ವೀರಾಜಪೇಟೆ, ಜ. 21: ವೀರಾಜಪೇಟೆ ಬಳಿಯ ಬಾಳುಗೋಡಿನಲ್ಲಿ ಪೈಸಾರಿಯಲ್ಲಿ ಗುಡಿಸಲು ಕಟ್ಟಿಕೊಂಡು ನಿವೇಶನಕ್ಕಾಗಿ ಧರಣಿ ಮುಷ್ಕರ ನಡೆಸುತ್ತಿರುವ ವಸತಿ ರಹಿತ ಪ್ರತಿಭಟನಾಕಾರರು ಇಂದು ಕೂಡ ಮುಷ್ಕರವನ್ನು ಮುಂದುವರೆಸಿದ್ದು ಕಂದಾಯ ಇಲಾಖೆ ಪ್ರತಿಭಟನಾಕಾರರನ್ನು ಗುರುತಿಸಿ ಜಾಗದ ಅಳತೆ ಮಾಡಿ ಹಕ್ಕು ಪತ್ರ ನೀಡುವ ತನಕ ಈ ಜಾಗದಿಂದ ಕದಲುವುದಿಲ್ಲ ಎಂದು ಕಂದಾಯ ಇಲಾಖೆಗೆ ಪ್ರತಿಭಟನೆಗಾರರು ಗಡುವು ನೀಡಿದ್ದಾರೆ.

ಸುಮಾರು 60 ಕುಟುಂಬಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಬಾಳುಗೋಡಿನ ಸರ್ವೇ ನಂ 337/1ರಲ್ಲಿರುವ ಜಾಗದ ಸುತ್ತ ಮುತ್ತ ಕಾಡು ಕಡಿದು ಜಾಗವನ್ನು ನೆಲ ಸವi ಮಾಡುತ್ತಿದ್ದಾರೆ. ಕೆಲವರು ನೆಲಸಮ ಮಾಡಿದ ಜಾಗದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡಿದ್ದು ಶಾಶ್ವತ ಸೂರಿಗಾಗಿ ಹೋರಾಟ ಮುಂದುವರೆಸಿದ್ದಾರೆ.

ಈಗ ಪ್ರತಿಭಟನಾಕಾರರು ಪೈಸಾರಿಯಿಂದ ಕದಲುವುದಿಲ್ಲವೆಂಬ ತೀರ್ಮಾನಕ್ಕೆ ಬಂದಿರುವ ಹಿನ್ನೆಲೆ ಕಂದಾಯ ಅಧಿಕಾರಿಗಳು, ವಸತಿ ರಹಿತರು ಅತಿಕ್ರಮಿಸಿರುವ ಜಾಗವನ್ನು ಸರ್ವೆ ಮಾಡಿ ಪೈಸಾರಿ ಜಾಗ ಎಷ್ಟಿದೆ ಎಂಬುದನ್ನು ಕಂಡು ಹಿಡಿಯಲು ಸರ್ವೆ ಇಲಾಖೆಗೆ ಆದೇಶಿಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳ ಪ್ರಕಾರ ಈಗಿನ ದಾಖಲೆಯಂತೆ 337/1ರಲ್ಲಿ ಐದು ಎಕರೆ ಪೈಸಾರಿ ಇದೆ. ಐದು ಎಕರೆ ಪೈಕಿ ಒಂದು ಎಕರೆಯನ್ನು ಕಸ ವಿಲೇವಾರಿಗಾಗಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಮಂಜೂರು ಮಾಡುವುದು. ಉಳಿದ 4 ಎಕರೆ ಪೈಸಾರಿ ಜಾಗವನ್ನು ಎಲ್ಲ ಸೌಲಭ್ಯಗಳಿಂದ ಕೂಡಿದ ಲೇಔಟ್ ನಿರ್ಮಾಣ ಮಾಡಿ ವಸತಿ ರಹಿತ ಫಲಾನುಭವಿಗಳಿಗೆ ಹಂಚಲು ತೀರ್ಮಾನಿಸಿರುವುದಾಗಿ ತಿಳಿದು ಬಂದಿದೆ.

ವಿವಿಧ ನಾಯಕರುಗಳಿಂದ ಕಂದಾಯ

ಹಾಗೂ ವಸತಿ ಸಚಿವರ ಭೇಟಿ

ಬಾಳುಗೋಡು ಪೈಸಾರಿಯಲ್ಲಿ ಮುಷ್ಕರ ಹೂಡಿರುವ ವಸತಿ ರಹಿತ ಕುಟುಂಬಗಳ ಪರವಾಗಿ ಕೆಲವು ನಾಯಕರುಗಳು ನಿನ್ನೆ ದಿನ ಬೆಂಗಳೂರಿನಲ್ಲಿ ಕಂದಾಯ ಹಾಗೂ ವಸತಿ ಸಚಿವರನ್ನು ಖುದ್ದು ಭೇಟಿ ಮಾಡಿ ವಸತಿ ರಹಿತರ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದು ಮನವಿ ಸಲ್ಲಿಸಿದ್ದಾರೆ. ವಸತಿ ರಹಿತ ಫಲಾನುಭವಿಗಳ ಮುಷ್ಕರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುವದಾಗಿ ವಸತಿ ಸಚಿವರು ನಿಯೋಗಕ್ಕೆ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.