ಸಿದ್ದಾಪುರ, ಜ. 20: ತೋಟದಲ್ಲಿ ಮರ ಕಡಿಯುತ್ತಿದ್ದ ಸಂದರ್ಭ, ಮರದ ಕೊಂಬೆ ಬಿದ್ದು ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ತ್ಯಾಗತ್ತೂರು ಗ್ರಾಮದ ನಿವಾಸಿ ಎಂ.ಎಂ ಶಿವಕುಮಾರ್ ಎಂಬವರ ತೋಟದಲ್ಲಿ ಕುಶಾಲನಗರದ ವ್ಯಕ್ತಿಯೋರ್ವ ಮರಗಳನ್ನು ಖರೀದಿಸಿದ್ದಾರೆ. ಇಂದು ಮರದ ಕೊಂಬೆ ಕಡಿಯುತ್ತಿದ್ದ ಸಂದರ್ಭ ಮರದ ಕೆಳ ಭಾಗದಲ್ಲಿ ಕೊಂಬೆಗಳನ್ನು ಸವರುತ್ತಿದ್ದ ಕಾರ್ಮಿಕ ವಾಲ್ನೂರು ಬಾಳೆಗುಂಡಿ ನಿವಾಸಿ ವಸಂತ (22)ನ ತಲೆಗೆ ಕೊಂಬೆ ಯೊಂದು ಬಿದ್ದ ಪರಿಣಾಮ ಗಂಭೀರ ಗಾಯವಾಗಿತ್ತು. ಕೂಡಲೇ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಕೊಂಡೊಯ್ಯುವ ಮಾರ್ಗ ಮಧ್ಯೆ ಕಾರ್ಮಿಕ ಸಾವನ್ನಪ್ಪಿದ್ದಾರೆÉ. ಘಟನೆ ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.