ಶ್ರೀಮಂಗಲ, ಜ. 20: ಜಿಲ್ಲೆಯಲ್ಲಿ ಬಿಜೆಪಿಯನ್ನು ಸಧೃಡವಾಗಿ ಕಟ್ಟಲು ಬುನಾದಿ ಹಾಕಿರುವ ಎಲ್ಲಾ ಹಿರಿಯರ ಮಾರ್ಗದಶನದೊಂದಿಗೆ ಪಕ್ಷವನ್ನು ತಳಮಟ್ಟದಲ್ಲಿ ಬೆಳೆಸುತ್ತಿರುವ ಕಾರ್ಯಕರ್ತರ ಸಲಹೆ ಪಡೆದು ಪಕ್ಷವನ್ನು ಇನ್ನಷ್ಟು ಸುಭದ್ರಗೊಳಿಸುವುದಾಗಿ ಹಾಗೂ ವರಿಷ್ಠರು ವಿಶ್ವಾಸವಿಟ್ಟು ನೀಡಿರುವ ಸ್ಥಾನದಲ್ಲಿ ಪ್ರಾಮಾಣಿಕವಾಗಿ, ಯಶಸ್ವಿಯಾಗಿ ಕರ್ತವ್ಯ ನಿಭಾಯಿಸುವುದಾಗಿ ಬಿ.ಜೆ.ಪಿ.ಯ ನೂತನ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಅವರು ಅಭಿಪ್ರಾಯ ಪಟ್ಟರು.
ಬಿರುನಾಣಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಬಿನ್ ದೇವಯ್ಯ ಹಾಗೂ ವೀರಾಜಪೇಟೆ ಮಂಡಳ ಅಧ್ಯಕ್ಷ ನೆಲ್ಲೀರ ಚಲನ್ಕುಮಾರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಆಂತರಿಕ ಸಂವಿಧಾನವನ್ನು ಬಲಗೊಳಿಸುತ್ತಾ ಪಕ್ಷವನ್ನು ಮೌಲ್ಯಯುತವಾಗಿ ಮತ್ತು ಶಕ್ತಿಯುತವಾಗಿ ಕಟ್ಟಲು ರಾಷ್ಟ್ರೀಯ ಬಿ.ಜೆ.ಪಿ. ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ತೀರ್ಮಾನದ ಮೇಲೆ ಮಹತ್ತರವಾದ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ನಾನು ಸಣ್ಣ ವಯಸ್ಸಿನಿಂದಲೇ ಪಕ್ಷಕ್ಕೆ ದುಡಿದಿದ್ದನ್ನು ಬಹುಶಃ ಪರಿಗಣಿಸಿ ಈ ಸ್ಥಾನ ನೀಡಿದ್ದಾರೆ ಎಂದು ಭಾವಿಸಿದ್ದೇನೆ ಎಂದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಇತರ ಎಲ್ಲಾ ಪಕ್ಷಗಳು ಒಂದಾಗುತ್ತಿವೆ. ಕಾರ್ಯಕರ್ತರ ಶ್ರಮದಿಂದ ರಾಜ್ಯ ಮತ್ತು ರಾಷ್ಠದಲ್ಲಿ ಬಿ.ಜೆ.ಪಿ. ಅಧಿಕಾರ ಹಿಡಿಯಲು ಸಾಧ್ಯವಾಗಿದೆ ಎಂದು ಹೇಳಿದರು.
ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಧ್ಯಕ್ಷನಾಗಿ ಆಯ್ಕೆ ಮಾಡುವ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆನೀಡಿದರು.
ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ ರಾಬಿನ್ ದೇವಯ್ಯ ಹಾಗೂ ಚಲನ್ ಕುಮಾರ್ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುವ ವಿಶ್ವಾಸವಿದೆ. ಇಬ್ಬರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸೇವೆ ಸಲ್ಲಿಸುತ್ತಾ ಹಲವು ದಶಕದಿಂದ ಪಕ್ಷವನ್ನು ಸಂಘಟಿಸಿರುವ ಅನುಭವ ಹೊಂದಿದ್ದಾರೆ ಎಂದರು.
ವೀರಾಜಪೇಟೆ ಮಂಡಲದ ನಿಕಟಪೂರ್ವ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ ವಿರೋಧಿಗಳು ಪೌರತ್ವ ಕಾಯಿದೆ ವಿರುದ್ಧ ಗೊಂದಲ ಮೂಡಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿ.ಜೆ.ಪಿ. ಸರಕಾರವಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿರುನಾಣಿ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಅಣ್ಣಳಮಾಡ ರಾಯ್ ಚಿಣ್ಣಪ್ಪ ವಹಿಸಿದ್ದರು. ಹಿರಿಯ ಮುSಂಡ ಬೊಟ್ಟಂಗಡ ರಾಜು ಸ್ವಾಗತಿಸಿ ಗ್ರಾ.ಪಂ ಸದಸ್ಯ ಬೊಟ್ಟಂಗಡ ಗಿರೀಶ್ ವಂದಿಸಿದರು. ವೇದಿಕೆಯಲ್ಲಿ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪಕ್ಷದ ಬೂತ್ ಅಧ್ಯಕ್ಷರುಗಳಾದ ಕರ್ತಮಾಡ ಮಿಲನ್ ಮೇದಪ್ಪ, ಕಾಯಪಂಡ ಮೋಟಯ್ಯ, ಬೊಟ್ಟಂಗಡ ಈಶ್ವರ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬೊಟ್ಟಂಗಡ ಮುತ್ತಪ್ಪ, ಗೋಣಿಕೊಪ್ಪ ಎ.ಪಿ.ಎಂ.ಸಿ. ಸದಸ್ಯೆ ಬೊಳ್ಳಜೀರ ಸುಶೀಲ ಹಾಜರಿದ್ದರು.