದಂತೆ ಮಡಿಕೇರಿಯ ರಾಜ್ಯ ಸಾರಿಗೆ ಮತ್ತು ಖಾಸಗಿ ಬಸ್ ನಿಲ್ದಾಣಗಳು; ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಕಣ್ಗಾವಲು ಇರಿಸುವದರೊಂದಿಗೆ; ಯಾವದೇ ವಿಧ್ವಂಸಕ ಕೃತ್ಯಗಳಿಗೆ ಅವಕಾಶವಾಗ ದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.ಹಾರಂಗಿ ಜಲಾಶಯಕ್ಕೆ ಕೊಡಗು ಪೊಲೀಸ್ ಶಸಸ್ತ್ರಪಡೆಯ ತುಕಡಿ ನಿಯೋಜನೆಯೊಂದಿಗೆ; ಭದ್ರತಾ ಕ್ರಮ ಕೈಗೊಂಡಿದ್ದು; ಅಲ್ಲಿನ ಪೊಲೀಸ್ ಉಪಠಾಣೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ‘ಶಕ್ತಿ’ಯ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ದಕ್ಷಿಣ ಕೊಡಗಿನ ಕುಟ್ಟಗಡಿ ಪ್ರದೇಶ ಹಾಗೂ ಮಾಕುಟ್ಟ ವ್ಯಾಪ್ತಿಯಲ್ಲಿ ಹೆಚ್ಚಿನ ಭದ್ರತೆಯೊಂದಿಗೆ; ಕೊಡಗಿನತ್ತ ಬರುವ ಹಾಗೂ ಹಿಂತೆರಳುವ ವಾಹನಗಳ ತಪಾಸಣೆ ನಡೆಸಲು ಕ್ರಮಕೈಗೊಳ್ಳಲಾಗಿದೆ. ಮಾತ್ರವಲ್ಲದೆ; ಉತ್ತರಕೊಡಗಿನ ಕರಿಕೆ, ಸಂಪಾಜೆ, ಕುಶಾಲನಗರ, ಶಿರಂಗಾಲ, ಬಾಣಾವರ, ಕೊಡ್ಲಿಪೇಟೆ ಮುಂತಾದೆಡೆಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಸಾರ್ವಜನಿಕ ಸ್ಥಳಗಳು ಹಾಗೂ ಸೂಕ್ಷ್ಮ (ಮೊದಲ ಪುಟದಿಂದ) ಪ್ರದೇಶಗಳಲ್ಲಿ ಪೊಲೀಸರ ನಿಯೋಜನೆಯೊಂದಿಗೆ; ಜಿಲ್ಲೆಯ ಮೂರು ಉಪವಿಭಾಗಗಳ ಡಿವೈಎಸ್‍ಪಿಗಳ ನೇತೃತ್ವದಲ್ಲಿ ನಿರಂತರ ಗಸ್ತು ಮೂಲಕ ಕಟ್ಟೆಚ್ಚರದೊಂದಿಗೆ; ಸಂಶಯಾಸ್ಪದ ವಸ್ತುಗಳು ಹಾಗೂ ವ್ಯಕ್ತಿಗಳ ಕುರಿತು ಮುನ್ನೆಚ್ಚರಿಕೆ ವಹಿಸಬೇಕೆಂದು ಎಸ್‍ಪಿ ಡಾ. ಸುಮನ್ ಡಿ.ಪಿ. ನಿರ್ದೇಶಿಸಿದ್ದಾರೆ.
ಅಲ್ಲದೆ ಕೊಡಗಿನಲ್ಲಿಯೂ ತರಬೇತಿ ನಿರತ ಬಾಂಬ್ ನಿಷ್ಕ್ರೀಯ ತಂಡವಿದ್ದು; ಅವಶ್ಯಕತೆ ಇರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಸ್‍ಪಿ ಅವರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಮೇಲಧಿಕಾರಿಗಳ ಮಾರ್ಗ ದರ್ಶನದಂತೆ ಕೊಡಗಿನ ಜನತೆಯ ಸುರಕ್ಷಾ ದೃಷ್ಟಿಯಿಂದ ಪೊಲೀಸರನ್ನು ಸನ್ನದ್ಧಗೊಳಿಸಲಾಗುತ್ತಿದೆ ಎಂದು ಭರವಸೆಯ ನುಡಿಯಾಡಿದ್ದಾರೆ.