ಮಡಿಕೇರಿ, ಜ. 19: ಕೊಡಗು ಜಿಲ್ಲೆಗೆ ಬಂದು ಹೋಗುವ ಪ್ರವಾಸಿಗರ ಸಹಿತ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ; ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡಲು ಸಂಬಂಧಿಸಿದ ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರನ್ನು ‘ಶಕ್ತಿ’ ಸಂದರ್ಶಿಸಿದಾಗ ಭವಿಷ್ಯದ ಯೋಜನೆಯ ಕುರಿತು ಮಾಹಿತಿ ನೀಡಿದರು.ಕೊಡಗು - ಕೇರಳ ಗಡಿಯೊಂದಿಗೆ ಮಟ್ಟನೂರಿನಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣಕೊಡಗಿನ ಗಡಿಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗುತ್ತಿದ್ದು; ಈ ದಿಸೆಯಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಅವರು ನೆನಪಿಸಿದರು. ಆ ದಿಕ್ಕಿನಲ್ಲಿ ವೀರಾಜಪೇಟೆಯಲ್ಲಿ ಪ್ರತ್ಯೇಕ ಸಂಚಾರಿ ಪೊಲೀಸ್ ಠಾಣೆÉ ನಿರ್ಮಿಸುವದರೊಂದಿಗೆ ಸಿಬ್ಬಂದಿ ಹೆಚ್ಚಳಕ್ಕೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.ಅಂತೆಯೇ ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿಯೂ ಪ್ರತ್ಯೇಕ ಸಂಚಾರಿ ಪೊಲೀಸ್ ಠಾಣೆಯನ್ನು ನೂತನವಾಗಿ ನಿರ್ಮಿಸುವದು ಸೇರಿದಂತೆ; ವಾಹನಗಳ ನಿಲುಗಡೆ ಇತ್ಯಾದಿ ಮೂಲಭೂತ ಸೌಕರ್ಯಕ್ಕಾಗಿ ಪ್ರಯತ್ನ ನಡೆಸಲಾಗಿದೆ ಎಂದು ಎಸ್‍ಪಿ ಅವರು ತಿಳಿಸಿದರು.ನಿವೇಶನ ಲಭ್ಯ : ಕುಶಾಲನಗರದಲ್ಲೂ ನೂತನ ಸಂಚಾರಿ ಪೊಲೀಸ್ ಠಾಣೆಗಾಗಿ; ಅಲ್ಲಿನ ಗುಂಡೂರಾವ್ ಬಡಾವಣೆಯಲ್ಲಿ ಹೆದ್ದಾರಿ ಪಕ್ಕವೇ 27 ಸೆಂಟ್ ಜಾಗವನ್ನು ಗುರುತಿಸಲಾಗಿದೆ. ಈ ಯೋಜನೆ ಕಾರ್ಯಗತಗೊಂಡರೆ ಮೈಸೂರು - ಮಡಿಕೇರಿ ಹೆದ್ದಾರಿಯಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ನಿಯಂತ್ರಿಸಲು ಕ್ರಮವಹಿಸಲಾಗುವದು ಎಂದು ಅವರು ನೆನಪಿಸಿದರು.
ಮೇಲ್ದರ್ಜೆಗೆ ಪ್ರಸ್ತಾಪ : ಅಂತೆಯೇ ಉತ್ತರ ಕೊಡಗಿನ ಗಡಿಭಾಗದಲ್ಲಿರುವ ಕೊಡ್ಲಿಪೇಟೆ ಪೊಲೀಸ್ ಉಪಠಾಣೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಸರಕಾರವನ್ನು ಕೋರಿದ್ದು; ಆ ಮುಖಾಂತರ ಹಾಸನ - ಕೊಡಗು ಗಡಿಗಳಲ್ಲಿನ ಅಪರಾಧಗಳ ನಿಯಂತ್ರಣಕ್ಕೆ ಕ್ರಮ ವಹಿಸಲು ಸುಲಭವಾಗಲಿದೆ ಎಂದು ಇಂಗಿತ ಹೊರಗೆಡವಿದರು.
ಇನ್ನು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಾರ್ಯ ಒತ್ತಡ ತಗ್ಗಿಸುವದರೊಂದಿಗೆ ವೀರಾಜಪೇಟೆ - ಮಡಿಕೇರಿ ನಡುವೆ ಗ್ರಾಮೀಣ ಜನತೆಗೆ ಸಕಾಲದಲ್ಲಿ ಪೊಲೀಸ್ ನೆರವು ದೊರಕಿಸುವ ಉದ್ದೇಶದಿಂದ; ಮೂರ್ನಾಡು ಪೊಲೀಸ್ ಉಪಠಾಣೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಸರಕಾರಕ್ಕೆ ಪ್ರಸ್ತಾಪ ಕಳುಹಿಸಿರುವದಾಗಿ ಅವರು ವಿವರಿಸಿದರು.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಅಪರಾಧಗಳ ನಿಯಂತ್ರಣದೊಂದಿಗೆ; ರಸ್ತೆ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೊಂಡಿದ್ದು; ಇರತಕ್ಕಂತಹ ಇತರ ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ವಸತಿಗಳಿಗೂ ಕಾಯಕಲ್ಪಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಾ. ಸುಮನ್ ವಿವರಣೆ ನೀಡಿದರು.
ನೂತನ ಪೊಲೀಸ್ ಭವನ : ಇನ್ನೊಂದೆಡೆ ಮಡಿಕೇರಿ ಹೊರವಲಯದಲ್ಲಿ ಕೆ. ನಿಡುಗಣೆ ಗ್ರಮದ ಸರ್ವೆ ನಂ. 01/48ರಲ್ಲಿ 3.10 ಎಕರೆ ಜಾಗದೊಂದಿಗೆ ಪೊಲೀಸ್ ಇಲಾಖೆಯಿಂದ ನೂತನ ಸಮುದಾಯ ಭವನ ನಿರ್ಮಾಣ ಗೊಳ್ಳುತ್ತಿದೆ. ಅಬ್ಬಿಜಲಪಾತಕ್ಕೆ ತೆರಳುವ ಮಾರ್ಗಬದಿ ರೂ. 55 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು; ವಿಶೇಷ ಸಂದರ್ಭಗಳಲ್ಲಿ ಪೊಲೀಸರಿಗೆ ಮಾರ್ಗದರ್ಶನ ಮತ್ತು ಅತಿಥಿಗೃಹವಾಗಿ ಈ ಭವನ ಬಳಕೆಗೊಳ್ಳಲು ಉದ್ದೇಶಿಸಲಾಗಿದೆ ಎಂದು ಎಸ್‍ಪಿ ಸುಳಿವು ನೀಡಿದರು.
ಅಲ್ಲದೆ ಮಡಿಕೇರಿ ನಗರ ಪೊಲೀಸ್ ಠಾಣೆ, ಮಹಿಳಾ ಠಾಣೆ, ಗ್ರಾಮಾಂತರ ಠಾಣೆ ಸಹಿತ ಪೊಲೀಸ್ ಮೈತ್ರಿಭವನ ಮತ್ತು ವಸತಿಗೃಹಗಳಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ; ರಿಪೇರಿ ಕೈಗೊಳ್ಳುತಿರುವದಾಗಿ ಅವರು ಕೆಲಸಗಳ ವಿವರವಿತ್ತರು.
- ಶ್ರೀಸುತ