ಮಡಿಕೇರಿ, ಜ. 19: ಶತಮಾನಗಳ ಹಿಂದೆ ನಶಿಸಿ ಹೋಗಿರುವ ಶ್ರೀ ರಾಜರಾಜೇಶ್ವರಿ ದೇವಾಲಯವನ್ನು ಸದ್ಭಕ್ತರ ನೆರವಿನಿಂದ ಇಲ್ಲಿನ ಮಂಗಳಾದೇವಿ ನಗರದಲ್ಲಿ ಪುನರ್ ನಿರ್ಮಾಣ ಗೊಳಿಸಲಾಗುತ್ತಿದೆ. ನೂತನ ದೇವಾಲಯದ ಪುನರ್‍ಪ್ರತಿಷ್ಠಾಪನಾ ಉತ್ಸವವು ಬರುವ ಏಪ್ರಿಲ್‍ನಲ್ಲಿ ನಡೆಯಲಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರ ಫಲದಂತೆ ಒಂದೊಮ್ಮೆ ಈ ದೇವಾಲಯ ಪ್ರಾಕೃತಿಕ ವಿಕೋಪದಿಂದ ನಾಶಗೊಂಡಿರುವುದಾಗಿ ತಿಳಿದುಬಂದಿದೆ. ಪರಿಣಾಮ ಮಂಗಳಾದೇವಿನಗರ ಹಾಗೂ ಸುತ್ತಮುತ್ತ ಸಾಕಷ್ಟು ದುರಂತಗಳು ಎದುರಾಗಿದ್ದು, ಪುರಾತನ ದೇವಾಲಯದ ಜೀರ್ಣೋದ್ಧಾರ ದೊಂದಿಗೆ; ದೇವಿಯನ್ನು ಮರು ಪ್ರತಿಷ್ಠಾಪನೆ ಮಾಡಿ ಪೂಜಿಸಿದರೆ ಒಳಿತಾಗಲಿದೆ ಎಂದು ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ನೇತೃತ್ವದಲ್ಲಿ ಸದ್ಭಕ್ತರ ಸಮಿತಿಯೊಂದು ರಚನೆಗೊಂಡಿದೆ. ಪೊಳಲಿಯ ಸುಬ್ರಹ್ಮಣ್ಯ ಶಾಸ್ತ್ರಿಗಳ ನಿರ್ದೇಶನದಂತೆ ಅಷ್ಟಮಂಗಲ ಪ್ರಶ್ನೆ ಇರಿಸಿ, ಈಗಾಗಲೇ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿದೆ. ಶ್ರೀ ರಾಜರಾಜೇಶ್ವರಿ ದೇವಿಯ ಶಿಲಾ ಗುಡಿಯೊಂದಿಗೆ; ಎದುರಿಗೆ ತೀರ್ಥ ಮಂಟಪ ಸಹಿತ, ಪುರಾತನ ಶೈಲಿಯಲ್ಲಿ ಸುಂದರವಾಗಿ ರೂಪಿಸಲಾಗುತ್ತಿದೆ.

ಅಲ್ಲದೆ ಪಕ್ಕದಲ್ಲಿ ಶ್ರೀ ಮಹಾಗಣಪತಿ ಗುಡಿ ಹಾಗೂ ನಾಗದೇವತೆಯ ನೆಲೆ ನಿರ್ಮಿಸಲಾಗುತ್ತಿದೆ. ಜೀರ್ಣೋದ್ಧಾರ ಸಮಿತಿ ಪದಾಧಿಕಾರಿ ಕೆ.ಹೆಚ್. ಚೇತನ್ ಪ್ರಕಾರ ಅಂದಾಜು ರೂ. 75 ಲಕ್ಷ ವೆಚ್ಚದಲ್ಲಿ ನೂತನ ದೇವಾಲಯ ತಲೆಯೆತ್ತಲಿದೆ. ಕಿರಿದಾದ ನಿವೇಶನದಲ್ಲಿ ಈ ನೂತನ ಶೈಲಿಯ ಗುಡಿಗಳನ್ನು ಶಿಲೆಗಳಿಂದ ನಿರ್ಮಿಸಿ, ಮೇಲ್ಚಾವಣಿಗೆ ತಾಮ್ರ ಹೊದಿಕೆ ಹಾಸುತ್ತಿರುವ ಕಾರಣ ಕಾಮಗಾರಿ ವೆಚ್ಚ ಹೆಚ್ಚಾಗುವಂತಾಗಿದೆ.

ಜನಪ್ರತಿನಿಧಿಗಳು ಹಾಗೂ ದಾನಿಗಳ ಸಹಕಾರದಿಂದ ಶ್ರೀ ರಾಜರಾಜೇಶ್ವರಿ ದೇಗುಲ ಕೆಲಸ ಭರದಿಂದ ಸಾಗಿದೆ. ಬರುವ ಏಪ್ರಿಲ್ ಕೊನೆಯ ವಾರದೊಳಗೆ; ಪ್ರತಿಷ್ಠಾಪನೆಯೊಂದಿಗೆ ಸದ್ಭಕ್ತರಿಗೆ ನಿತ್ಯಪೂಜೆ, ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವ ವಿಶ್ವಾಸವಿದ್ದು, ಸಮಿತಿ ಪ್ರಮುಖರು ಈ ದಿಸೆಯಲ್ಲಿ ಶ್ರಮಿಸುತ್ತಿದ್ದಾರೆ ಎಂದು ಅವರು ‘ಶಕ್ತಿ'ಗೆ ತಿಳಿಸಿದ್ದಾರೆ.