*ಗೋಣಿಕೊಪ್ಪಲು, ಜ. 19: ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದಕ್ಕಾಗಿ ಅರಣ್ಯ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದೆ. ನಾಗರಹೊಳೆ ಅರಣ್ಯದ ಮತ್ತಿಗೋಡು, ಮಾವಕಲ್ ಅರಣ್ಯ, ದೇವಮಚ್ಚಿ ಅರಣ್ಯ ಪ್ರದೇಶದ ಹೆದ್ದಾರಿ ಬದಿಯನ್ನು ಸ್ವಚ್ಛಗೊಳಿಸಲಾಗಿದೆ. ರಸ್ತೆ ಬದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಗಿದೆ. ಒಣಗಿದ ಗಿಡಗಂಟಿಗಳಿಗೆ ಬೆಂಕಿ ಕೊಟ್ಟು ಸುಡಲಾಗಿದೆ. ರಸ್ತೆ ಬದಿಯಿಂದ 50 ಮೀಟರ್‍ವರೆಗೆ ಗಿಡಗಂಟಿಗಳನ್ನು ಕಡಿದು ಹಾಕಲಾಗಿದೆ. ತಿತಿಮತಿ ಮಜ್ಜಿಗೆಹಳ್ಳದಿಂದ ಅಳ್ಳೂರಿನವರೆಗೆ ಹುಣಸೂರು ವೀರಾಜಪೇಟೆ ಅಂತರ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಈ ಹೆದ್ದಾರಿಯ ಎರಡು ಬದಿಯನ್ನು ಸ್ವಚ್ಛಗೊಳಿಸಲಾಗಿದೆ.

11 ಕಿ.ಮೀ. ಉದ್ದದ ರಸ್ತೆ ಬದಿಯನ್ನು ಅರಣ್ಯ ಇಲಾಖೆ ಎಚ್ಚರದಿಂದ ನೋಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಮಾವಕಲ್ ಅರಣ್ಯ ಪ್ರದೇಶದ ಪಿರಿಯಾಪಟ್ಟಣ ಆನೆಚೌಕೂರು ಹೆದ್ದಾರಿ ಬದಿಯನ್ನು ಸ್ವಚ್ಛಗೊಳಿಸಲಾಗಿದೆ. ಈ ಅರಣ್ಯ ಪ್ರದೇಶ ಇದೀಗ ನಾಗರಹೊಳೆ ವನ್ಯಜೀವಿ ವಿಭಾಗಕ್ಕೆ ಸೇರಿದೆ. ಹೀಗಾಗಿ ಈ ಭಾಗವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಸ್ತೆಯ ಎರಡು ಬದಿಯಲ್ಲಿ 30 ಮೀಟರ್‍ವರೆಗೆ ಗಿಡಗಂಟಿಗಳನ್ನು ಕಡಿದು ಹಾಕಿದ್ದಾರೆ. ಒಣಗಿದ ಗಿಡಗಳಿಗೆ ಬೆಂಕಿ ಹಾಕಿ ಸುಟ್ಟಿದ್ದಾರೆ.

ಈ ಬಾರಿ ಜನವರಿ ಕಳೆದು ಬೇಸಿಗೆ ಕಾಲಿಟ್ಟಿದ್ದರೂ ರಸ್ತೆ ಬದಿಯ ಅರಣ್ಯ ಒಣಗಿಲ್ಲ. ನವೆಂಬರ್‍ವರೆಗೂ ಮಳೆ ಬಿದ್ದಿದ್ದರಿಂದ ಭೂಮಿಯಲ್ಲಿ ತೇವಾಂಶ ಇರುವುದರಿಂದ ಅರಣ್ಯದ ಗಿಡಗಂಟಿಗಳು ಹಸಿರಾಗಿವೆ. ಜತೆಗೆ ಹುಲ್ಲು ಹಸಿರಾಗಿದೆ. ಜಿಂಕೆಗಳು ಹಸಿರು ಹುಲ್ಲನ್ನು ಮೇಯುತ್ತಾ ರಸ್ತೆ ಬದಿಯಲ್ಲಿ ನಿಂತಿರುವುದು ಪ್ರಯಾಣಿಕರಿಗೆ ಮುದ ನೀಡುತ್ತಿದೆ.

ಎರಡು ವರ್ಷಗಳ ಹಿಂದೆ ಬೆಂಕಿ ಮಾರ್ಗವನ್ನು ಮಾಡದೆ ಇರುವುದರಿಂದ ಮತ್ತಿಗೋಡು ಬಳಿ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ನೂರಾರು ಎಕರೆ ಅರಣ್ಯ ಸುಟ್ಟು ಹೋಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅರಣ್ಯದಲ್ಲಿ ಬೆಂಕಿ ರೇಖೆ ಸಿದ್ಧಗೊಳಿಸಲು ಶ್ರಮಿಸುತ್ತಿದೆ. ನೂರಾರು ಕಾರ್ಮಿಕರನ್ನು ಸೇರಿಸಿಕೊಂಡು ಕೆಲಸ ನಿರ್ವಹಿಸಿದ್ದಾರೆಂದು ಮತ್ತಿಗೋಡು ವಲಯ ಅರಣ್ಯಾಧಿಕಾರಿ ಶಿವಾನಂದ ಲಿಂಗಾಣಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನುಗುಂದ ಮಾವಕಲ್ ಹಾಗೂ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶವನ್ನು ವನ್ಯಜೀವಿ ವಿಭಾಗಕ್ಕೆ ಒಪ್ಪಿಸಲಾಗಿದೆ. ವನ್ಯಜೀವಿ ವಿಭಾಗದವರು ಬೆಂಕಿ ರೇಖೆ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ನಾಗರಹೊಳೆ ಅರಣ್ಯ ಅಪರೂಪದ ವನ್ಯ ಜೀವಿಗಳನ್ನು ಹೊಂದಿರುವ ರಾಷ್ಟ್ರೀಯ ಉದ್ಯಾನವನ. ಇದನ್ನು ಬೇಸಿಗೆಯಲ್ಲಿ ಬೆಂಕಿಯಿಂದ ರಕ್ಷಿಸುವುದಕ್ಕಾಗಿ ಅರಣ್ಯ ಇಲಾಖೆ ಈಗಾಗಲೇ ಸರ್ವ ಸನ್ನದ್ಧವಾಗಿದೆ. ಬೆಂಕಿ ಪತ್ತೆ ಹಚ್ಚುವುದಕ್ಕೆ ಅಲ್ಲಲ್ಲೆ ವೀಕ್ಷಣಾ ಗೋಪುರವನ್ನು ನಿರ್ಮಿಸುತ್ತಿದೆ. ಗಸ್ತು ತಿರುಗುವ ಪಡೆ ಹಾಗೂ ವಿಶೇಷ ಅಗ್ನಿ ನಿಯಂಯತ್ರಣ ಪಡೆಯನ್ನು ನೇಮಿಸಿದೆ.

- ಎನ್.ಎನ್. ದಿನೇಶ್