ಕೂಡಿಗೆ, ಜ. 19: ಇಲ್ಲಿಗೆ ಸಮೀಪ ಐಗೂರು ಗ್ರಾ.ಪಂ. ವ್ಯಾಪ್ತಿಯ ಯಡವನಾಡು ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ನಿರ್ಮಾಣ ಮಾಡಲಾಗಿದ ರೂ. 39 ಲಕ್ಷ ವೆಚ್ಚದ ಸಮುದಾಯದ ಭವನದ ಕಟ್ಟಡವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗ್ರಾಮಗಳಲ್ಲಿ ಇಂತಹ ಸಮುದಾಯ ಭವನಗಳು ನಿರ್ಮಾಣವದಲ್ಲಿ ಗ್ರಾಮದ ರೈತರು, ಯುವಕರು ಒಂದು ಕಡೆ ಸೇರಿ ಗ್ರಾಮ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಸದುಪಯೋಗ ಆಗುತ್ತದೆ. ಗ್ರಾಮದ ಪ್ರಗತಿಗೆ ಸಮುದಾಯ ಭವನಗಳು ಪೂರಕವಾಗುತ್ತವೆ.
ಸಮುದಾಯ ಭವನದ ಉಸ್ತುವಾರಿಯನ್ನು ಸ್ಥಳೀಯ ದೇವಾಲಯ ಸಮಿತಿಯವರು ವಹಿಸಿಕೊಂಡು ಬರುವ ಸಣ್ಣ ಪ್ರಮಾಣ ಹಣದಲ್ಲಿ ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು. ಈ ಸಂದರ್ಭದಲ್ಲಿ ಐಗೂರು ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಎಂ. ರಮೇಶ್, ಸದಸ್ಯೆ ಮಹೇಶ್ವರಿ, ತಾಲೂಕು ಪಂಚಾಯಿತಿ ಸದಸ್ಯೆ ಸಬಿತ ಚೆನ್ನಕೇಶವ, ಗ್ರಾಮದ ಪ್ರಮುಖರಾದ ಶಂಭುಗೌಡ, ಸುಬ್ರಮಣ್ಯ ಸೇರಿದಂತೆ ನೂರಾರು ಗ್ರಾಮಸ್ಥರು ಹಾಗೂ ಇಲಾಖೆಯ ಅಭಿಯಂತರ ರಾಜೇಗೌಡ, ಇಂಜಿನಿಯರ್ ನಾಗರಾಜ್ ಸಹಾಯಕ ಇಂಜಿನಿಯರ್ ಕಿರಣ್ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.