ಮಡಿಕೇರಿ, ಜ. 21: ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಕೊಡಗು ಜಿಲ್ಲಾ ಸಾಹಿತ್ಯ ಸಂಘಟನೆ ಮತ್ತು ರಾಜ್ಯ ಮುಕ್ತಕ ಕವಿ ಪರಿಷತ್ತು ವತಿಯಿಂದ ಮಡಿಕೇರಿ ನಗರದ ಹೊಸ ಬಡಾವಣೆಯ ಅಶೋಕ ಭವನದಲ್ಲಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಪ್ರಾಯೋಜಕತ್ವದಲ್ಲಿ ತಾ. 19 ರಂದು ಮುಕ್ತಕ ವಿಚಾರಗೋಷ್ಠಿ ಉಪನ್ಯಾಸ ಮತ್ತು ಸ್ವರಚಿತ ಮುಕ್ತಕ ವಾಚನ ಗೋಷ್ಠಿಯು ನಡೆಯಿತು.
‘ಶಕ್ತಿ’ಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಉದ್ಘಾಟಿಸಿದ ಬಳಿಕ ಇಂದಿನ ಹಾಗೂ ಹಿಂದಿನ ಕಾಲದ ಕವಿತೆಗಳಲ್ಲಿ ಕಾಣಬಹುದಾದ ವ್ಯತ್ಯಾಸಗಳನ್ನು ವಿವರಿಸುತ್ತಾ ಕವಿತೆಗಳು ಹೇಗಿರಬೇಕು ಎಂದು ಸ್ವತಃ ಕವಿತೆ ವಾಚನ ಮಾಡಿ ತಿಳಿಸಿದರು.
ವಿದ್ವಾನ್ ಕೃ.ಪಾ. ಮಂಜುನಾಥ್ ಮುಕ್ತಕದ ಕುರಿತಾದ ಇತಿಹಾಸ ಮತ್ತು ಸಾಧ್ಯತೆ ಬಾಧ್ಯತೆಗಳ ಕುರಿತು ಅದ್ಭುತ ವಿಚಾರಗಳನ್ನು ಮಂಡಿಸಿ ನೆರೆದಿದ್ದ ಮುಕ್ತಕ ಕವಿ ಸಂಕುಲವನ್ನು ಪ್ರೋತ್ಸಾಹಿ ಸುವುದರೊಂದಿಗೆ ಡಿವಿಜಿಯವರ ಮುಕ್ತಕಗಳು ನಿಜವಾಗಿಯೂ ಭಗವದ್ಗೀತೆಗೆ ಸಮವೆಂದು ನುಡಿದರು.
ರಾಜ್ಯ ಮುಕ್ತಕ ಕವಿ ಪರಿಷತ್ತಿನ ಅಧ್ಯಕ್ಷ ಎಂ. ಮುತ್ತುಸ್ವಾಮಿ ಮುಕ್ತಕ ರಚನೆಯ ಒಳ ಹೊರಗಿನ ಸಮಸ್ಯೆಯನ್ನು ಬಗೆಹರಿಸಿಕೊಟ್ಟರು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ತಿಪ್ಪೇಸ್ವಾಮಿ ಸಿ., ಸಕಲೇಶಪುರದ ಲಲಿತಾ ಎಸ್., ಕವಯತ್ರಿ ಹೆಚ್.ಡಿ. ಕೋಟೆಯ ಕಿರಣ್ ಶಿಡ್ಲೆಹಳ್ಳಿ ಮತ್ತು ಕವಿತಾ ಕಿರಣ್ ದಂಪತಿಗಳು ಮೈಸೂರಿನ ಮುತ್ತುಸ್ವಾಮಿ, ಪಾರ್ವತಿ, ಕೆ. ಲಕ್ಷ್ಮೀ, ಕೊಡಗಿನ ಶೋಭಾ ಸುಬ್ಬಯ್ಯ, ಗಿರೀಶ್ ಕಿಗ್ಗಾಲು, ಜಯಲಕ್ಷ್ಮಿ ಎಂ.ಬಿ., ಕಸ್ತೂರಿ ಗೋವಿಂದಮ್ಮಯ್ಯ, ವತ್ಸಲಾ ಶ್ರೀಶ, ಪಿ.ಎಸ್. ವೈಲೇಶ ಇವರುಗಳು ತಮ್ಮ ಸ್ವರಚಿತ ಮುಕ್ತಕಗಳನ್ನು ಪ್ರಾಸಬದ್ಧವಾಗಿ ವಾಚಿಸಿದರು.
ಮುಂದುವರಿದಂತೆ ಕಾರ್ಯಕ್ರಮದಲ್ಲಿ ಗಿರೀಶ್ ಕಿಗ್ಗಾಲು ಅವರಿಂದ ಪದಬಂಧ, ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತಿನ ಸಂಚಾಲಕ ಪಿ.ಎಸ್. ವೈಲೇಶ ನಿರೂಪಿಸಿ ಆಶಯ ನುಡಿಯಾಡಿದರು. ಶೋಭ ಸುಬ್ಬಯ್ಯ ಪ್ರಾರ್ಥಿಸಿ ಸ್ವಾಗತಿಸಿದರು. ಕಸ್ತೂರಿ ಗೋವಿಂದಮ್ಮಯ್ಯ ವಂದಿಸಿದರು. ಶಿವಮ್ಮ ವೈಲೇಶ, ನರ್ಸರಿ ವಸಂತ ಮತ್ತಿತರರಿದ್ದರು.