ಮಡಿಕೇರಿ, ಜ. 21: ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಮೀಣ ಜನತೆಯ ಆರೋಗ್ಯದೊಂದಿಗೆ, ಶಿಶುಗಳು ಮತ್ತು ಬಾಣಂತಿಯರು, ಗರ್ಭಿಣಿಯರ ಸಾವು ನೋವು ತಡೆಗಟ್ಟುವ ದಿಸೆಯಲ್ಲಿ ಜಾರಿಗೊಳಿಸಿರುವ ಸಂಚಾರಿ ಆರೋಗ್ಯ ಸೇವೆಯಲ್ಲಿ ಭಾರೀ ವಂಚನೆಯೊಂದಿಗೆ ಹಣ ದುರುಪಯೋಗದ ಶಂಕೆ ವ್ಯಕ್ತಗೊಳ್ಳ ತೊಡಗಿದೆ. ಈ ದಂಧೆಯಲ್ಲಿ ಕೆಲವಷ್ಟು ಜನಪ್ರತಿನಿಧಿಗಳೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂದಿಯೂ ಶಾಮೀಲಾಗಿರುವ ಸಂಗತಿ ಬಹಿರಂಗಗೊಂಡಿದೆ.ಈ ಶಂಕೆಗೆ ತಾಜಾ ಉದಾಹರಣೆ ಎಂಬಂತೆ ಕೊಡಗಿನಲ್ಲಿ ಆರೋಗ್ಯ ನಿರ್ವಹಣೆ ಸಲುವಾಗಿ ಸರಕಾರವು ಮಡಿಕೇರಿ ವಿಧಾನಸಭಾ ಕ್ಷೇತ್ರ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಿರಂತರ ಸೇವೆಗಾಗಿ ಎರಡು ಸಂಚಾರಿ ವೈದ್ಯಕೀಯ ಸೇವಾ ಘಟಕದ ‘ಆ್ಯಂಬುಲೆನ್ಸ್’ಗಳನ್ನು ಒದಗಿಸಿದೆ. ಈ ಸಂಚಾರಿ ಮೊಬೈಲ್ ವಾಹನಗಳು ನಿತ್ಯವೂ ಕನಿಷ್ಟ 8 ರಿಂದ 12 ಗ್ರಾಮೀಣ ಹಳ್ಳಿಗಳಿಗೆ ತೆರಳಿ ಜನತೆಯ ಆರೋಗ್ಯ ಪರೀಕ್ಷಿಸಿ ಔಷದೋಪಚಾರ ನೀಡಬೇಕಿದೆ.

ವೈದ್ಯಕೀಯ ತಂಡ : ಈ ಸಂಚಾರಿ ಘಟಕದಲ್ಲಿ ಓರ್ವ ತಜ್ಞ ವೈದ್ಯರೂ ಸೇರಿದಂತೆ ಹಿರಿಯ ಆರೋಗ್ಯ ಶುಶ್ರೂಷಕರು, ಔಷಧಿ ವಿತರಕರು, ಪ್ರಯೋಗಾಲಯ ತಜ್ಞರು, ಕಿರಿಯ ಶುಶ್ರೂಷಕರು, ಚಾಲಕ ಸೇರಿದಂತೆ ನಾಲ್ಕನೇ ದರ್ಜೆ ನೌಕರರನ್ನು ಒಳಗೊಂಡ ತಂಡ ತೆರಳಬೇಕಿದೆ, ಮಾತ್ರವಲ್ಲದೆ ಗ್ರಾಮೀಣ ಜನತೆಯ ಆರೋಗ್ಯ ತಪಾಸಣೆಯನ್ನು ತಜ್ಞ ವೈದ್ಯರು ಖುದ್ದು ಪರೀಕ್ಷಿಸಿ, ತುರ್ತು ಔಷದೋಪಚಾರ ನೀಡುವುದರೊಂದಿಗೆ, ಅಗತ್ಯವೆನಿಸಿದಲ್ಲಿ ಸೂಕ್ತ ಚಿಕಿತ್ಸೆಗೆ ಶಿಫಾರಸು ಮಾಡಬೇಕಿದೆ.

ಹೆಸರಿಗಷ್ಟೇ ವಾಹನ : ‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ, ಜಿಲ್ಲೆಯ ಎರಡು ಘಟಕಗಳ ವಾಹನಗಳು ಆಗೊಮ್ಮೆ, ಈಗೊಮ್ಮೆ ಹಳ್ಳಿಗಳಿಗೆ ತೆರಳುತ್ತಿದ್ದರೂ, ಎರಡು ಮೊಬೈಲ್ ವಾಹನಗಳಲ್ಲಿ ತಜ್ಞ ವೈದ್ಯರೇ ಇಲ್ಲ! ಬದಲಾಗಿ ಚಾಲಕ ಹಾಗೂ ಓರ್ವ ಶುಶ್ರೂಷಕಿ ತೆರಳಿ ನೆಪ ಮಾತ್ರಕ್ಕೆ ಗ್ರಾಮೀಣ ಜನತೆಗೆ ಶೀತ, ನೆಗಡಿ, ಕೆಮ್ಮು ಇತ್ಯಾದಿ ದೈನಂದಿನ ಸಮಸ್ಯೆಗಳಿಗೆ ಮಾತ್ರೆ ಕೊಟ್ಟು ಜಾಗ ಖಾಲಿ ಮಾಡುತ್ತಿರುವದು ಬಹಿರಂಗಗೊಂಡಿದೆ.

ಮೋಸವೇ ಬಂಡವಾಳ : ಈ ಯೋಜನೆಯಿಂದ ದಾವಣಗೆರೆಯ ಸಂಸ್ಥೆಯೊಂದಕ್ಕೆ ಸಂಬಂಧಪಟ್ಟವರು ಮೋಸವನ್ನೇ ಬಂಡವಾಳ ಮಾಡಿಕೊಂಡು; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರತಿ ತಿಂಗಳು ಸುಮಾರು ರೂ. 6.40 ಲಕ್ಷ ಹಣವನ್ನು ಪಡೆಯುತ್ತಿರುವ ಆರೋಪವಿದೆ.

ಸರಕಾರದ ಯೋಜನೆ : ಸ್ವತಃ ಇಂಥ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಶಿಶು ಮತ್ತು ತಾಯಂದಿಯರ ಮೃತ್ಯು ತಡೆಯೊಂದಿಗೆ ದೀರ್ಘಕಾಲದ ಖಾಯಿಲೆಗಳಾದ ಮಧುಮೇಹ, ರಕ್ತದೊತ್ತದ, ಅಪಸ್ಮಾರ, ಸುದೀರ್ಘ ದಮ್ಮು, ಉಬ್ಬಸ, ಸಂಧಿವಾತ, ಆಮ್ಲಜಠರ ಖಾಯಿಲೆ ಇತ್ಯಾದಿಗಳ ನಿವಾರಣೆಗೆ ಒತ್ತು ನೀಡುವಂತೆ; ಸರಕಾರ ಈ ಯೋಜನೆ ರೂಪಿಸಿದ್ದಾಗಿದೆ.

ಇನ್ನು ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಕ್ಷಯ, ಏಡ್ಸ್, ಸನ್ನಿಶೀತ, ಅತಿಸಾರ ಭೇದಿ ಇತ್ಯಾದಿ ಇಳಿಮುಖಗೊಳಿಸಿ, ಗ್ರಾಮೀಣ ಜನರಿಗೆ ಗ್ರಾಮದ ಮನೆ ಬಾಗಿಲಿನಲ್ಲಿ ಚಿಕಿತ್ಸೆಯೊಂದಿಗೆ ವಿವಿಧ ಖಾಯಿಲೆಗಳ ಕುರಿತು ಪರೀಕ್ಷಿಸಿ ಶುಶ್ರೂಷೆ ನೀಡಬೇಕೆಂದು ನಿರ್ದೇಶನವಿದೆ. ಈ ಎಲ್ಲವನ್ನು ಗಾಳಿಗೆ ತೂರಲಾಗಿದ್ದು, ಜಿ.ಪಂ. ವ್ಯಾಪ್ತಿಯ ಸಂಬಂಧಪಟ್ಟ ಪ್ರತಿನಿಧಿಗಳು ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಆಯಕಟ್ಟಿನ ಅಧಿಕಾರಿಗಳು ಮೌನವಹಿಸಿ ಗ್ರಾಮೀಣ ಜನತೆಯ ಆರೋಗ್ಯ ಸೇವೆಗೆ ಸಂಚಾಕಾರ ತಂದೊಡ್ಡುತ್ತಿರುವ ಶಂಕೆ ವ್ಯಕ್ತಗೊಳ್ಳುವಂತಾಗಿದೆ..

ಇಂಥ ಸನ್ನಿವೇಶದಲ್ಲಿ ಹೊರ ಜಿಲ್ಲೆಯ ಅಥವಾ ಕೇವಲ ‘ಲೆಟರ್‍ಹೆಡ್’ ಸಂಘಟನೆಯ ಮಂದಿ ಮತ್ತು ಆರೋಗ್ಯ ಇಲಾಖೆಯ ಆಯಕಟ್ಟಿನ ಅಧಿಕಾರಿ ಗಳೊಂದಿಗೆ; ನಮ್ಮ ಪ್ರತಿನಿಧಿಗಳು ಜನತೆಯ ಆರೋಗ್ಯದೊಂದಿಗೆ ಚೆಲ್ಲಾಟ ವಾಡದೆ; ಕೇಂದ್ರ ಮತ್ತು ರಾಜ್ಯ ಸರಕಾರಿ ಯೋಜನೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ನಿರರ್ಥಕ ವ್ಯಯಗೊಳ್ಳುವುದಕ್ಕೆ ಕಡಿವಾಣ ಹಾಕಬೇಕಿದೆ. -ಶ್ರೀಸುತ